ಬಂಟ್ವಾಳ : 2024ರಿಂದ ಅಧಿಸೂಚಿಸಿದ ಕನಿಷ್ಠ ಕೂಲಿ ಹಾಗೂ ತುಟ್ಟಿಭತ್ತೆಯನ್ನು ಬೀಡಿ ಕಾರ್ಮಿಕರಿಗೆ ಪಾವತಿಸುವ ಜೊತೆಗೆ ಬಾಕಿ ಇರುವ ಆರು ವರ್ಷಗಳ ಕನಿಷ್ಠ ಕೂಲಿ ಪಾವತಿಗೆ ಆಗ್ರಹಿಸಿ ಎಐಟಿಯುಸಿ ಮತ್ತು ಸಿಐಟಿಯು ಬಂಟ್ವಾಳ ತಾಲೂಕಿನ ಬೀಡಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಹಕ್ಕೊತ್ತಾಯ ಚಳವಳಿ ಬಿ ಸಿ ರೋಡಿನಲ್ಲಿ ನಡೆಯಿತು
ಚಳವಳಿಯನ್ನು ಉದ್ಘಾಟಿಸಿ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಸೀತಾರಾಮ ಬೇರಿಂಜ ಮಾತನಾಡಿ, ಬೀಡಿ ಮಾಲಿಕರು ಮತ್ತು ಸರಕಾರಗಳು ಕಾರ್ಮಿಕರನ್ನು ಮೋಸ ಮಾಡುತ್ತಲೇ ಇದ್ದು 2018ರಿಂದ 2024ರ ವರೆಗೆ ಆರು ವರ್ಷಗಳ ಕನಿಷ್ಠ ಕೂಲಿಯನ್ನು ಬೀಡಿ ಮಾಲಕರು ಈವರೆಗೆ ಪಾವತಿಸಿರುವುದಿಲ್ಲ. ಅವರು ನೀಡಲು ಒಪ್ಪಿರುವ ಮೊತ್ತವನ್ನು ಪಾವತಿಸದೆ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದು, ಅದನ್ನು ತತ್‌ಕ್ಷಣ ಪಾವತಿಸಬೇಕು. ರಾಜ್ಯ ಸರಕಾರವು ಕನಿಷ್ಠ ಕೂಲಿಯ ಅಸೂಚನೆ ಹೊರಡಿಸಿದ್ದು, 2024 ಎಪ್ರಿಲ್ 1ರಿಂದ ಸಾವಿರ ಬೀಡಿಗೆ 270 ರೂ. ನಂತೆ ಕನಿಷ್ಠ ಕೂಲಿ ಮತ್ತು 17.04 ರೂ. ನಂತೆ ತುಟ್ಟಿಭತ್ತೆಯನ್ನು ಪಾವತಿಸಬೇಕೆಂದು ಆದೇಶಿಸಿದ್ದರೂ ಬೀಡಿ ಮಾಲಕರು ಪಾವತಿಸಲಿಲ್ಲ. 2025 ಎಪ್ರಿಲ್ 1ರಿಂದ ಈ ವರ್ಷದ ಕನಿಷ್ಠ ಕೂಲಿಗೆ 2025ರಲ್ಲಿ ಏರಿಕೆಯಾಗಿದ್ದ 14.88 ರೂ. ಸೇರಿಸಿ ಒಟ್ಟು 301.92 ರೂ. ನೀಡಬೇಕಾದ ಮೊತ್ತವನ್ನು ಕಡಿತಗೊಳಿಸಿ ಬರೇ 284.88 ರೂ.ರಂತೆ ಮಜೂರಿಯನ್ನು ಪಾವತಿಸಿ ಕಾರ್ಮಿಕರಿಗೆ ವಂಚಿಸುತ್ತಿದ್ದಾರೆ.
ಜಿಲ್ಲೆಯ ಜಂಟಿ ಕ್ರಿಯಾ
ಸಮಿತಿ ನೇತೃತ್ವದಲ್ಲಿ ಅ. 7ರಿಂದ ಹಕ್ಕೊತ್ತಾಯ ಚಳುವಳಿ ಆರಂಭಗೊಂಡಿದ್ದು, ಬೇಡಿಕೆ ಈಡೇರುವ ತನಕ ಹೋರಾಟ ಮುಂದುವರಿಯಲಿದೆ. ಕಾರ್ಮಿಕರ ಬೇಡಿಕೆಗಳಿಗೆ ಮಾಲಕರು ಸ್ಪಂದಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಹಗಲು ರಾತ್ರಿ ಧರಣಿ ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ಇದ್ದು, ಮಾಲಿಕರು ಹಾಗೂ ಸರಕಾರ ಬೀಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಸೂಕ್ತ ಕ್ರಮವಹಿಸುವಂತೆ ಮನವಿ ಮಾಡಿದರು.
ಚಳುವಳಿ ಉದ್ದೇಶಿಸಿ ಸಿಐಟಿಯು ಜಿಲ್ಲಾ ಮುಖಂಡ ಜೆ. ಬಾಲಕೃಷ್ಣ ಶೆಟ್ಟಿ ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಬಿ.ಶೇಖರ್ ಮಾತನಾಡಿದರು. ಎಐಟಿಯುಸಿನ ಹಿರಿಯ ಮುಂದಾಳು ವಿ. ಕುಕ್ಯಾನ್, ಜಿಲ್ಲಾ ಸಹಕಾರ್ಯದರ್ಶಿ ಕರುಣಾಕರ ಮಾರಿಪಳ್ಳ, ಉಮಾವತಿ ಕುರ್ನಾಡು, ಹರ್ಷಿತ್,ಎಂ ಬಿ ಭಾಸ್ಕರ, ಶಮಿತ, ಭಾರತಿ ಪ್ರಶಾಂತ್, ಕೆ.ಜಯಮತ, ಮೋಹನ ಅರಳ, ಸರೋಜಿನಿ, ಯೋಗಿನಿ, ಕುಸುಮ ಕಳ್ಳಿಗೆ, ಮೋಹಿನಿ, ಸಿಐಟಿಯುನ ಲೋಲಾಕ್ಷಿ, ಮೊದಲಾದವರು ಉದಯ ಕುಮಾರ್, ಜಯಂತ, ನಾರಾಯಾಣ ಉಪಸ್ಥಿತರಿದ್ದರು.
ಎಐಟಿಯುಸಿ ಜಿಲ್ಲಾ ಸಹ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ ಸ್ವಾಗತಿಸಿ, ಸಿಐಟಿಯುನ ಉದಯ ಕುಮಾರ್ ವಂದಿಸಿದರು.















