ಬಂಟ್ವಾಳ:ಜಿಲ್ಲೆಯಾದ್ಯಂತ ಒಟ್ಟು ಐದು ಕಡೆ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ಆಯೋಜಿಸಲಾಗಿದ್ದು ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯಬೇಕು, ಮೂಲಭೂತವಾದ ಹಾಗೂ ಭಯೋತ್ಪಾದನೆಗೆ ಅಂತ್ಯ ಹಾಡಬೇಕು ಮತ್ತು ತ್ರಿಖಂಡವಾಗಿರುವ ಭಾರತ ಮತ್ತೆ ಅಖಂಡ ಭಾರತವಾಗಬೇಕು ಎಂಬ ಆಶಯವೇ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲಾ ಮುಖಂಡ ನರಸಿಂಹ ಮಾಣಿ ಹೇಳಿದರು.
ಅವರು ಶನಿವಾರ ಬಿ.ಸಿ.ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆಯ ನೇತೃತ್ವದಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಜಿಲ್ಲೆಯಾದ್ಯಂತ ಒಟ್ಟು ಐದು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಪಂಜಿನ ಮೆರವಣಿಗೆ ಹಾಗೂ ವಾಹನ ಜಾಥಾ ನಡೆಯಲಿದೆ ಎಂದು ಅವರು ತಿಳಿಸಿದರು.
ವಿಟ್ಲ ತಾಲೂಕಿನಲ್ಲಿ ವಾಹನ ಜಾಥಾ
ಆ.9ರಂದು ವಿಟ್ಲ ತಾಲೂಕಿನಲ್ಲಿ ಅಖಂಡ ಭಾರತ ಸಂಕಲ್ಪ ದಿನ ಹಾಗೂ ವಾಹನ ಜಾಥಾ ನಡೆಯಲಿದೆ. ಸಂಜೆ 3 ಗಂಟೆಗೆ ಮಾಣಿ ಜಂಕ್ಷನ್, ವೀರಕಂಬ ಗಣೇಶ ಮಂದಿರ ಹಾಗೂ ಪಾಣೆಮಂಗಳೂರು ಸತ್ಯದೇವತೆ
ದೈವಸ್ಥಾನದಿಂದ ಏಕಕಾಲದಲ್ಲಿ ವಾಹನ ಜಾಥಾಗಳು ಆರಂಭವಾಗಲಿವೆ. ಮೂರು ಜಾಥಾಗಳು ಕಲ್ಲಡ್ಕಕ್ಕೆ ಆಗಮಿಸಲಿದ್ದು, ಬಳಿಕ ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಉಳ್ಳಾಲ ತಾಲೂಕಿನಲ್ಲಿ ಕಾರ್ಯಕ್ರಮ
ಉಳ್ಳಾಲ ತಾಲೂಕಿನಲ್ಲಿ ಆ.9ರಂದು ಅಖಂಡ ಭಾರತ ಸಂಕಲ್ಪ ದಿನ ಹಾಗೂ ವಾಹನ ಜಾಥಾ ನಡೆಯಲಿದೆ. ಸಂಜೆ 3 ಗಂಟೆಗೆ ತಲಪಾಡಿ ಮಹಾದ್ವಾರದ ಬಳಿಯಿಂದ ವಾಹನ ಜಾಥಾ ಆರಂಭವಾಗಲಿದ್ದು, ಬಳಿಕ ತಲಪಾಡಿ ದೇವಿಪುರ ದೇವಸ್ಥಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.
















