ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28 ರಿಂದ 42ಕ್ಕೆ ಏರಿಕೆ – ದಕ್ಷಿಣ ಭಾರತದ ರಾಜ್ಯಗಳಲ್ಲಿ ಎಷ್ಟು ಸೀಟ್‌ ಹೆಚ್ಚಳ?

Coastal Bulletin
ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28 ರಿಂದ 42ಕ್ಕೆ ಏರಿಕೆ – ದಕ್ಷಿಣ ಭಾರತದ ರಾಜ್ಯಗಳಲ್ಲಿ ಎಷ್ಟು ಸೀಟ್‌ ಹೆಚ್ಚಳ?

ನವದೆಹಲಿ: ಕ್ಷೇತ್ರ ಪುನರ್ ವಿಂಗಡಣೆಯ ನಂತರ ಕರ್ನಾಟಕದಲ್ಲಿ (Karnataka) ಲೋಕಸಭಾ ಕ್ಷೇತ್ರಗಳ ಸಂಖ್ಯೆಯು ಸದ್ಯದ 28 ರಿಂದ 42 ಕ್ಕೆ ಏರಿಕೆಯಾಗಲಿದೆ ಎಂದು ಗೃಹ ಸಚಿವ ಅಮಿತ್‌ ಶಾ (Amit Shah) ಹೇಳಿದ್ದಾರೆ.

ಕ್ಷೇತ್ರ ಮರುವಿಂಗಡಣೆ ಮಸೂದೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂಬ ಆರೋಪಕ್ಕೆ ಲೋಕಸಭೆಯಲ್ಲಿ ಉತ್ತರ ನೀಡಿದ ಅವರು, ಕ್ಷೇತ್ರ ಪುನರ್ ವಿಂಗಡನೆ ಮಸೂದೆಯಿಂದಾಗಿ ಕರ್ನಾಟಕದ ಪ್ರಾತಿನಿಧ್ಯವು 14 ಸ್ಥಾನಗಳಷ್ಟು ಹೆಚ್ಚಾಗಲಿದ್ದು, ಒಟ್ಟು 42 ಸಂಸದರು ರಾಜ್ಯದಿಂದ ಆಯ್ಕೆಯಾಗಲಿದ್ದಾರೆ ಎಂದು ತಿಳಿಸಿದರು.

ಸದ್ಯ ಲೋಕಸಭೆಯ (Lok Sabha) ಒಟ್ಟು 543 ಸ್ಥಾನಗಳಲ್ಲಿ ಕರ್ನಾಟಕದ ಪಾಲು ಶೇ. 5.15 ರಷ್ಟಿದೆ. 816 ಸದಸ್ಯರ ಸದನದಲ್ಲಿ ಅದರ ಪಾಲು ಸುಮಾರು 5.14 ಪ್ರತಿಶತದಷ್ಟಿರುತ್ತದೆ. ಮರುವಿಂಗಡಣೆಯ ನಂತರ ಇದರ ಪ್ರಾತಿನಿಧ್ಯ ಶೇ. 5.44 ಕ್ಕೆ ಏರಿಕೆಯಾಗಲಿರುವುದರಿಂದ ಕರ್ನಾಟಕಕ್ಕೆ ಯಾವುದೇ ನಷ್ಟವಾಗುವುದಿಲ್ಲ ಎಂದರು.

ಜನಸಂಖ್ಯೆ ನಿಯಂತ್ರಿಸಿದ (Population Control) ಕಾರಣಕ್ಕಾಗಿ ದಕ್ಷಿಣ ಭಾರತದ ರಾಜ್ಯಗಳು ಲೋಕಸಭೆಯಲ್ಲಿ ಸ್ಥಾನಗಳನ್ನು ಕಳೆದುಕೊಳ್ಳಲಿವೆ ಎಂಬ ಆತಂಕಕ್ಕೆ ಉತ್ತರಿಸಿದ ಅವರು, ದಕ್ಷಿಣದ ರಾಜ್ಯಗಳು ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿವೆ. ಆದರೆ, ಉತ್ತರ ಭಾರತದ ರಾಜ್ಯಗಳ ಜನಸಂಖ್ಯೆ ಹೆಚ್ಚಿದೆ ಎಂಬ ಕಾರಣಕ್ಕೆ ದಕ್ಷಿಣದ ರಾಜ್ಯಗಳ ರಾಜಕೀಯ ಪ್ರಾಬಲ್ಯ ಕುಗ್ಗುವುದಿಲ್ಲ. ಸ್ಥಾನಗಳ ಹೆಚ್ಚಳವು ದಕ್ಷಿಣದ ರಾಜ್ಯಗಳಿಗೂ ಸಮಾನವಾಗಿ ಅನ್ವಯಿಸುವುದರಿಂದ, ಆ ರಾಜ್ಯಗಳ ಧ್ವನಿ ಸಂಸತ್ತಿನಲ್ಲಿ ಗಟ್ಟಿಯಾಗಿಯೇ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದರು.

ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳ ಸ್ಥಾನಗಳು ಹೆಚ್ಚಾಗಲಿವೆಯೇ ಹೊರತು ಯಾವುದೇ ನಷ್ಟವಾಗುವುದಿಲ್ಲ ಎಂದು ಭರವಸೆ ನೀಡಿದರು.

ದಕ್ಷಿಣ ರಾಜ್ಯಗಳ ಲೋಕಸಭಾ ಸ್ಥಾನಗಳ ಸಂಖ್ಯೆ ಎಷ್ಟು ಏರಿಕೆಯಾಗಲಿದೆ ಎಂಬುದನ್ನು ವಿವರಿಸಿದ ಅವರು, ಈ ರಾಜ್ಯಗಳ ಒಟ್ಟು ಲೋಕಸಭಾ ಸ್ಥಾನಗಳ ಸಂಖ್ಯೆಯು 195 ಕ್ಕೆ ಏರಿಕೆಯಾಗಲಿದೆ. ಕರ್ನಾಟಕ 28 ರಿಂದ 42, ತಮಿಳುನಾಡು 39 ರಿಂದ 59, ಕೇರಳ 20 ರಿಂದ 30, ಆಂಧ್ರಪ್ರದೇಶ 25 ರಿಂದ 38, ತೆಲಂಗಾಣ 17 ರಿಂದ 26ಕ್ಕೆ ಏರಿಕೆಯಾಗಲಿದೆ ಎಂದು ತಿಳಿಸಿದರು.

543 ಮಂದಿ

ಇರುವ ಲೋಕಸಭೆಯಲ್ಲಿ ಹಾಲಿ ದಕ್ಷಿಣ ಭಾಗದ 129 ಸಂಸದರು ಈ ಸದನದಲ್ಲಿ ಕುಳಿತಿದ್ದಾರೆ. ಅದು ಸರಿಸುಮಾರು ಶೇ. 23.76 ರಷ್ಟು ಆಗುತ್ತದೆ. 816 ಸದಸ್ಯರ ಸದನದಲ್ಲಿ 195 ಸಂಸದರು ಕುಳಿತುಕೊಳ್ಳುತ್ತಾರೆ ಮತ್ತು ಅವರ ಪ್ರಾತಿನಿಧ್ಯ 23.97% ಆಗಿರುತ್ತದೆ ಎಂದು ವಿವರಿಸಿದರು.

ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುವುದರಿಂದ ಪ್ರತಿಯೊಬ್ಬ ಸಂಸದರು ಪ್ರತಿನಿಧಿಸುವ ಮತದಾರರ ಸಂಖ್ಯೆ ಕಡಿಮೆಯಾಗುತ್ತದೆ. ಉದಾಹರಣೆಗೆ ಕರ್ನಾಟಕದಲ್ಲಿ ಒಬ್ಬ ಸಂಸದರು 25 ಲಕ್ಷ ಜನರ ಬದಲಿಗೆ ಸುಮಾರು 16 ಲಕ್ಷ ಜನರನ್ನು ಪ್ರತಿನಿಧಿಸುತ್ತಾರೆ, ಇದರಿಂದ ಅಭಿವೃದ್ಧಿ ಕಾರ್ಯಗಳು ಸುಲಭವಾಗುತ್ತವೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಅಮಿತ್ ಶಾ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಏನಿದು ಪ್ರೊ-ರಾಟ?

ದಕ್ಷಿಣ ಭಾರತದ ರಾಜ್ಯಗಳ ಆತಂಕವನ್ನು ಹೋಗಲಾಡಿಸಲು, ಸರ್ಕಾರವು ಜನಸಂಖ್ಯೆಯ ಆಧಾರದ ಮೇಲೆ ಸ್ಥಾನಗಳನ್ನು ಹಂಚುವ ಬದಲಿಗೆ, ಈಗಿರುವ ಅದೇ ಅನುಪಾತದಲ್ಲಿ ಸ್ಥಾನಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಅಂದರೆ ಸಂಸತ್ತಿನಲ್ಲಿ ರಾಜ್ಯವೊಂದರ ಇಂದಿನ ಪ್ರಾತಿನಿಧ್ಯದ ಶೇಕಡಾವಾರು ಪಾಲು ಹೊಸ ವ್ಯವಸ್ಥೆಯಲ್ಲೂ ಹೆಚ್ಚು ಕಡಿಮೆ ಅಷ್ಟೇ ಇರಲಿದೆ.

ಲೋಕಸಭೆಯಲ್ಲಿ ಏಪ್ರಿಲ್ 16 ರಂದು ಮಂಡಿಸಲಾದ ‘ಕ್ಷೇತ್ರ ಮರುವಿಂಗಡಣೆ ಮಸೂದೆ-2026’ ರ ಅನ್ವಯ ದೇಶದ ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಈಗಿರುವ ಸಂಖ್ಯೆಗಿಂತ ಸಮಾನವಾಗಿ ಶೇ. 50 ರಷ್ಟು ಹೆಚ್ಚಿಸುವ ವಿಶಿಷ್ಟ ಸೂತ್ರವನ್ನು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ.

ಶೇ.33 ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವಾಗ, ಪ್ರಸ್ತುತ ಇರುವ ಪುರುಷ ಸಂಸದರ ಸಂಖ್ಯೆಗೆ ಧಕ್ಕೆಯಾಗದಂತೆ ಹೆಚ್ಚುವರಿ ಸ್ಥಾನಗಳನ್ನು ಸೃಷ್ಟಿಸುವುದು ಈ 50% ಹೆಚ್ಚಳದ ಹಿಂದಿನ ಮುಖ್ಯ ಉದ್ದೇಶವಾಗಿದೆ.

ಈ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಂವಿಧಾನದ 81 ಮತ್ತು 82ನೇ ವಿಧಿಗಳಿಗೆ ತಿದ್ದುಪಡಿ ತರಲಾಗುತ್ತಿದೆ, ಇದು 2011ರ ಜನಗಣತಿಯನ್ನೇ ಆಧಾರವಾಗಿರಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

Leave a Comment