ತೆಲಂಗಾಣ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮೊಹಮ್ಮದ್ ಅಜರುದ್ದೀನ್

Coastal Bulletin
ತೆಲಂಗಾಣ ಸರ್ಕಾರದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಮೊಹಮ್ಮದ್ ಅಜರುದ್ದೀನ್

ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಇಂದು ತೆಲಂಗಾಣ ಸರ್ಕಾರದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಅವರು ರಾಜಭವನದಲ್ಲಿ ಪ್ರಮಾಣವಚನ ಬೋಧಿಸಿದರು.

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಮತ್ತು ಸಚಿವರು ಭಾಗವಹಿಸಿದ್ದರು.

ಬಿಆರ್​ಎಸ್ ಶಾಸಕ ಮಾಗಂಟಿ ಗೋಪಿನಾಥ್ ಅವರು ಈ ವರ್ಷದ ಜೂನ್‌ನಲ್ಲಿ ಹೃದಯಾಘಾತದಿಂದ ನಿಧನರಾದ ನಂತರ ಈ ಕ್ಷೇತ್ರ ತೆರವಾಗಿತ್ತು.

ಅಜರುದ್ದೀನ್ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ತೆಲಂಗಾಣ ಸರ್ಕಾರ ಆಗಸ್ಟ್​ ಕೊನೆಯ ವಾರದಲ್ಲಿ ನಾಮನಿರ್ದೇಶನ ಮಾಡಿತ್ತು.

ಕಳೆದ ಕೆಲವು ದಿನಗಳಿಂದ ಸಿಎಂ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಚಿವ ಸಂಪುಟ ವಿಸ್ತರಣೆ ಮಾಡುವ ಕುರಿತು ಭಾರೀ ಚರ್ಚೆ ನಡೆಸಿತ್ತು. ಸಂಪುಟದಲ್ಲಿ 15 ಖಾತೆಗಳು ಭರ್ತಿಯಾಗಿದ್ದು, ಖಾಲಿ ಇರುವ ಮೂರು ಖಾತೆಗಳನ್ನು ತುಂಬಲು ಮುಂದಾಗಿತ್ತು.

ಹೈದರಾಬಾದ್‌ನವರಾದ ಅಜರುದ್ದೀನ್ 1992, 1996 ಮತ್ತು 1999ರ ಏಕದಿನ ವಿಶ್ವಕಪ್‌ಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು. ಕ್ರಿಕೆಟಿಗರಾಗಿ ವಿಶೇಷ ಮನ್ನಣೆ ಗಳಿಸಿದ್ದ ಇವರು ದೇಶೀಯ ಕ್ರಿಕೆಟ್‌ನಲ್ಲಿ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದರು.

ಅಜರುದ್ದೀನ್ ಫೆಬ್ರವರಿ 8, 1963ರಂದು ಹೈದರಾಬಾದ್‌ನಲ್ಲಿ ಜನಿಸಿದರು. ತಮ್ಮ ಕಾಲದ ಅತ್ಯಂತ ಆಕರ್ಷಕ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದರು ಹಾಗೂ ಫೀಲ್ಡಿಂಗ್​ನಲ್ಲಿಯೂ ಹೆಸರುವಾಸಿಯಾಗಿದ್ದರು.

ಅಜರುದ್ದೀನ್

ತಮ್ಮ ಶಾಲಾ ಶಿಕ್ಷಣವನ್ನು ಅಬಿಡ್ಸ್‌ನ ಆಲ್ ಸೇಂಟ್ಸ್ ಹೈಸ್ಕೂಲ್‌ನಲ್ಲಿ ಪೂರ್ಣಗೊಳಿಸಿದ್ದರು. ನಂತರ ನಿಜಾಮ್ ಕಾಲೇಜಿನಲ್ಲಿ ಬಿ.ಕಾಂ. ಅಧ್ಯಯನ ಮಾಡಿದ್ದರು.

ತಾಯಿಯ ಚಿಕ್ಕಪ್ಪ ಜೈನುಲಾಬುದ್ದೀನ್ ಅವರಿಂದ ಪ್ರೇರಣೆಗೊಂಡು ಕ್ರಿಕೆಟ್‌ನತ್ತ ಒಲವು ಹೊಂದಿದ್ದರು. 1984ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಮೊದಲ ಮೂರು ಟೆಸ್ಟ್‌ಗಳಲ್ಲಿ ಶತಕ ಗಳಿಸಿದ್ದು ಇವರ ವಿಶೇಷ ಸಾಧನೆ.

ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ​​(HCA)ನ ಮಾಜಿ ಅಧ್ಯಕ್ಷರೂ ಆಗಿರುವ ಅಜರುದ್ದೀನ್, ಕಾಂಗ್ರೆಸ್ ಸೇರಿದ ಕೆಲವು ತಿಂಗಳ ನಂತರ 2009ರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.

2014ರಲ್ಲಿ ಕಾಂಗ್ರೆಸ್ ಪಕ್ಷ ಅವರನ್ನು ರಾಜಸ್ಥಾನದ ಟನ್ ಸವಾಯಿ ಮಾಧೋಪುರ್​ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಆದರೆ ಅವರು ಚುನಾವಣೆಯಲ್ಲಿ ಸೋತರು.

2018ರಲ್ಲಿ ಅಜರುದ್ದೀನ್ ಅವರನ್ನು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು. 2018ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕಾಗಿ ಪ್ರಚಾರ ಮಾಡಿದ್ದರು. ಆದರೆ ಪಕ್ಷ ಅವರನ್ನು ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲಿಲ್ಲ. 2023ರಲ್ಲಿ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಜುಬಿಲಿ ಹಿಲ್ಸ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತರು.

Leave a Comment