ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಮಂಗಳವಾರ (ಏ.22), ಪಾಕಿಸ್ತಾನದ ಮನವಿ ಮೇರೆಗೆ ಕದನ ವಿರಾಮ (Ceasefire) ವಿಸ್ತರಣೆ ಮಾಡಿರುವುದಾಗಿ ತಿಳಿಸಿದ್ದಾರೆ.
ಕದನ ವಿರಾಮಕ್ಕೆ ಈ ಹಿಂದೆ ಕೊಟ್ಟಿದ್ದ ಡೆಡ್ ಲೈನ್ ಮುಕ್ತಾಯದ ಹಿನ್ನೆಲೆಯಲ್ಲಿ ಕದನ ವಿರಾಮ ಅಮೆರಿಕ ಮತ್ತೆ ಕೆಲ ದಿನಗಳ ಕಾಲ ಮುಂದುವರಿಸಿದೆ. ಆದ್ರೆ ಹಾರ್ಮುಜ್ ಜಲಸಂಧಿ ದಿಗ್ಬಂಧನ (Hormuz Strait Blockade) ಮುಂದುವರಿಯಲಿದೆ ಎಂದು ಟ್ರಂಪ್ ಹೇಳಿದ್ದಾರೆ.
7 ವಾರಗಳ ಯುದ್ಧದಲ್ಲಿ (US Iran War) ಸಾವಿರಾರು ಜನ ಮೃತಪಟ್ಟಿದ್ದು, ವಿಶ್ವದ ಆರ್ಥಿಕತೆ ಮೇಲೂ ದೊಡ್ಡ ಪೆಟ್ಟು ಬಿದ್ದಿದೆ. ಇದಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಸಂಧಾನ ಮಾತುಕತೆಗೆ ಅಮೆರಿಕ ಮುಂದಾಗಿದೆ. ಸದ್ಯ ಮಿಲಿಟರಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ಟಂಪ್ ಹೇಳಿದ್ದೇನು?
ಕದನ ವಿರಾಮ ವಿಸ್ತರಣೆ ಬಗ್ಗೆ ಮಾತನಾಡಿರುವ ಟ್ರಂಪ್, ಪಾಕಿಸ್ತಾನದ ಮನವಿ ಸ್ವೀಕರಿಸಿ, ಅದರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಸಿ, ಇರಾನ್ ನಾಯಕರು ಒಪ್ಪಂದಕ್ಕೆ ಮುಂದೆ ಬರುವವರೆಗೂ ದಾಳಿಯನ್ನ ತಡೆಯಲಾಗುವುದು ಎಂದಿದ್ದಾರೆ. ಇದೇ ವೇಳೆ ಇರಾನ್ ಬಂದರುಗಳಿಗೆ ದಿಗ್ಬಂಧನ ಹಾಕಿರುವ ಅಮೆರಿಕದ ನೌಕಾ ಸೇನಾ ಕಾರ್ಯಾಚರಣೆ ಮುಂದುವರಿಯಲಿದೆ ಎಂದಿದ್ದಾರೆ.
ಇದಕ್ಕೆ ಇರಾನ್ ಪ್ರಮುಖ ನಾಯಕರು ತಕ್ಷಣದ ಪ್ರತಿಕ್ರಿಯೆ ಏನೂ ನೀಡಿಲ್ಲ.
ಆದರೆ ಮಾಧ್ಯಮಗಳ ಪ್ರಕಾರ ಟೆಹ್ರಾನ್ ಕಡೆಯಿಂದ ಕದನ ವಿರಾಮಕ್ಕೆ ಯಾವುದೇ ಮನವಿ ಮಾಡಿರಲಿಲ್ಲ ಎಂದು ಹೇಳಿದೆ. ಇರಾನ್ ಜೊತೆಗಿನ ಸಂಧಾನ ಮುಗಿಯುವವರೆಗೆ ಕದನ ವಿರಾಮ ಮುಂದುವರಿಯಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ದೊಡ್ಡ ದಾಳಿಯ ಎಚ್ಚರಿಕೆ
ಒಂದು ವೇಳೆ ಸಂಧಾನ ಮಾತುಕತೆ ಮುರಿದು ಬಿದ್ದರೆ ಮರುಕ್ಷಣವೇ ಅಮೆರಿಕ ರಕ್ಷಣಾ ಪಡೆಗಳು ದೊಡ್ಡ ಮಟ್ಟದ ಕಾರ್ಯಾಚರಣೆ ಆರಂಭಿಸಲಿವೆ. ಇರಾನ್ ಮೇಲೆ ಬಾಂಬ್‌ಗಳ ಸುರಿಮಳೆಯಾಗಲಿದೆ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ಟ್ರಂಪ್, ಸಂಘರ್ಷ ಅಂತ್ಯಗೊಳಿಸುವ ನಿಟ್ಟಿನಲ್ಲಿ ಸಂಧಾನ ಮಾತುಕತೆಯ ಮೂಲಕ ಒಪ್ಪಂದಕ್ಕೆ ಬರುವುದನ್ನ ಬಿಟ್ಟು ಇರಾನ್‌ಗೆ ಬೇರೆ ಆಯ್ಕೆಯಿಲ್ಲ. ನಿಗದಿಯಂತೆ ಪಾಕಿಸ್ತಾನದಲ್ಲಿ ಮಾತುಕತೆ ನಡೆಯಲಿದೆ. ಉತ್ತಮ ಒಪ್ಪಂದ ಮೂಡುವ ವಿಶ್ವಾಸವಿದೆ. ಇರಾನ್ ಜೊತೆಗಿನ ಸಂಘರ್ಷ ಉತ್ತಮ ಒಪ್ಪಂದದ ಜತೆ ಕೊನೆಯಾಗುವ ಭರವಸೆ ಇದೆ. ರಾಜತಾಂತ್ರಿಕ ಮಾತುಕತೆಗೆ ಮೂಲಕ ಪರಿಹಾರ ಕಂಡುಕೊಳ್ಳುವ ಬಯಕೆಯಿದೆ. ಇರಾನ್ ಮೊಂಡುತನದಿಂದ ಮಾತುಕತೆ ಮುರಿದು ಬಿದ್ದರೆ ಸಮರ ಮುಂದುವರಿಸಲು ನಮ್ಮ ರಕ್ಷಣಾ ಪಡೆಗಳು ಸನ್ನದ್ಧವಾಗಿವೆ ಎಂದು ಎಚ್ಚರಿಸಿದ್ದಾರೆ.














