ಬೆಂಗಳೂರು : ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿಯಲ್ಲಿ ಗಲಭೆ ಪ್ರಕರಣದ ಪ್ರಮುಖ ಆರೋಪಿಯನ್ನು ಎನ್‌ಐಎ ಬಂಧಿಸಿದೆ. ಗಲಭೆ ಬಳಿಕ ನಾಪತ್ತೆಯಾಗಿದ್ದ ಗೋವಿಂದಪುರದ ನಿವಾಸಿ ಸೈಯದ್ ಅಬ್ಬಾಸ್ ಬಂಧನವಾಗಿದೆ.
ಈ ಪ್ರಕರಣ ಸಂಬಂಧ 2020 ರ ಆಗಸ್ಟ್ 12 ರಂದು ಎಫ್ಐಆರ್ ದಾಖಲಾಗಿತ್ತು. ಎಫ್ಐಆರ್ ದಾಖಲಾದ ಬಳಿಕ ಪ್ರಕರಣವನ್ನು ಎನ್ಐಎಗೆ ವರ್ಗಾವಣೆ ಮಾಡಲಾಗಿತ್ತು. 2020 ರ ಆಗಸ್ಟ್ 11 ರಂದು ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯನ್ನು ಸೈಯದ್ ಅಬ್ಬಾಸ್ ಧ್ವಂಸ ಮಾಡಿದ್ದ. ಸೈಯದ್ ಅಬ್ಬಾಸ್ ಗಲಭೆ ವೇಳೆ ಹಲವು ಪೊಲೀಸರ ಮೇಲೆ ಹಲ್ಲೆ ಮಾಡಿದ್ದ. ಹಲ್ಲೆ ಬಳಿಕ ಠಾಣೆಗೆ
ಬೆಂಕಿ ಇಟ್ಟಿದ್ದು ಸಹ ಇದೇ ಸೈಯದ್ ಅಬ್ಬಾಸ್ ಎಂದು ತಿಳಿದುಬಂದಿತ್ತು.
ಈಗಾಗಲೇ ಪ್ರಕರಣ ಸಂಬಂಧ 138 ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ದಾಖಲು ಮಾಡಲಾಗಿದೆ. ಎನ್‌ಐಎ ಸ್ಪೆಷಲ್ ಕೋರ್ಟ್ ಮುಂದೆ ಆರೋಪಿಯನ್ನು ಹಾಜರು ಪಡಿಸಿದ ಎನ್‌ಐಎ, 6 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಲಾಗಿದೆ. ಸೈಯದ್ ಅಬ್ಬಾಸ್ ನಾಗವಾರ ಎಸ್ಡಿಪಿಐ ಅಧ್ಯಕ್ಷನೂ ಆಗಿದ್ದ ಎಂದು ತಿಳಿದುಬಂದಿದೆ.















