ಪ್ರಧಾನಿ ಮೋದಿ ಯುಎಇ ಭೇಟಿಯಲ್ಲಿ ಹಲವು ಒಪ್ಪಂದಗಳಿಗೆ ಸಹಿ

Coastal Bulletin
ಪ್ರಧಾನಿ ಮೋದಿ ಯುಎಇ ಭೇಟಿಯಲ್ಲಿ ಹಲವು ಒಪ್ಪಂದಗಳಿಗೆ ಸಹಿ

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಪರಿಸ್ಥಿತಿಯಿಂದಾಗಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಯುಎಇಗೆ (UAE) ನೀಡಿರುವ ಭೇಟಿಯಿಂದ ಹಲವು ನಿರೀಕ್ಷೆಗಳಿವೆ. ಭಾರತದ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಪ್ರಧಾನಿ ಭೇಟಿಯ ಪ್ರಮುಖ ಕಾರ್ಯಸೂಚಿಯಾಗಿದೆ. ಇಂಧನ ಭದ್ರತೆ, ರಕ್ಷಣಾ ಕ್ಷೇತ್ರ ಹಾಗೂ ವ್ಯಾಪಾರದಲ್ಲಿ ಎರಡೂ ದೇಶಗಳ ಮಧ್ಯೆ ಪ್ರಮುಖ ಒಪ್ಪಂದ ಏರ್ಪಟ್ಟಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಪ್ರತಿ ಲೀಟರ್‌ಗೆ ಸುಮಾರು 3 ರೂಪಾಯಿಗಳಷ್ಟು ಏರಿಕೆಯಾಗಿವೆ. ಯುಎಇ ಭೇಟಿಯ ಸಮಯದಲ್ಲಿ ಪ್ರಧಾನಿ ಮೋದಿಯವರು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಪ್ರಮುಖ ಮಾತುಕತೆ ನಡೆಸಿದ್ದಾರೆ. ಭಾರತಕ್ಕೆ ಎಲ್‌ಪಿಜಿ (LPG) ಪೂರೈಕೆ ಮತ್ತು ಪೆಟ್ರೋಲಿಯಂ ಮೀಸಲು (Strategic Petroleum Reserves) ಕುರಿತು ಪ್ರಮುಖ ಒಪ್ಪಂದಗಳಿಗೆ ಸಹಿ (ಎಂಒಯು) ಹಾಕಲಾಗಿದೆ.

ಭಾರತದ ಮೂಲಸೌಕರ್ಯ, ಆರ್ಬಿಎಲ್ ಬ್ಯಾಂಕ್ ಮತ್ತು ಸಮ್ಮಾನ್ ಕ್ಯಾಪಿಟಲ್ನಲ್ಲಿ ಯುಎಇಯಿಂದ 5 ಬಿಲಿಯನ್ ಡಾಲರ್ನಷ್ಟು ಹೂಡಿಕೆ ಬರಲಿದೆ. ಗುಜರಾತ್ನ ದ್ವಾರಕಾದಲ್ಲಿರುವ ವಾದಿನಾರ್ನಲ್ಲಿ ಹಡಗು ದುರಸ್ತಿ ಕೇಂದ್ರವನ್ನು ಸ್ಥಾಪಿಸಲೂ ಸಹಿ ಹಾಕಲಾಗಿದೆ.

ಯಾವುದೇ ಪರಿಸ್ಥಿತಿಯಲ್ಲೂ ಯುಎಇಗೆ ಬೆಂಬಲ: ಮೋದಿ

ನಿಯೋಗ ಮಟ್ಟದ ಮಾತುಕತೆ ವೇಳೆ ಮಾತನಾಡಿದ ನರೇಂದ್ರ ಮೋದಿ, ಯುಎಇಗೆ ಎಲ್ಲಾ ರೀತಿಯಲ್ಲೂ ಸಹಕಾರ ಕೊಡುವುದಾಗಿ ಭರವಸೆ ನೀಡಿದ್ದಾರೆ. ಎಲ್ಲಾ ಪರಿಸ್ಥಿತಿಯಲ್ಲೂ ಯುಎಇಯೊಂದಿಗೆ ಭಾರತ ಹೆಗಲಿಗೆ ಹೆಗಲು ಕೊಡುತ್ತಾ ಬಂದಿದೆ. ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಮರಳಿ ತರಲು ಭಾರತ ಸಾಧ್ಯವಾದ ಎಲ್ಲಾ

ಸಹಕಾರ ಕೊಡುತ್ತದೆ ಎಂದೂ ಮೋದಿ ತಿಳಿಸಿದ್ದಾರೆ. ಹಾಗೆಯೇ, ಇರಾನ್, ಅಮೆರಿಕ ಯುದ್ಧದ ಮಧ್ಯೆ ಯುಎಇಯ ಸ್ಥಳಗಳ ಮೇಲೆ ನಡೆದ ದಾಳಿಯನ್ನೂ ಮೋದಿ ಇದೇ ವೇಳೆ ಖಂಡಿಸಿದ್ದಾರೆ.

ಭಾರತದ ಇಂಧನ ಭದ್ರತೆಗೆ ಸರ್ಕಾರದ ಪ್ರಯತ್ನಗಳು

ಯುದ್ಧದಿಂದಾಗಿ ವಿದೇಶಿ ವಿನಿಮಯ ಮೀಸಲು ಮೇಲೆ ಒತ್ತಡ ಬೀಳುತ್ತಿರುವುದರಿಂದ, ಪ್ರಧಾನಿಯವರು ದೇಶದ ಜನರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯನ್ನು ಕಡಿಮೆ ಮಾಡಲು ಮತ್ತು ಮಿತವ್ಯಯದ ಕ್ರಮಗಳನ್ನು ಅನುಸರಿಸಲು ಕರೆ ನೀಡಿದ್ದಾರೆ. ಭಾರತೀಯ ತೈಲ ನಿಗಮ (IOC) ಮತ್ತು ಅಬುಧಾಬಿ ನ್ಯಾಷನಲ್ ಆಯಿಲ್ ಕಂಪನಿ (ADNOC) ನಡುವೆ ಎಲ್‌ಪಿಜಿ ಪೂರೈಕೆಗಾಗಿ ಒಪ್ಪಂದ.

ತೈಲ ಸಂಗ್ರಹಣೆಯನ್ನು ಹೆಚ್ಚಿಸಲು ಭಾರತೀಯ ಆಯಕಟ್ಟಿನ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ISPRL) ನೊಂದಿಗೆ ಸಹಯೋಗ ಪಡೆಯಲಾಗಿದೆ.

ಭಾರತವು ತನ್ನ ಕಚ್ಚಾ ತೈಲ ಅಗತ್ಯದ ಶೇ. 88 ರಷ್ಟು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ತೈಲ ಸಾಗಣೆಗೆ ಅಡ್ಡಿಯಾಗಿರುವುದು ಭಾರತದ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ.

ಜಾಗತಿಕ ಅಸ್ಥಿರತೆಯ ನಡುವೆ ಭಾರತದ ಇಂಧನ ಅಗತ್ಯಗಳನ್ನು ಪೂರೈಸಲು ಮತ್ತು ಬೆಲೆ ಏರಿಕೆಯನ್ನು ನಿಯಂತ್ರಿಸಲು ಈ ಯುಎಇ ಭೇಟಿ ಅತ್ಯಂತ ನಿರ್ಣಾಯಕವಾಗಿದೆ.

Leave a Comment