ರಾಜೀನಾಮೆ ಕೊಡಬೇಡಿ ಸರ್'- ಗುತ್ತಿಗೆ ನೌಕರರ ಕಣ್ಣೀರು: ಸಿಎಂ ನಿವಾಸ ಕಾವೇರಿ ಮುಂದೆ ಅಭಿಮಾನಿಗಳಿಂದ ಘೋಷಣೆ

Coastal Bulletin
ರಾಜೀನಾಮೆ ಕೊಡಬೇಡಿ ಸರ್'- ಗುತ್ತಿಗೆ ನೌಕರರ ಕಣ್ಣೀರು: ಸಿಎಂ ನಿವಾಸ ಕಾವೇರಿ ಮುಂದೆ ಅಭಿಮಾನಿಗಳಿಂದ ಘೋಷಣೆ

ಬೆಂಗಳೂರು: ಮುಖ್ಯಮಂತ್ರಿ ಗಾದಿಯಿಂದ ಇಳಿಯುವಂತೆ ಹೈಕಮಾಂಡ್ ಸೂಚನೆ ಸಿಗುತ್ತಿದ್ದಂತೆ ಸಿದ್ದರಾಮಯ್ಯ ಮೌನಕ್ಕೆ ಜಾರಿದ್ದಾರೆ. ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಬೆಳಗ್ಗೆ ಅವರು ಸಚಿವರೊಂದಿಗೆ ಉಪಹಾರ ಕೂಟ ನಡೆಸಲಿದ್ದು, ಇದಾದ ಬಳಿಕ ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.

ಬುಧವಾರ ಸಂಜೆ ವಿಧಾನಸೌಧಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಕಂಡು ಗುತ್ತಿಗೆ ನೌಕರರು ಕಣ್ಣೀರು ಹಾಕಿದ ಪ್ರಸಂಗ ನಡೆಯಿತು. ರಾಜೀನಾಮೆ ಕೊಡಬೇಡಿ ಸರ್ ಎಂದು ಅವರು ಅಲವತ್ತುಕೊಂಡರು. ಇದನ್ನು ಕಂಡು ಮಾತನಾಡದ ಸಿಎಂ, ಕೈ ಸನ್ನೆ ಮಾಡಿ ನೌಕರರನ್ನು ಸಂತೈಸಿ ನಿರ್ಗಮಿಸಿದರು. ಈ ವೇಳೆ ನೌಕರರು ಸಿದ್ದರಾಮಯ್ಯಗೆ ಜೈಕಾರ ಕೂಗಿದರು.

ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಬಗ್ಗೆ ಸುದ್ದಿ ಹರಿದಾಡುತ್ತಿದ್ದಂತೆ ಕುಮಾರಕೃಪಾ ರಸ್ತೆಯಲ್ಲಿರುವ ಸಿಎಂ ಅಧಿಕೃತ ನಿವಾಸ ಕಾವೇರಿ ಮುಂದೆ ನೂರಾರು ಅಭಿಮಾನಿಗಳು ಜಮಾವಣೆಗೊಂಡು ಕಾಂಗ್ರೆಸ್ ಹೈಕಮಾಂಡ್ ವಿರುದ್ದ ಘೋಷಣೆಗಳನ್ನು ಕೂಗಿದರು.

ಸಿದ್ದರಾಮಯ್ಯರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬಾರದು. ಅವರನ್ನೇ ಮುಂದುವರೆಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದು ಸಿದ್ದರಾಮಯ್ಯ ಅವರಿಂದ. ಒಂದು ವೇಳೆ ಅವರನ್ನು ಕೆಳಗಿಳಿಸಿದರೆ 2028 ವಿಧಾನಸಭಾ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವುದಾಗಿ ಅಭಿಮಾನಿಗಳು ಘೋಷಣೆ ಕೂಗಿದರು. ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಘೋಷಣೆ ಕೂಗುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಸಿಎಂ ಈಗಾಗಲೇ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಹುದು.

ಸಿಎಂ ಭೇಟಿಯಾಗಿ ಮಾತನಾಡಿಸಿದೆವು. ಶಾಸಕರು ಅವರನ್ನು ಮುಂದುವರಿಸಬೇಕೆಂದು ಬಯಸಿದ್ದರು. ಆದರೆ, ಹೈಕಮಾಂಡ್ ಜೊತೆ ಏನು ಮಾತನಾಡಿದ್ದಾರೋ ಗೊತ್ತಿಲ್ಲ. ಸಿಎಂ ಈಗಾಗಲೇ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ ಬುಧವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಸಿದ್ದರಾಮಯ್ಯ ರಾಜೀನಾಮೆ ವದಂತಿ ವಿರೋಧಿಸಿ ಪ್ರತಿಭಟನೆ:

ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ವದಂತಿ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಅಹಿಂದ ಮುಖಂಡರು ನಿರ್ಧರಿಸಿದ್ದಾರೆ. ಅಲ್ಲದೇ, ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ.

ಬುಧವಾರ ಸಭೆ ನಡೆಸಿದ ಅಹಿಂದ ಮುಖಂಡರು ಹಾಗೂ ಸಿದ್ದರಾಮಯ್ಯ ಅವರ ಅಭಿಮಾನಿಗಳು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸಭೆಯಲ್ಲಿ ಮಾತನಾಡಿದ ಅಹಿಂದ ನಾಯಕ ಸಿದ್ದಣ್ಣ ತೇಜಿ, "ಸಿದ್ದರಾಮಯ್ಯ ಸರ್ವ ಜನಾಂಗದ ನಾಯಕ. ಎಲ್ಲಾ ಸಮುದಾಯಗಳನ್ನು ಸಮಾನವಾಗಿ ತೆಗೆದುಕೊಂಡು ಸರ್ವರಿಗೂ ಸಮಬಾಳು ಸಮಪಾಲು ನೀಡಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಯಾವುದೇ ಕಾರಣವಿಲ್ಲದೇ ಕೆಳಗೆ ಇಳಿಸಿದರೆ ಅಹಿಂದ ನಾಯಕರು ಸುಮ್ಮನಿರುವುದಿಲ್ಲ" ಎಂದು ಎಚ್ಚರಿಕೆ ನೀಡಿದರು.

Leave a Comment