ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ  ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ. ಸಮತೋಲಿತ ಕಲಿಕೆಯಿಂದ ಪ್ರಜ್ಞಾವಂತ ಸಮಾಜದ ಅನಾವರಣ: ಶಿಕ್ಷಣಾಧಿಕಾರಿ ಮಾಲತಿ.

Coastal Bulletin
ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ  ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ. ಸಮತೋಲಿತ ಕಲಿಕೆಯಿಂದ ಪ್ರಜ್ಞಾವಂತ ಸಮಾಜದ ಅನಾವರಣ: ಶಿಕ್ಷಣಾಧಿಕಾರಿ ಮಾಲತಿ.

ಬಂಟ್ವಾಳ :ಸಂಭ್ರಮದ ಕಲಿಕೆಗೆ ಸ್ವಾಗತಿಸಿದ ಮಂಚಿ - ಕೊಳ್ನಾಡು ಪ್ರೌಢಶಾಲೆಯಲ್ಲಿ  ಮಕ್ಕಳದೇ ಕಲರವ. ಇಲ್ಲಿ ಆಯೋಜಿಸಲಾದ ಬಂಟ್ವಾಳ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ  ಮಾಲತಿ ಮಾತನಾಡಿ, "ಮಕ್ಕಳ ಮನದಲ್ಲಿ ಬಿತ್ತಿದ ಉಜ್ವಲ ಭವಿಷ್ಯದ ಅಕ್ಷರ ಬೀಜಗಳು ಹೆಮ್ಮರವಾಗಿ ನಾಡಿಗೆ ಸಂಪನ್ಮೂಲವಾಗಿ ಬೆಳಕಾಗುವುದರಲ್ಲಿ ಸಂಶಯವಿಲ್ಲ. ಪಠ್ಯ ಹಾಗೂ ಸಹಪಠ್ಯದ ಸಮತೋಲಿತ ಕಲಿಕೆ ಮಕ್ಕಳ ಸಂಸ್ಕಾರಯುತ ನಡೆಗೆ ತೆರೆದು ಪ್ರಜ್ಞಾವಂತ ಸಮಾಜದ ಅನಾವರಣಕ್ಕೆ ಕಾರಣವಾಗುತ್ತದೆ. ಇವೆಲ್ಲದಕ್ಕೂ ಕಾರಣವಾಗಿರುವ ಸರಕಾರಿ ಕನ್ನಡ ಶಾಲೆಗಳು ಮುಚ್ಚುವ ಭೀತಿಯಲ್ಲಿರುವ ಇಂದಿನ ಕಾಲಘಟ್ಟದಲ್ಲಿ ಮಂಚಿ ಕೊಳ್ನಾಡು ಪ್ರೌಢಶಾಲೆಯ ಮಕ್ಕಳ ದಾಖಲಾತಿ ಸಂಖ್ಯೆ ಗಮನಾರ್ಹವಾಗಿದೆ. ಶೇಕಡಾ 100 ಫಲಿತಾಂಶದೊಂದಿಗೆ ಶಾಲೆಯ ಶೈಕ್ಷಣಿಕ ಗುಣಮಟ್ಟವು ಜನಮಾನಸದಲ್ಲಿ ಶಾಶ್ವತವಾಗಿದೆ" ಎಂದರು.

ಶಿಕ್ಷಣ ಸಂಯೋಜಕರಾದ ರಮಾನಂದ ನೂಜಿಪ್ಪಾಡಿ ಮಾತನಾಡಿ, "ಸಮುದಾಯದ ಸಹಕಾರದೊಂದಿಗೆ ಮಂಚಿ ಕೊಳ್ನಾಡು ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ ವೃಂದ ಶಾಲೆಯ ಬೆಳವಣಿಗೆಗೆ ಒತ್ತನ್ನು ನೀಡುತ್ತಿದೆ. ಶಾಲಾರಂಭವು ಮಕ್ಕಳ ಕಲಿಕೆಗೆ ಅನುಕೂಲಿಸುವ ದಿನವಾಗಿ ವಿದ್ಯಾರ್ಥಿಗಳ ಸಂತಸದ ಕಲಿಕೆಗೆ ನಾಂದಿಯಾಗಲಿ." ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶಿವಶಂಕರ್ ರಾವ್ ಮಾತನಾಡಿ, "ಮಂಚಿ ಕೊಳ್ನಾಡು ಪ್ರೌಢಶಾಲೆಯು ಶಾಲಾ ಶೈಕ್ಷಣಿಕ ಹಿತದೃಷ್ಟಿಯಿಂದ ಹಲವಾರು ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿದ್ದು ಶೈಕ್ಷಣಿಕ ಗುಣಮಟ್ಟ ಹಾಗೂ ಭೌತಿಕ ವ್ಯವಸ್ಥೆಗಳನ್ನು ಈಡೇರಿಸುವಲ್ಲಿ ಶಾಲಾಭಿವೃದ್ಧಿ ಸಮಿತಿ ಶ್ರಮಿಸುತ್ತಿದೆ." ಎಂದರು

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪೋಷಕರು ಬರೆಯುವ ಪೆನ್ನು ವಿತರಿಸುವ ಮೂಲಕ ದಾಖಲಾತಿ ಹೊಂದಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸರಕಾರದಿಂದ ನೀಡಲಾಗುವ

ಉಚಿತ ಪಠ್ಯಪುಸ್ತಕವನ್ನು ಹಸ್ತಾಂತರಿಸಲಾಯಿತು. ಶಾಲಾ ವಿದ್ಯಾರ್ಥಿಗಳ ಹೊಸ ವಿನ್ಯಾಸದ ಕ್ರೀಡಾ ಜರ್ಸಿಯನ್ನು ಪ್ರದರ್ಶಿಸಲಾಯಿತು. ಶಾಲಾ ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ರಮೇಶ್ ರಾವ್ ಪತ್ತುಮುಡಿ, ಡಾ. ಗೋಪಾಲ್ ಆಚಾರ್, ಹಿರಿಯ ವಿದ್ಯಾರ್ಥಿ ಸುಲೈಮಾನ್ ಜಿ ಸುರಿಬೈಲು, ಗಣೇಶ್ ಪ್ರಭು ಶುಭಾಶಯದ ಮಾತುಗಳನ್ನಾಡಿದರು. ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ  ವಿದ್ಯಾಶ್ರೀ, ಶಿಕ್ಷಣ ಸಂಯೋಜಕರಾದ  ಸುಧಾ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ರಮೇಶ್ ಟೈಲರ್, ಶಾಲಾ ಸ್ಥಳ ದಾನಿಗಳಾದ ನಾರಾಯಣ ಭಟ್ ನೂಜಿಬೈಲು ಉಪಸ್ಥಿತರಿದ್ದರು.

ಕನ್ನಡ ಭಾಷಾ ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕರಾದ ಸುಶೀಲ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿಂದಿ ಭಾಷಾ ಶಿಕ್ಷಕಿ  ಶಾಂತ ಎಸ್ ವಂದಿಸಿದರು.

Leave a Comment