ಮದುವೆ ಸಮಾರಂಭದಲ್ಲಿ ಗುಂಡು ಹಾರಿಸಿ ಜಮ್ಮು ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹತ್ಯೆಗೆ ಯತ್ನ

Coastal Bulletin
ಮದುವೆ ಸಮಾರಂಭದಲ್ಲಿ ಗುಂಡು ಹಾರಿಸಿ ಜಮ್ಮು ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಹತ್ಯೆಗೆ ಯತ್ನ

ಜಮ್ಮು (ಜಮ್ಮು ಕಾಶ್ಮೀರ): ವಿವಾಹ ಸಮಾರಂಭವೊಂದರಲ್ಲಿ ಪ್ರಮುಖ ಭದ್ರತಾ ಲೋಪ ಸಂಭವಿಸಿದ್ದು, ಬುಧವಾರ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಹತ್ಯೆಗೆ ಯತ್ನ ನಡೆದಿದೆ. ಭದ್ರತಾ ಸಿಬ್ಬಂದಿಯ ತ್ವರಿತ ಕ್ರಮದಿಂದಾಗಿ ಅವರು ಅಪಾಯದಿಂದ ಪಾರಾಗಿದ್ದಾರೆ.

ಕಮಲ್ ಸಿಂಗ್ ಜಮ್ವಾಲ್ (68) ಎಂದು ಗುರುತಿಸಲಾದ ವೃದ್ಧ ವ್ಯಕ್ತಿಯೊಬ್ಬ ಪಿಸ್ತೂಲಿನಿಂದ ಫಾರೂಕ್ ಅಬ್ದುಲ್ಲಾ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಈ ವೇಳೆ ಸ್ವಲ್ಪದರಲ್ಲೇ ಫಾರೂಕ್ ಅಬ್ದುಲ್ಲಾ ಯಾವುದೇ ಗಾಯಗಳಿಲ್ಲದೆ ಬಚಾವ್ ಆಗಿದ್ದಾರೆ. ಸಮಾರಂಭದಲ್ಲಿ ತೆರಳುತ್ತಿದ್ದ ಮಾಜಿ ಸಿಎಂ ಮೇಲೆ ಹಿಂದಿನಿಂದ ಬಂದ ವ್ಯಕ್ತಿ ಗುಂಡು ಹಾರಿಸಲು ಮುಂದಾಗಿದ್ದಾನೆ. ಈ ವೇಳೆ, ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಆತನನ್ನು ತಡೆದು, ಪಿಸ್ತೂಲ್ ಕಿತ್ತುಕೊಂಡಿದ್ದಾರೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆಯು ಜಮ್ಮುವಿನಲ್ಲಿ ಭೀತಿ ಸೃಷ್ಟಿಸಿದ್ದು, ಫಾರೂಕ್ ಅಬ್ದುಲ್ಲಾ ಅವರನ್ನು ಭದ್ರತಾ ಸಿಬ್ಬಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಜಮ್ಮುವಿನ ಗ್ರೇಟರ್ ಕೈಲಾಶ್ ಪ್ರದೇಶದ ರಾಯಲ್ ಪಾರ್ಕ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಈ ಘಟನೆ ನಡೆದಿದ್ದು, ಫಾರೂಕ್ ಅಬ್ದುಲ್ಲಾ ಎನ್‌ಸಿ ನಾಯಕರೊಬ್ಬರ ಮಗಳ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದರು. ಅವರೊಂದಿಗೆ ಜಮ್ಮು ಕಾಶ್ಮೀರದ ಉಪ ಮುಖ್ಯಮಂತ್ರಿ ಸುರೀಂದರ್ ಚೌಧರಿ ಮತ್ತು ಇತರ ನಾಯಕರು ಇದ್ದರು.

ಘಟನೆ ಬಗ್ಗೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಎಕ್ಸ್ ಪೋಸ್ಟ್ನಲ್ಲಿ ಪ್ರತಿಕ್ರಿಯಿಸಿ, "ಅಲ್ಲಾಹನು ದಯೆ ತೋರಿದ್ದಾನೆ. ನನ್ನ ತಂದೆ ತುಂಬಾ ಹತ್ತಿರದಲ್ಲೇ ಇದ್ದರು. ಈ ಸಮಯದಲ್ಲಿ ಹೆಚ್ಚಿನ ವಿವರ ಸ್ಪಷ್ಟವಾಗಿಲ್ಲ. ಆದರೆ ಲೋಡ್ ಮಾಡಲಾದ ಪಿಸ್ತೂಲ್ ಹೊಂದಿರುವ ವ್ಯಕ್ತಿ ಸಮೀಪಕ್ಕೆ ಹೋಗಿ ಗುಂಡು ಹಾರಿಸಿದ್ದಾನೆ. ಆಗ ಭದ್ರತಾ ತಂಡವು ಹತ್ಯೆ ಯತ್ನವನ್ನು ವಿಫಲಗೊಳಿಸಿದೆ. ಈ ಸಮಯದಲ್ಲಿ ಉತ್ತರಗಳಿಗಿಂತ ಹೆಚ್ಚಿನ ಪ್ರಶ್ನೆಗಳು ಎದುರಾಗಿವೆ. Z+ NSG ಸೆಕ್ಯೂರಿಟಿ ಇರುವ ಮಾಜಿ ಮುಖ್ಯಮಂತ್ರಿಯ ಬಳಿ ಅಷ್ಟೊಂದು ಸಮೀಪಕ್ಕೆ ವ್ಯಕ್ತಿಯು ಹೋಗಲು ಹೇಗೆ ಸಾಧ್ಯವಾಯಿತು ಎಂದು ತಿಳಿಯುತ್ತಿಲ್ಲ. ಅಲ್ಲದೆ, ಈ ಸಮಯದಲ್ಲಿ ನನ್ನ ತಂದೆಯೊಂದಿಗೆ ಇದ್ದ ಉಪ ಮುಖ್ಯಮಂತ್ರಿ

ಮತ್ತು ನಾಸಿರ್ ಸೊಗಾಮಿ ಇಬ್ಬರೂ ಸುರಕ್ಷಿತವಾಗಿದ್ದಾರೆ. ಸರ್ವಶಕ್ತನು ಅವರನ್ನು ರಕ್ಷಿಸಿದ" ಎಂದು ಹೇಳಿದ್ದಾರೆ.

ಆರೋಪಿ ಬಂಧನ: ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಗುಂಡು ಹಾರಿಸಲು ಯತ್ನಿಸಿರುವ ಹಿಂದಿನ ಕಾರಣದ ಕುರಿತು ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಹತ್ಯೆ ಯತ್ನದ ಬಳಿಕ, ಸಿಎಂ ಸಲಹೆಗಾರ ನಾಸಿರ್ ಅಸ್ಲಂ ವಾನಿ ಮಾಧ್ಯಮಗಳೊಂದಿಗೆ ಮಾತನಾಡಿ, "ಆ ವ್ಯಕ್ತಿ ತನ್ನ ರಿವಾಲ್ವರ್‌ನಿಂದ ಗುಂಡು ಹಾರಿಸುವ ಮೂಲಕ ಫಾರೂಕ್ ಅಬ್ದುಲ್ಲಾ ಅವರನ್ನು ಕೊಲ್ಲಲು ಪ್ರಯತ್ನಿಸಿದ. ಸರ್ವಶಕ್ತನು ಫಾರೂಕ್ ಸಾಹಬ್ ಅವರನ್ನು ರಕ್ಷಿಸಿದ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ" ಎಂದು ತಿಳಿಸಿದ್ದಾರೆ.

ಇದೊಂದು ಪ್ರಮುಖ ಭದ್ರತಾ ಲೋಪ ಎಂದಿರುವ ಜಮ್ಮು ಕಾಶ್ಮೀರದ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ, ಘಟನೆ ಸಮಯದಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ ಹಾಗೂ ಭದ್ರತಾ ಅಧಿಕಾರಿಗಳು ಅಲ್ಲಿ ಇರಲಿಲ್ಲ ಎಂದು ಆರೋಪಿಸಿದ್ದಾರೆ.

ದಾಳಿಕೋರ ಕಮಲ್ ಸಿಂಗ್ ಜಮ್ವಾಲ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಕಳೆದ 20 ವರ್ಷಗಳಿಂದ ಫಾರೂಕ್ ಅಬ್ದುಲ್ಲಾ ಅವರನ್ನು ಕೊಲ್ಲಲು ಬಯಸಿದ್ದೆ. ಆ ಅವಕಾಶ ಇಂದು ಸಿಕ್ಕಿತ್ತು. ಆದರೆ ಪ್ರಯತ್ನ ವಿಫಲವಾಯಿತು ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ.

ಈ ಸಂಬಂಧ ಜಮ್ಮು ಕಾಶ್ಮೀರ ಪೊಲೀಸರು ಹೇಳಿಕೆ ನೀಡಿದ್ದು, "ಡಾ.ಫಾರೂಕ್ ಅಬ್ದುಲ್ಲಾ ಅವರು ಜಮ್ಮುವಿನ ರಾಯಲ್ ಪಾರ್ಕ್ ಗ್ರೇಟರ್ ಕೈಲಾಶ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದಾಗ ಅವರ ಹತ್ಯೆಗೆ ಯತ್ನ ನಡೆದಿದೆ. ಅಂಗರಕ್ಷಕರೊಂದಿಗೆ ನಿಯೋಜಿತ ಜೆ-ಕೆ ಪೊಲೀಸ್ ಮತ್ತು ಎನ್‌ಎಸ್‌ಜಿಯ ಭದ್ರತಾ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿ ಕೊಲೆ ಯತ್ನವನ್ನು ವಿಫಲಗೊಳಿಸಿದ್ದಾರೆ. ಅಲ್ಲದೆ, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆತನನ್ನು ಜಮ್ಮುವಿನ ಪುರಾಣಿ ಮಂಡಿಯ ಕಮಲ್ ಸಿಂಗ್ ಎಂದು ಗುರುತಿಸಲಾಗಿದೆ. ಗುಂಡು ಹಾರಿಸಲು ಬಳಸಲಾದ ಪಿಸ್ತೂಲ್ನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಹೇಳಿದ್ದಾರೆ.

Leave a Comment