ಮೊದಲ ಹೆಜ್ಜೆ!

Coastal Bulletin
ಮೊದಲ ಹೆಜ್ಜೆ!

ಮೊದಲ ಹೆಜ್ಜೆ

ಹತ್ತನೆ ತರಗತಿ ಮುಗಿದು ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ ನನ್ನಲ್ಲಿ ಕಾಡುತ್ತಿದ್ದ ಭಯವೊಂದೇ... ಚಿಕ್ಕವಯಸ್ಸಿನಿಂದ ಒಂದು ಬಾರಿಯೂ ಎಲ್ಲರ ಮುಂದೆ ವೇದಿಕೆ ಹತ್ತಿದವಳಲ್ಲ, ಯಾವುದೇ ವಿಷಯದ ಕುರಿತು ಚರ್ಚೆ ಮಾಡಿದವಳಲ್ಲ, ಯಾರ ಜತೆಯಲ್ಲೂ ಹೆಚ್ಚು ಮಾತನಾಡಿದವಳಲ್ಲ. ಆದರೆ ಇದು ಕಾಲೇಜು, ಮೊದಲ ದಿನವೇ ನಮ್ಮ ಪರಿಚಯವನ್ನು ಎಲ್ಲರಿಗೂ ಹೇಳಲು ಇರುತ್ತೆ ಮಾತ್ರವಲ್ಲ ಅದು ಇದು ಎಂಬಂತೆ ಸೆಮಿನಾರ್ ಗಳನ್ನು ಕೊಟ್ಟರೆ ಆ ವಿಷಯದ ಬಗ್ಗೆ ಮಾತನಾಡಬೇಕಾಗುತ್ತದೆ ಎಂದು ನನ್ನ ಗೆಳತಿ ಆಗಾಗ ಹೇಳುತ್ತಿದ್ದಳು. ಅವಳು ಅಂದು ಹೇಳಿದ ಮಾತು ಇವತ್ತು ತಲೆನೋವು ಹೆಚ್ಚು ಮಾಡುತ್ತಿತ್ತು. ಹಾಗೋ ಹೀಗೋ ಅನ್ನುವಂತೆ ತರಗತಿಗೆ ತಲುಪುತ್ತಿದ್ದಂತೆ ಅದಾಗಲೇ ಕ್ಲಾಸ್ ಆರಂಭಗೊಂಡು ಎಲ್ಲರೂ ಅವರವರ ಪರಿಚಯವನ್ನು ಹೇಳುತ್ತಿದ್ದರು. ಇದನ್ನು ನೋಡಿದ ನನಗೂ ಕೈಕಾಲು ನಡುಗಲಾರಂಭಿಸಿತು. ಹೊರಗೆ ನಿಂತುಕೊಂಡು ತರಗತಿಯಲ್ಲಿ ಆಗುವ ಚಟುವಟಿಕೆಗಳನ್ನು  ಗಮನಿಸುತ್ತಿದ್ದಂತೆ “ವೆಲ್‍ಕಮ್” ಎಂದು ಸ್ವರ ಕೇಳಿದಾಗ ತಲೆ ಎತ್ತಿ ನೋಡಿದೆ. ನಗು ನಗುತ್ತ ಮೇಡಂ ನುಡಿದಾಗ ನಾನು ವಾಸ್ತವಕ್ಕೆ ಬಂದು ಕ್ಲಾಸ್‍ರೂಂ ಒಳಗಡೆ ನಡೆದೆ.

 ಎಲ್ಲರೂ ಅಪರಿಚಿತರು ಎಷ್ಟೇ ಇಣುಕಿ ನೋಡಿದರೂ ನನ್ನ ಹಳೆ ಸ್ನೇಹಿತರ ಪತ್ತೆನೇ ಇರಲಿಲ್ಲ,ಕುಳಿತುಕೊಳ್ಳಲು ಜಾಗ ಹುಡುಕುತ್ತಿದ್ದಂತೆ ಅದು ಯಾರೋ ಸ್ವಲ್ಪ ಸರಿದು “ಬಾ ಇಲ್ಲಿ ಕುಳಿತು ಕೊ” ಎಂದು ಹೇಳಿದಾಗ ಅವಳ ಮುಖ ನೋಡಿದೆ. ಮಂದಹಾಸ ಬೀರುತ್ತ ನನ್ನ ವಿಳಾಸ ಕೇಳ ತೊಡಗಿದಳು. ಅದು ಯಾವ ಕಾರಣಕ್ಕೂ ಏನೋ ಅವಳ ಮಾತೇ ಕಿವಿಗೆ ಕೇಳಿಸುತ್ತಿರಲಿಲ್ಲ. ನನ್ನ ಸರದಿ ಯಾವಾಗ ಬರುತ್ತದೋ, ಇನ್ನು ಇವರ ಮುಂದೆ ಏನೆಂದು ಮಾತನಾಡಲಿ ಎಂಬೆಲ್ಲಾ ಪ್ರಶ್ನೆಗಳು ಮನದಲ್ಲಿ ಮೂಡುತ್ತಿತ್ತು. ಅಷ್ಟೊತ್ತಿಗೆ ಮೇಡಂ ನನ್ನ ಹೆಸರು ಕರೆದರು. “ಅಯ್ಯೋ ನನ್ನ ಸರದಿ ಬಂದೇ ಬಿಟ್ಟಿತಾ!” ಎನ್ನುತ್ತ ಮುಂದೆ ನಡೆದೆ. ಎದೆ ಬಡಿತ ಜಾಸ್ತಿಯಾಗಿ ತುಟಿ ಒಣಗಿ ಹೋಯಿತು, ಮುಂದೇನು ಮಾತನಾಡುವ ಅನ್ನುವಷ್ಟರಲ್ಲಿ ಕಣ್ಣು  ಮಂಜಾಗಲಾರಂಭಿಸಿ ನಿದ್ದೆ ಬರುತ್ತಿದೆಯಾ? ತಲೆ ತಿರುಗುತಿದೆಯಾ? ಎಂಬುದು ತಿಳಿದುಕೊಳ್ಳುವಷ್ಟರಲ್ಲಿ ನೆಲಕ್ಕೆ ಒರಗಿ ಹೋದೆ. ಸ್ವಲ್ಪ ಹೊತ್ತಲ್ಲಿ ಕಣ್ಣು ಬಿಟ್ಟು ನೋಡಿದರೆ ಸುತ್ತಲು ಜನ ನಿಂತಿದ್ದರು. ಆ ಸಮಯದಲ್ಲಿ ಮೇಡಂ ಏನಾಯಿತಮ್ಮ? ನೀನು ಮೊದಲ ಸಲವ ಎಲ್ಲರ ಮುಂದೆ ಮಾತನಾಡುವುದು ಅಷ್ಟೊಂದು ಭಯನ ಎಂದು ಕೇಳಿದಾಗ “ಹೂಂ” ಎನ್ನುತ ತಲೆ ತಗ್ಗಿಸಿದೆ. ಇದನ್ನು ಕೇಳಿದ್ದೇ ತಡ ಅಲ್ಲೇ ಇದ್ದ ಉಳಿದ ಸಹಪಾಠಿಗಳು ನಗಲು ಪ್ರಾರಂಭಿಸಿದರು.


 ಲೇಖನ : ಚೈತ್ರಲಕ್ಷ್ಮಿ ಬಾಯಾರು

 ದ್ವಿತಿಯ ಎಂ.ಸಿ.ಜೆ ,ವಿವೇಕಾನಂದ ಕಾಲೇಜು  

 ಪುತ್ತೂರು

Leave a Comment