ಕಂಬಳದ ಉಸೇನ್ ಬೋಲ್ಟ್ ಎಂದು ಖ್ಯಾತರಾಗಿರುವ ಶ್ರೀನಿವಾಸ್ ಗೌಡ ಅವರಿಗೆ ದೂರವಾಣಿ ಕರೆ ಮೂಲಕ ವ್ಯಕ್ತಿಯೊಬ್ಬರು ನಿಂದಿಸಿರುವ ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಂಬಳ ಆಯೋಜಕರು ಹಾಗೂ ಅವರ ಅಭಿಮಾನಿಗಳು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಂಬಳದಲ್ಲಿ ಮಿಂಚಿನ ಓಟದ ಮೂಲಕ ಜಗತ್ಪ್ರಸಿದ್ದನಾಗಿದ್ದ ಅಶ್ವತ್ಥಪುರ ಶ್ರೀನಿವಾಸ ಗೌಡ ಅವರಿಗೆ ದೂರವಾಣಿ ಮೂಲಕ ಪ್ರಶಾಂತ್ ಬಂಗೇರ ಎಂಬ ಯುವಕ ನಿಂದಿಸಿ ಬೆದರಿಕೆಯೊಡ್ಡಿದ್ದಾನೆ.ಕಂಬಳದ ಕುರಿತು ಪ್ರಶಾಂತ್ ಎಂಬಾತನ ಜತೆ ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗ, ಆತ ಶ್ರೀನಿವಾಸ ಗೌಡರ ಕುಟುಂಬದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ
ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಯ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಶಾಸಕ ಉಮಾನಾಥ ಕೋಟ್ಯಾನ್ ಸೂಚನೆ ನೀಡಿದ್ದಾರೆ.ಸಾಧಕ ಓಟಗಾರನಿಗೆ ಅವಹೇಳನ ಮಾಡಿರುವುದನ್ನು ಮಾಜಿ ಸಚಿವ ಅಭಯಚಂದ್ರ ಜೈನ್, ಕಂಬಳ ಕ್ಷೇತ್ರದ ಪ್ರಮುಖರು, ಕಂಬಳಾಭಿಮಾನಿಗಳು ಖಂಡಿಸಿದ್ದು ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.
















