ಮಂಗಳೂರು: ಲಕ್ಷಾಂತರ ರೂ ಬೆಲೆ ಬಾಳುವ ಹೈಡೋವೀಡ್ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮಂಗಳೂರಿನ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಪ್ರತಿಷ್ಟಿತ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ಮೆಡಿಕಲ್ ವಿದ್ಯಾರ್ಥಿನಿ ಮಿನು ರಶ್ಮಿ ಮತ್ತು ಕಾಸರಗೋಡಿನ ಮಂಗಲ್ಪಾಡಿ ನಿವಾಸಿ ಅಜ್ಮಲ್ ಬಂಧಿತ ಆರೋಪಿಗಳು.
ಮಂಗಳೂರು ಹೊರವಲಯದ ದೇರಳಕಟ್ಟೆ ಬಳಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಇವರ ಬಳಿಯಿದ್ದ ಸುಮಾರು 30 ಲಕ್ಷದಿಂದ ಒಂದು ಕೋಟಿ ವರೆಗೆ ಬೆಲೆ ಬಾಳುವ ಒಂದು ಕೆಜಿ 250 ಗ್ರಾಮ್ ಹೈಡೋವೀಡ್ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.ಪ್ರಮುಖ ಆರೋಪಿ ಡಾ.ನದೀರ್ ದುಬೈ ನಲ್ಲಿದ್ದು ಆತನ ಸೂಚನೆಯಂತೆ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಹೈಡೋವೀಡ್ ಅತೀ ಹೆಚ್ಚು ಅಮಲು ಬರಿಸುವ ಗಾಂಜಾ ಪದಾರ್ಥವಾಗಿದ್ದು ಇವನ್ನು ಹೆಚ್ಚು ದರಕ್ಕೆ ಮಾರಾಟ ಮಾಡಲಾಗುತ್ತದೆ.
ಯುರೋಪ್ ರಾಷ್ಟ್ರಗಳಲ್ಲಿ ಇದನ್ನು ಬೆಳೆಯಲಾಗುತ್ತಿದ್ದು ಅಕ್ರಮವಾಗಿ ಭಾರತಕ್ಕೆ ತಂದು ಮಾರಾಟ ಮಾಡಲಾಗುತ್ತದೆ.
ಮಿನು ರಶ್ಮಿ ಮೂಲತಃ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೋಯ್ ನಿವಾಸಿಯಾಗಿದ್ದು ಮಂಗಳೂರಿನ ಶ್ರೀನಿವಾಸ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿನಿ ಮಂಗಲ್ಪಾಡಿ ನಿವಾಸಿ ಅಜ್ಮಲ್ ಜೊತೆ ಒಡನಾಟ ಹೊಂದಿದ್ದಳು. ಎರಡು ದಿನಗಳ ಹಿಂದೆ ತಮಿಳುನಾಡಿನಿಂದ ರೈಲಿನಲ್ಲಿ ಮಂಗಳೂರಿಗೆ ಬಂದು ಅಜ್ಮಲ್ ಜೊತೆಗೆ ಕಾರಿನಲ್ಲಿ ದೇರಳಕಟ್ಟೆಗೆ ತೆರಳುತ್ತಿದ್ದಳು. ಕಾರಿನಲ್ಲಿ ಹೈಡೋವೀಡ್ ಗಾಂಜಾ ಇರುವ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದಾರೆ.ಇಕಾನಮಿಕ್ ಅಂಡ್ ನಾರ್ಕೋಟಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.















