ಮಂಗಳೂರು:'ಕುಂಭ ಕಲಾವಳಿ ಕುಲಾಲ ಕಲಾ ಸೇವಾಂಜಲಿʼ ಕಾರ್ಯಕ್ರಮ ಸೇನಾನಿ ಚಂದಪ್ಪ ಮೂಲ್ಯರಿಗೆ ಸೇನಾ ಸಿಂಧೂರ ಪ್ರಶಸ್ತಿ

Coastal Bulletin
ಮಂಗಳೂರು:'ಕುಂಭ ಕಲಾವಳಿ ಕುಲಾಲ ಕಲಾ ಸೇವಾಂಜಲಿʼ ಕಾರ್ಯಕ್ರಮ ಸೇನಾನಿ ಚಂದಪ್ಪ ಮೂಲ್ಯರಿಗೆ ಸೇನಾ ಸಿಂಧೂರ ಪ್ರಶಸ್ತಿ

ಮಂಗಳೂರು: ಮಂಗಳೂರಿನ ಪುರಭವನದಲ್ಲಿ ಜ.4ರಂದು ನಡೆದ ʼಕುಂಭ ಕಲಾವಳಿ ಕುಲಾಲ ಕಲಾ ಸೇವಾಂಜಲಿʼ ಕಾರ್ಯಕ್ರಮದಲ್ಲಿ ಬಿಎಸ್ಸೆಫ್ ನಿವೃತ ಡೆಪ್ಯುಟಿ ಕಮಾಂಡೆಂಟ್ ಉಪ್ಪಿನಂಗಡಿಯ ಚಂದಪ್ಪ ಮೂಲ್ಯ ಅವರಿಗೆ ಸೇನಾ ಸಿಂಧೂರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಿಎಸ್ಎಫ್ ನಲ್ಲಿ 37 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಚಂದಪ್ಪ ಮೂಲ್ಯರಿಗೆ 1971 ರಲ್ಲಿ ಭಾರತ- ಪಾಕಿಸ್ತಾನ ಯುದ್ಧದಲ್ಲಿ ಭಾಗವಹಿಸಿ ಉತ್ತಮ ನೇತೃತ್ವ ನೀಡಿರುವುದಕ್ಕಾಗಿ ಭಾರತ ಸರಕಾರವು ʼಸಂಗ್ರಾಮ ಮೆಡಲ್ʼ, ʼಪಶ್ಚಿಮ ಸ್ಟಾರ್ʼ, ʼಸೇನಾ ಮೆಡಲ್ʼ ನೀಡಿ ಗೌರವಿಸಿದೆ. ಪಂಜಾಬಿನಲ್ಲಿ ಉಗ್ರವಾದಿಗಳ ವಿರುದ್ಧ ಹೋರಾಟ, ಅಮೃತಸರ್ ಗೋಲ್ಡನ್ ಟೆಂಪಲ್ ಬ್ಲೂ ಸ್ಟಾರ್ ಆಪರೇಷನ್ ಗಳಲ್ಲಿ ಭಾಗವಹಿಸಿ ಗಣನೀಯ ಸೇವೆ ಸಲ್ಲಿಸಿರುವುದಕ್ಕೆ ʼಗರಾಜ್ ಮೆಡಲ್,ʼ ʼವಿಶಿಷ್ಟ ಸೇವಾ ಮೆಡಲ್ʼ, ಏಳು ವರ್ಷಗಳವರೆಗೆ ಪ್ರಧಾನ ಮಂತ್ರಿಗಳು ಮತ್ತು ವಿವಿಧ ಗಣ್ಯರಿಗೆ ಸುರಕ್ಷಾ ಕವಚವಾಗಿರುವ ಬ್ಲಾಕ್ ಕ್ಯಾಟ್ ಕಮಾಂಡೋದಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸಿದ್ದಕ್ಕೆ ರಾಷ್ಟ್ರಪತಿ ಪ್ರಶಸ್ತಿ ಸೇರಿ

ಭಾರತ ಸರಕಾರವು ಅವರಿಗೆ 54 ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಅಲ್ಲದೇ ಅವರ ಸಮಾಜ ಸೇವೆಯನ್ನು ಗುರುತಿಸಿ ʼಕುಲಾಲ ಸಮಾಜ ರತ್ನʼ, ಪ್ರಶಸ್ತಿ ʼಕುಲಾಲ ಕಿರೀಟʼ, ಪ್ರಶಸ್ತಿಯನ್ನೂ ನೀಡಿ ಅವರನ್ನು ಗೌರವಿಸಲಾಗಿದೆ. 

ಚಂದಪ್ಪ ಮೂಲ್ಯ ಅವರು, ಪ್ರಸಕ್ತ ಉಪ್ಪಿನಂಗಡಿಯಲ್ಲಿರುವ ಅಮೂಲ್ಯ ಗ್ಯಾಸ್ ಏಜೆನ್ಸಿಯ ಮಾಲಕರಾಗಿದ್ದು, ಕರ್ನಾಟಕ ರಾಜ್ಯದ ಕೇಂದ್ರೀಯ ಸಶಸ್ತ್ರ ಪಡೆ- ನಿವೃತ ಯೋಧರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾಗಿದ್ದು, ಕರಾವಳಿ ಕರ್ನಾಟಕ ನಿವೃತ ಯೋಧರ ಕ್ಷೇಮಾಭಿವೃದ್ಧಿ ಸಂಘ ಮಂಗಳೂರು ಇದರ ಅಧ್ಯಕ್ಷರಾಗಿದ್ದಾರೆ. ಇದರೊಂದಿಗೆ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಲ್ಲದೆ, ಮನೆ ಮನೆಯಲ್ಲಿಯೂ ಭಗವದ್ಗೀತೆ ಅಭಿಯಾನದಲ್ಲಿ ಸುಮಾರು 3,500ಕ್ಕೂ ಅಧಿಕ ಭಗವದ್ಗೀತೆ ಪುಸ್ತಕವನ್ನು ಉಚಿತವಾಗಿ ಹಂಚಿದ್ದಾರೆ.

Leave a Comment