Coastal Bulletin

ಹಿಂಡೆನ್‌ಬರ್ಗ್ ರಿಸರ್ಚ್‌ ವರದಿಯು, ಅದಾನಿ ಗ್ರೂಪ್‌ನ ಒಂದು ದಶಕಗಳ ಕಾಲದ ವಂಚನೆ ಯೋಜನೆ, “ಬ್ರೇಜ್ ಅಕೌಂಟಿಂಗ್ ವಂಚನೆ, ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಮನಿ ಲಾಂಡರಿಂಗ್” ಎಂದು ಆರೋಪಿಸಿದ ಬಳಿಕ ಅದಾನಿಯ ಶ್ರೀಮಂತಿಕೆಗೆ ಪೆಟ್ಟುಕೊಟ್ಟಿದೆ.

ಟಾಪ್‌ 15 ಶ್ರೀಮಂತರ ಪಟ್ಟಿಯಿಂದಲೂ ಹೊರಬಿದ್ದ ಗೌತಮ್‌ ಅದಾನಿ!

ಹಿಂಡೆನ್‌ಬರ್ಗ್ ಸಂಶೋಧನಾ ವರದಿಯು ಗೌತಮ್‌ ಅದಾನಿಗೆ ಭಾರೀ ಹೊಡೆತ ನೀಡಿದೆ. ಅದಾನಿ ಗ್ರೂಪ್‌ ಕಂಪನಿಗಳ ಷೇರುಗಳು ತೀವ್ರ ಕುಸಿತ ಕಂಡಿದ್ದು, ಇಳಿಕೆಯ ಟ್ರೆಂಡ್‌ ಇಂದಿಗೂ ಮುಂದುವರಿದಿದೆ. ಕಳೆದ ವಾರ ಹಿಂಡೆನ್‌ಬರ್ಗ್ ವರದಿ ಪ್ರಕಟವಾದ ನಂತರ ಇಲ್ಲಿಯವರೆಗೆ ಅದಾನಿ ಗ್ರೂಪ್ ಕಂಪನಿಗಳ ಮಾರ್ಕೆಟ್‌ ಕ್ಯಾಪ್ $ 100 ಬಿಲಿಯನ್‌ನಷ್ಟು ಕಡಿಮೆಯಾಗಿದೆ. ಹೀಗಾಗಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ವಿಶ್ವದ ಟಾಪ್‌ 15 ಶ್ರೀಮಂತರ ಪಟ್ಟಿಯಿಂದಲೂ ಹೊರಬಿದ್ದಿದ್ದಾರೆ.

ಅದಾನಿ ಗ್ರೂಪ್‌ ಷೇರುಗಳು ಸತತ 6ನೇ ದಿನವೂ ಭಾರೀ ಕುಸಿತ ಕಂಡಿವೆ. ಅದಾನಿ ಸಮೂಹದ ಕಂಪನಿಗಳ ಮಾರುಕಟ್ಟೆ ಕ್ಯಾಪ್ ಸುಮಾರು $ 100 ಬಿಲಿಯನ್‌ನಷ್ಟು ಕುಸಿದಿದೆ. ಕಳೆದ ವಾರ ಅಮೆರಿಕ ಮೂಲದ ಶಾರ್ಟ್‌ ಸೆಲ್ಲರ್‌ ಸಂಸ್ಥೆ 'ಹಿಂಡೆನ್‌ಬರ್ಗ್ ರಿಸರ್ಚ್‌'ನ ವರದಿಯ ಪ್ರಕಾರ ಅದಾನಿ ಗ್ರೂಪ್ ದಶಕಗಳಿಂದಲೂ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಖಾತೆ ವಂಚನೆಯಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿದೆ. ಈ ವರದಿ ಪ್ರಕಟವಾದ ದಿನದಿಂದಲೂ ಅದಾನಿ ಗ್ರೂಪ್‌ನ ಷೇರುಗಳು ತೀವ್ರ ಕುಸಿತ ಕಾಣುತ್ತಿವೆ.

ಗುರುವಾರ ಕೂಡ ಅದಾನಿ ಗ್ರೂಪ್‌ ಷೇರುಗಳ ಕುಸಿತ ಮುಂದುವರಿದಿದ್ದು, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು ಶೇಕಡಾ 27 ಕ್ಕಿಂತ ಹೆಚ್ಚು ಕುಸಿದಿದೆ. ಫೋರ್ಬ್ಸ್ ರಿಯಲ್ ಟೈಮ್ ಬಿಲಿಯನೇರ್ ಪ್ರಕಾರ, ಗೌತಮ್‌ ಅದಾನಿ ಅವರ ನಿವ್ವಳ ಮೌಲ್ಯವು 24 ಬಿಲಿಯನ್ ಡಾಲರ್ (ಸುಮಾರು 2 ಲಕ್ಷ ಕೋಟಿ ರೂ.) ಇಳಿಕೆಯಾಗಿದ್ದು, 64.7 ಬಿಲಿಯನ್ ಡಾಲರ್‌ ತಲುಪಿದೆ. ಇದರೊಂದಿಗೆ ಗೌತಮ್‌ ಅದಾನಿ ವಿಶ್ವದ ಟಾಪ್‌ 15 ಶ್ರೀಮಂತರ ಪಟ್ಟಿಯಿಂದಲೂ ಹೊರಬಿದ್ದಿದ್ದು, 16ನೇ ಸ್ಥಾನಕ್ಕೆ ಕುಸಿದಿದ್ದಾರೆ. ಈ ವರದಿ ಬರುವ ಮೊದಲು, ಅವರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರು. ಆದರೆ ಇದೀಗ ಏಷ್ಯಾದ ಟಾಪ್‌ ಶ್ರೀಮಂತರ ಪಟ್ಟಿಯಲ್ಲೂ 3ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಹಿಂಡೆನ್‌ಬರ್ಗ್ ರಿಸರ್ಚ್ ವರದಿಯನ್ನು ನಿರಾಕರಿಸಿರುವ ಅದಾನಿ.

ಹಿಂಡೆನ್‌ಬರ್ಗ್ ರಿಸರ್ಚ್ ವರದಿಯನ್ನು ಸುಳ್ಳಿನ ಕಂತೆ ಎಂದು ಬಣ್ಣಿಸಿದ ಅದಾನಿ ಗ್ರೂಪ್ ಇದನ್ನು ಭಾರತದ ವಿರುದ್ಧದ ಪಿತೂರಿ ಎಂದು ಹೇಳಿದ್ದಾರೆ. ಆದರೆ, ಹೂಡಿಕೆದಾರರ ವಿಶ್ವಾಸ ಗಳಿಸುವಲ್ಲಿ ಅದಾನಿ ಸಮೂಹ ವಿಫಲವಾಗಿದೆ. ಅದಾನಿ ಗ್ರೂಪ್‌ ತನ್ನ ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್‌ನ 20,000 ಕೋಟಿ ಎಫ್‌ಪಿಒ ಅನ್ನು ಸಹ ಹಿಂಪಡೆದಿದೆ. ಈ ಕುರಿತು ಸ್ವತಃ ಗೌತಮ್‌ ಅದಾನಿ ಅವರೇ ಹೇಳಿಕೆ ನೀಡಿದ್ದು, ಹೂಡಿಕೆದಾರರು ಅದಾನಿ ಗ್ರೂಪ್‌ ಮೇಲೆ ನಂಬಿಕೆ ಇಡುವಂತೆ ಮನವಿ ಮಾಡಿದ್ದಾರೆ. ಆದರೆ, ಅವರ ಮನವಿಯು ಹೂಡಿಕೆದಾರರ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ ಎಂದು ತೋರುತ್ತದೆ. ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಬುಧವಾರ ಶೇ.25ರಷ್ಟು ಕುಸಿದಿತ್ತು. ಗುರುವಾರ ಕೂಡ ಶೇ.21ರಷ್ಟು ಕುಸಿದು 1,678 ರೂ.ಗೆ ತಲುಪಿದೆ. ಅದಾನಿ ಎಂಟರ್‌ಪ್ರೈಸಸ್ ಷೇರು ಕಳೆದ 5 ವರ್ಷಗಳಲ್ಲಿ ಶೇ.800 ರಷ್ಟು ಏರಿಕೆ ಕಂಡಿತ್ತು. ಆದರೆ, ಕಳೆದ 5 ದಿನಗಳಲ್ಲಿ ಶೇ.40ಕ್ಕೂ ಹೆಚ್ಚು ಕುಸಿತ ಕಂಡಿದೆ.

ವಿಪಕ್ಷಗಳು ಹಿಂಡೆನ್ ಬರ್ಗ್ ರಿಸರ್ಚ್ ವರದಿಯನ್ನು ಆಧರಿಸಿ ಸೂಕ್ತ ತನಿಖೆ ನಡೆಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.

Leave a Comment