ಬಂಟ್ವಾಳ: ಇತ್ತೀಚೆಗೆ ವಿದ್ಯುತ್ ಅವಘಡದಲ್ಲಿ ದುರ್ಮರಣ ಹೊಂದಿದ ಬಿ.ಮೂಡ ಗ್ರಾಮದ ಮೊಡಂಕಾಪು ಸಮೀಪದ ರಾಜೀವಪಲ್ಕೆಯ ಕೃಷಿಕ ದಿವಂಗತ ಕೃಷ್ಣಪ್ಪ ಕುಲಾಲ್ (83) ಅವರ ವೈಕುಂಠ ಸಮಾರಾಧನೆ ದಿನದಂದು ಅವರ ಆತ್ಮಕ್ಕೆ ಚಿರಶಾಂತಿ ಕೋರಲು ಬಂದ ಸುಮಾರು 500ಜನರಿಗೆ ಅಡಿಕೆ ಸಸಿಯನ್ನು ವಿತರಿಸುವ ಮೂಲಕ ಅವರ ನೆನಪು ಸಮಾಜದಲ್ಲಿ ಚಿರಸ್ಥಾಯಿಯಾಗುದರೊಂದಿಗೆ ಪರಿಸರ ಸಂರಕ್ಷಣೆಯ ಮಾದರಿ ಕಾರ್ಯವನ್ನು ಅವರ ಕುಟುಂಬ ಮಾಡಿದೆ .
ಬಾಲ್ಯದಿಂದಲೇ ಕೃಷಿ ಮತ್ತು ಗೋಸೇವೆಯನ್ನೇ ಬದುಕಿನ ಧ್ಯೇಯವಾಗಿಸಿಕೊಂಡಿದ್ದರು.ಇಳಿ ವಯಸ್ಸಿನಲ್ಲೂ ಯುವಕರ ಉತ್ಸಾಹದೊಂದಿಗೆ ಕೃಷಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಹೈನುಗಾರಿಕೆಯನ್ನು ತನ್ನ ಜೀವನೋಪಾಯವಾಗಿಕೊಂಡಿದ್ದ ಕೃಷಿಕರಾದ ಕೃಷ್ಣಪ್ಪ ಕುಲಾಲ್ ಅವರು ಜುಲೈ 15ರಂದು ಗುಡ್ಡದಲ್ಲಿ ಸೊಪ್ಪು ತರಲು ತೆರಳಿದ್ದ ವೇಳೆ ಎ.ಎಂ.ಆರ್. ಸಂಸ್ಥೆಯ ಹೈ ವೋಲ್ಟೇಜ್
ವಿದ್ಯುತ್ ತಂತಿಗೆ ಶಾಕ್ ತಗುಲಿ ದುರ್ಘಟನೆಯಲ್ಲಿ ಮೃತಪಟ್ಟಿದ್ದರು. ಈ ಘಟನೆ ಬಳಿಕ ಎ.ಎಂ.ಆರ್. ಕಂಪನಿಯ ಅವೈಜ್ಞಾನಿಕ ಕಾಮಗಾರಿ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳ ಕೊರತೆಯೇ ಅಪಘಾತಕ್ಕೆ ಕಾರಣ ಎಂದು ಕುಟುಂಬದವರು ಮತ್ತು ಗ್ರಾಮಸ್ಥರು ಆರೋಪಿಸಿದ್ದರು.
ಸಮಾಜಕ್ಕೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಅವರ ಕುಟುಂಬಸ್ಥರ ಈ ಕಾರ್ಯವು ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.
















