ಕೋಟ್ಯಾಂತರ ರೂಪಾಯಿಗಳ ಮರ ಕಳ್ಳತನ ಪ್ರಕರಣದಲ್ಲಿ ಎಫ್ ಐ ಆರ್ ನಲ್ಲಿ ವಿಕ್ರಂ ಸಿಂಹನ ಹೆಸರು ಇಲ್ಲದಿದ್ದರೂ ಬಂಧಿಸಲಾಗಿದೆ- ಪ್ರತಾಪ್ ಸಿಂಹ ಆಕ್ರೋಶ.

Coastal Bulletin
ಕೋಟ್ಯಾಂತರ ರೂಪಾಯಿಗಳ ಮರ ಕಳ್ಳತನ ಪ್ರಕರಣದಲ್ಲಿ ಎಫ್ ಐ ಆರ್ ನಲ್ಲಿ ವಿಕ್ರಂ ಸಿಂಹನ ಹೆಸರು ಇಲ್ಲದಿದ್ದರೂ ಬಂಧಿಸಲಾಗಿದೆ- ಪ್ರತಾಪ್ ಸಿಂಹ ಆಕ್ರೋಶ.

ಮೈಸೂರು : ಕೋಟ್ಯಂತರ ರೂಪಾಯಿ ಮೌಲ್ಯದ ಮರಗಳ್ಳತನ, ಅಕ್ರಮವಾಗಿ ಸಾಗಾಟ ಮಾಡಿರುವ ಆರೋಪ ಹಿನ್ನೆಲೆ ಅರಣ್ಯಾಧಿಕಾರಿಗಳು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹರ ಸಹೋದರ ವಿಕ್ರಂ ಸಿಂಹರನ್ನು ಬಂಧಿಸಿದ್ದಾರೆ.

ಎಫ್‌ಐಆರ್‌ನಲ್ಲಿ ವಿಕ್ರಂ ಸಿಂಹರ ಹೆಸರು ಉಲ್ಲೇಖಿಸಿಲ್ಲ. ಎಫ್‌ಐಆರ್‌ನಲ್ಲಿ ಹೆಸರೇ ಇಲ್ಲದಿದ್ದರೂ ಕಾಂಗ್ರೆಸ್ ಸರ್ಕಾರ ರಾಜಕೀಯ ಕಾರಣಕ್ಕಾಗಿ ಸಂಸದರ ಸಹೋದರನನ್ನು ಬಂಧಿಸಿದೆ ಮತ್ತು ಆ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಸಹೋದರನ ಬಂಧನ ವಿಚಾರವಾಗಿ ಸಂಸದ ಪ್ರತಾಪ ಸಿಂಹ ಭಾವುಕವಾಗಿ ಪ್ರತಿಕ್ರಿಯಿಸಿದ್ದಾರೆ.


ಮಾನ್ಯ ಸಿದ್ದರಾಮಯ್ಯ ಅವರಿಗೆ ಸಾಷ್ಟಾಂಗ ನಮಸ್ಕಾರಗಳು. ಅವರನ್ನ ನಾನು ಎರಡು ವಿಚಾರಕ್ಕೆ ಶ್ಲಾಘನೆ ಮಾಡಬೇಕು ಅಂದುಕೊಂಡಿದ್ದೇನೆ. ಮೊದಲನೆಯದಾಗಿ ತನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ, ತಮ್ಮ ಮಗನನ್ನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಲು ಯಾರನ್ನ ಬೇಕಾದರೂ ತುಳಿಯುತ್ತಾರೆ. ಇದನ್ನ ಸಿದ್ದರಾಮಯ್ಯ ಅವರಿಂದ ಕಲಿಯಬೇಕು. ತನ್ನ ಮಗನಿಗೆ ಪ್ರತಾಪ ಸಿಂಹ ಅಡ್ಡಿ‌ ಆಗಿದ್ದಾನೆ ಅಂತಾ ಮುಗಿಸಲು ಮುಂದಾಗಿದ್ದೀರಿ. ನಿಮ್ಮಂತಹ ತಂದೆ ಪ್ರಪಂಚದಲ್ಲೇ ಎಲ್ಲೂ ಸಿಗಲ್ಲ. ಇಂತಹ ತಂದೆ ಎಲ್ಲರಿಗೂ ಸಿಗಲ್ಲ. ನೀವೊಬ್ಬ ಬ್ರಿಲಿಯೆಂಟ್ ಫಾದರ್. ಈ ಕಾರಣಕ್ಕಾಗಿ ನಿಜಕ್ಕೂ‌ ನಿಮ್ಮನ್ನ ಮೆಚ್ಚಿದ್ದೇನೆ. 


ಎರಡನೇ ಕಾರಣ, ನೀವು ಬ್ರಿಲಿಯೆಂಟ್ ಪಾಲಿಟಿಷಿಯನ್. ಬೆಳಗಾವಿಯಲ್ಲಿ ಹಿಂದುಳಿದ ಮಹಿಳೆಯನ್ನ ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದಾರೆ. ಆ ವಿಚಾರವನ್ನ ನೀವು ನನ್ನ ವಿಷಯ ಇಟ್ಟುಕೊಂಡು ಡೈವರ್ಟ್ ಮಾಡಿದ್ದೀರಿ. ಮೀಡಿಯಾ ಅಟೆನ್ಷನ್ ಡೈವರ್ಟ್ ಮಾಡಿದ್ರಿ. ನೀವು, ನಿಮ್ಮ ಸಚಿವ ಸಂಪುಟದ ಸದಸ್ಯರು, ಡಿಸಿಎಂ‌ ಎಲ್ಲರೂ ಪಾರ್ಲಿಮೆಂಟ್ ಪಾಸ್ ಇಟ್ಕೊಂಡು ಮಾತಾಡ್ತೀರಿ. ನಿಮಗೆ 40 ವರ್ಷದ ಅನುಭವವಿದೆ. ನನ್ನ ಹೆಸರು ಇಟ್ಟುಕೊಂಡು, ತನಿಖೆ ನಡೆಸಬೇಕೆಂದು ವಿಷಯ ಹಸ್ತಾಂತರಿಸಿದ್ರಿ. ಇಲ್ಲಿ ನಿಮ್ಮ ಮಗ ಸುಪುತ್ರ ಮಿನಿಟ್ ಕೊಡುವ ಬದಲು ನನ್ನ ವಿರುದ್ಧ ತನಿಖೆ‌‌ ಆಗಬೇಕು ಅಂತೀರಿ! ನಿನ್ನೆಯ ಘಟನೆಯಲ್ಲೂ ಆರೂವರೆ ಕೋಟಿ ಚೆಕ್ ಬೌನ್ಸ್ ಮಾಡಿದ್ದು ಮಧು ಬಂಗಾರಪ್ಪ. ಆರು ತಿಂಗಳು ಜೈಲು ಸಜೆಗೆ ಒಳಗಾಗಿರುವುದು ಮಧುಬಂಗಾರಪ್ಪ. ಆದರೆ ಪ್ರತಾಪಸಿಂಹನ ತಮ್ಮನನ್ನ ಬಂಧಿಸಿದ್ದೀರಿ! ಅದೂ ಸಿನಿಮೀಯ ಶೈಲಿಯಲ್ಲಿ ಚೇಸ್ ಮಾಡಿ ಬಂಧಿಸಿದ್ದೀರಿ. ಹೀಗಾಗಿ

ನಿಜಕ್ಕೂ‌ ನೀವು ಬ್ರಿಲಿಯಂಟ್ ಪಾಲಿಟಿಕ್ಸ್ ಮಾಡಿದ್ದೀರಿ ಎಂದು ಸಂಸದ ಪ್ರತಾಪ್ ಸಿಂಹ ಕಿಡಿ ಕಾರಿದ್ದಾರೆ.


ಡಿ.16 ರಂದು ಬೇಲೂರಿನ ಜಮೀನಿನ ವಿಚಾರಕ್ಕೆ ನನ್ನ ತಮ್ಮನ ಹೆಸರು ಎಳೆದು ತಂದ್ರಿ. ಮರವನ್ನ ಕಡಿದಿದ್ದಾರೆ‌ ಎಂದು ಎಫ್ ಐ ಆರ್ ದಾಖಲು ಮಾಡಲಾಯಿತು. ಪ್ರಕರಣದಲ್ಲಿ‌ ಜಯಮ್ಮ, ರಾಜೇಶ್ ಶೆಟ್ಟಿ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ. ರವಿ ಎಂಬವರು ಸಹಾಯ ಮಾಡಿದ್ರು ಪರಾರಿ ಆಗಿದ್ದಾರೆ. ಈವರಗೆ ಮೂವರನ್ನು ಹಿಡಿಯಲು ಆಗಿಲ್ಲ. ಎಲ್ಲಾ ಮರಗಳನ್ನ ಹಾಸನದ ಅರಣ್ಯ ಭವನದಲ್ಲಿ ಇರಿಸಿದ್ದೀರಿ. 24 ನೇ ತಾರೀಖಿನವರಗೆ ನೀವು ಅವರನ್ನ ಬಂಧಿಸಲು ಸಾಧ್ಯವಾಗಿಲ್ಲ. ಹನುಮ ಜಯಂತಿ‌ ಸಂದರ್ಭ ನಾನು ಒಂದು ‌ಹೇಳಿಕೆ ನೀಡಿದ್ದೆ. ಅದಾದ ಎರಡೇ ಗಂಟೆಯಲ್ಲಿ ಪ್ರತಾಪ ಸಿಂಹನ ತಮ್ಮ ಮರಗಳ್ಳತನ ಮಾಡಿದ ಅಂತ ಕಾಂಗ್ರೆಸ್ ನವರು ಪೋಸ್ಟ್ ಹಾಕಿದ್ರು. ಇಲ್ಲೊಂದು ವಿಷಯ ಗಮನಿಸಬೇಕು ಎಫ್ ಐ ಆರ್ ನಲ್ಲಿ  ಎಲ್ಲೂ ನನ್ನ ತಮ್ಮನ ಹೆಸರೇ ಇಲ್ಲ. ಆದರೂ ಆತನನ್ನ ಬಂಧಿಸುವ ಮೂಲಕ ಪ್ರತಾಪಸಿಂಹನನ್ನ ಮುಗಿಸುವ ಯತ್ನ ನಡೆಸಿದ್ದೀರಿ. ನಿಜವಾಗ್ಲೂ ನನ್ನ ತಮ್ಮ ತಲೆಮರೆಸಿಕೊಂಡಿದ್ನಾ? ಎರಡು‌ದಿನ ಮೊದಲೇ ನನ್ನ ತಮ್ಮ ಅರಣ್ಯ ಇಲಾಖೆಗೆ ತೆರಳಿ ಹೇಳಿಕೆ ದಾಖಲಿಸಿದ್ದಾನೆ. ಆಗಲೂ ಆತನ ವಿರುದ್ಧ ಎಫ್‌ಐ ಆರ್ ಆಗಿಲ್ಲ. ಎಫ್‌ಐಆರ್ ನಲ್ಲಿ ಹೆಸರೇ ಇಲ್ಲದಿರುವಾಗ ಯಾಕೆ ತಲೆಮರೆಸಿಕೊಳ್ಳಬೇಕು? ಈ ಪ್ರಕರಣದಲ್ಲಿ ತಲೆಮರೆಸಿಕೊಂಡ ಮೂವರನ್ನು ಇನ್ನೂ ಹಿಡಿಯಲಾಗದ ಅರಣ್ಯಾಧಿಕಾರಿಗಳು, ರಾಜಕೀಯ ಒತ್ತಡಕ್ಕೆ ನನ್ನ ಸಹೋದರನನ್ನು ಬಂಧಿಸಿದ್ದಾರೆ. ಪ್ರತಾಪ ಸಿಂಹ ಸಹೋದರ ತಲೆಮರೆಸಿಕೊಂಡಿದ್ದ ಎಂದು ದಾರಿ ತಪ್ಪಿಸುತ್ತಿದ್ದೀರಿ. ನಿಮ್ಮ ಮಗನ ರಾಜಕೀಯ ವಿಷ್ಯಕ್ಕಾಗಿ ಪ್ರತಾಪಸಿಂಹನನ್ನ ಎಲ್ಲಾ‌ರೀತಿ ತುಳಿಯುವ ಪ್ರಯತ್ನ ಮಾಡ್ತೀರಿ? ನನ್ನ ಚಾರಿತ್ರ್ಯವಧೆ ಮಾಡ್ತಿದ್ದೀರಿ. ಆ ಮೂಲಕ ನನ್ನ ಕುಟುಂಬದವರನ್ನ ಬೀದಿಗೆ ಎಳೆದು ತರುತ್ತಿದ್ದೀರಿ ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕಾಗಿ ಕಂಡೋರ ಮಕ್ಕಳನ್ನು ಬಲಿಕೊಡೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

Leave a Comment