ಕೋಲ್ಕತ್ತಾ: ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲಿನ ನಂತರ ಹಿಂಸಾಚಾರದಿಂದ ಬಳಲುತ್ತಿರುವ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲು ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಇಂದು ಹೋದಾಗ ಸ್ಥಳೀಯರು ಅವರ ಮೇಲೆ ಮೊಟ್ಟೆಗಳನ್ನು ಎಸೆದಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ದಿನಕ್ಕೊಂದು ರಾಜಕೀಯ ಹೈಡ್ರಾಮಾಗಳು ನಡೆಯುತ್ತಿವೆ. ಇತ್ತೀಚೆಗೆ ಟಿಎಂಸಿ ಸಂಸದ ಸೌಗತ್ ರಾಯ್ ಕಾರಿನ ಮೇಲೆ ಮೊಟ್ಟೆ ಎಸೆದು ಕಳ್ಳ ಕಳ್ಳ ಎಂದು ಘೋಷಣೆ ಕೂಗಲಾಗಿತ್ತು. ಅದರ ಬೆನ್ನಲ್ಲಿಯೇ ಮಮತಾ ಬ್ಯಾನರ್ಜಿ ಅಳಿಯ, ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಮೇಲೆ ಮೊಟ್ಟೆ ಎಸೆದು ಚೋರ್ ಚೋರ್ ಎಂದು ಕೂಗಲಾಗಿದೆ.
ದಕ್ಷಿಣ ಪರ್ಗಾನಸ್ 24 ಜಿಲ್ಲೆಯ ಸೋನಾಪುರದಲ್ಲಿ ಈ ಘಟನೆ ನಡೆದಿದೆ. ಕೋಲ್ಕತ್ತಾದ ಅಪೋಲೋ ಆಸ್ಪತ್ರೆಗೆ
ಅಭಿಷೇಕ್ ದಾಖಲಾಗಿದ್ದು, ಮಮತಾ ಬ್ಯಾನರ್ಜಿ ಯೋಗಕ್ಷೇಮ ವಿಚಾರಿಸಿದ್ದಾರೆ.
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಳಿ ಶರ್ಟ್ ಮತ್ತು ಕ್ರಿಕೆಟ್ ಹೆಲ್ಮೆಟ್ ಧರಿಸಿದ್ದ ಅಭಿಷೇಕ್ ಬ್ಯಾನರ್ಜಿಯನ್ನು ಸ್ಥಳೀಯರು ಸುತ್ತುವರಿದು ತಳ್ಳಾಟ ನೂಕಾಟ ನಡೆಸಿದ್ದಾರೆ. ಜನರ ಕೂಗಾಟದ ನಡುವೆಯೇ ಬ್ಯಾನರ್ಜಿ ನಡೆದುಕೊಂಡು ಹೋಗಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ, ಬ್ಯಾನರ್ಜಿಯನ್ನು ಗುಂಪಿನಿಂದ ಹೊರಗೆ ಕರೆದೊಯ್ದಿದ್ದಾರೆ.
ಈ ಘಟನೆಯ ಹಿಂದೆ ಆಡಳಿತ ಪಕ್ಷದ ಕೈವಾಡವಿದೆ ಎಂಬ ತೃಣಮೂಲ ನಾಯಕರ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ.















