ಗಣೇಶ್ ಕಾಮತ್ ಮೂಡಬಿದಿರೆ

ಮೂಡುಬಿದಿರೆ: ಯುವ ವೈದ್ಯ, ಸಂಶೋಧಕ, ಪರಿಸರವಾದಿ, ಸೈಬರ್ ತಜ್ಞ, ಹವ್ಯಾಸೀ ಛಾಯಾಗ್ರಾಹಕ ಡಾ. ಕೃಷ್ಣ ಮೋಹನ ಪ್ರಭು (54 ವ) ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅನಾರೋಗ್ಯದಿಂದ ಕಳೆದ ಡಿ8ರಂದು ಆಸ್ಪತ್ರೆಗೆ ದಾಖಲಾಗಿದ್ದ ಅವರು ಎರಡು ಸುತ್ತಿನ ಕಿಮೋತೆರಪಿಗೆ ಒಳಪಟ್ಟಿದ್ದು ಆರೋಗ್ಯ ತೀವ್ರವಾಗಿ ಹದಗೆಟ್ಟ ಪರಿಸ್ಥಿತಿಯಲ್ಲಿ ಕಳೆದ ಎರಡು ವಾರಗಳಿಂದ ಅವರು ತುತರ್ುನಿಗಾ ಘಟಕದಲ್ಲಿದ್ದರು. ಅವರು ಪತ್ನಿ ಡಾ. ರಾಧಿಕಾ ಪ್ರಭು, ಪುತ್ರಿ ನೀತಿ, ತಾಯಿ , ಓರ್ವ ಸಹೋದರ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಕ್ರಿಶಿ ಎಂದೇ ಜನಪ್ರಿಯರಾಗಿದ್ದ ಡಾ. ಕೃಷ್ಣ ಮೋಹನ್ ಮೂಡುಬಿದಿರೆಯ ಜೈನ್ ಹೈಸ್ಕೂಲ್ನಲ್ಲಿ ಶಿಕ್ಷಣದ ಬಳಿಕ ಎಂಬಿಬಿಎಸ್. ಜನರಲ್ ಸರ್ಜರಿಯಲ್ಲಿ ಎಂ.ಎಸ್. ಪದವೀಧರರಾಗಿ 1996ರಿಂದ ಮೂಡುಬಿದಿರೆಯಲ್ಲಿ ಪ್ರಭು ಜನರಲ್ ಹಾಸ್ಪಿಟಲ್ ಮುನ್ನಡೆಸಿ ಸೇವಾ ನಿರತರಾಗಿದ್ದರು.

ಬಹುಮುಖೀ ಪ್ರತಿಭೆಯಾಗಿ ಆಕರ್ಷಕ ವ್ಯಕ್ತಿತ್ವದವರಾಗಿದ್ದ ಡಾ. ಕೃಷ್ಣ ಮೋಹನ್ ಚಾರಣ, ಪರ್ವತಾರೋಹಣ, ವನ್ಯಜೀವಿ ಸಂರಕ್ಷಣೆ, ಛಾಯಾಗ್ರಹಣ, ಶಾಸ್ತ್ರೀಯ ಸಂಗೀತ, ಕಂಪ್ಯೂಟರ್, ಸಾಧನಗಳು, ಇಂಟನರ್ೆಟ್ ಕುರಿತಾದ ವಿಷಯಗಳಲ್ಲಿ ತೊಡಗಿಕೊಂಡಿದ್ದರು. ಜೀವಶಾಸ್ತ್ರ, ಔಷದ, ಖಗೋಳ ಶಾಸ್ತ್ರ, ವನ್ಯ ಜೀವಿ ಹೀಗೆ ಬಹು ವ್ಯಾಪ್ತಿಯ ವೈಜ್ಞಾನಿಕ ವಿಷಯಗಳಲ್ಲಿ ವಿಶ್ವಕೋಶದಂತೆ ಜ್ಞಾನ ಹೊಂದಿದ ಮಾರ್ಗದರ್ಶಿಯಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಸಮೂಹದ ಜತೆಗೂಡಿ ಜೇಡಗಳ ಕುರಿತ ವಿಶೇಷ ಸಂಶೋಧನೆಯಲ್ಲಿ ಆಸಕ್ತಿ ವಹಿಸಿದ್ದರು. ಇದು ಜೇಡಗಳ ವರ್ತನೆ, ಭಾರತದಲ್ಲಿ ಅವುಗಳ ವ್ಯಾಪ್ತಿ ವೈವಿಧ್ಯ ಕುರಿತಂತೆ ಮಹತ್ವದ ಆವಿಷ್ಕಾರಗಳಿಗೆ ಕಾರಣವಾಗಿತ್ತು. ಅವುಗಳು ವೈಜ್ಞಾನಿಕ ಪತ್ರಿಕೆಗಳಲ್ಲೂ ಪ್ರಕಟವಾಗಿದ್ದವು. 1990ರಲ್ಲಿ 21050 ಅಡಿ ಎತ್ತರದ ಪಶ್ಚಿಮ ಹಿಮಾಲಯದ ವಿಶ್ವದ 17ನೇ ಕಠಿಣ ಶಿಖರಾರೋಹಣದ ಬ್ರಹ್ಮ -1 ತಂಡದಲ್ಲಿ ಅವರು ಸದಸ್ಯರಾಗಿದ್ದರು. ಈ ಸಂದರ್ಭದಲ್ಲಿ ಹಿಮಾಲಯದಲ್ಲಿ ತಂಡದ ಶಿಬಿರವೊಂದರಲ್ಲಿ ಏಕಾಂಗಿಯಾಗಿ 15 ದಿನಗಳನ್ನು ಕಳೆದಿದ್ದರು.

ವಲ್ಡ್ ವೈಡ್ ಫಂಡ್ ಫಾರ್ ನೇಚರ್ಗೆ ಪೂರಕವಾಗಿ 1989-92ರಲ್ಲಿ ಎಳೆಯರು ಮತ್ತು ಉತ್ಸಾಹಿಗಳಿಗಾಗಿ ಮಧುಮಲೈ, ಬಂಡೀಪುರ, ನಾಗರಹೊಳೆ, ಭದ್ರಾ ವನ್ಯ ಜೀವಿ ಸಂರಕ್ಷಣಾ ಧಾಮಗಳಲ್ಲಿ ಅನೇಕ ನೇಚರ್ ಕ್ಯಾಂಪ್ಗಳನ್ನು ಅವರು ನಡೆಸಿದ್ದರು. ಮಂಗಳೂರಿನ ಅತ್ರಿ ಬುಕ್ ಸೆಂಟರ್ ಕೇಂದ್ರವಾಗಿಟ್ಟುಕೊಂಡ ಅರೋಹಣ ಪರ್ವತಾರೋಹಿಗಳು ಮತ್ತು ಸಾಹಸಿಗರ ತಂಡದ ಸಕ್ರಿಯ ಸದಸ್ಯರಾಗಿ ಗೋವಾದಿಂದ ಪಾಲ್ಘಾಟ್ವರೆಗಿನ ಪಶ್ಚಿಮ ಘಟ್ಟದ ಅನೇಕ ಶಿಖರಗಳನ್ನು ಏರಿದ್ದ ಅವರು ಪ್ರಸ್ತುತ ವೈಲ್ಡ್ ಲೈಫ್ ಫಸ್ಟ್ನ ಸದಸ್ಯರಾಗಿದ್ದರು.

ಆರೋಹಣದ ಅಶೋಕ ವರ್ಧನ ಅವರ ಜತೆಗೂಡಿ ವಿಶಿಷ್ಠ ಅರಣ್ಯ ಸಂರಕ್ಷಣಾ ಯೋಜನೆಯಡಿ ಬಿಸಿಲೆ ಘಾಟ್ನಲ್ಲಿ ಅವರು 15 ಎಕರೆ ನಿವೇಶನ ಖರೀದಿಸಿ ಅಲ್ಲೊಂದು ರೆಸಾಟರ್್ ಯೋಜನೆ ರೂಪಿಸಿದ್ದರು. ಈ ಕಾಡಿನ ಪ್ರದೇಶ ವಾಣಿಜ್ಯ ಉದ್ದೇಶಗಳಿಗಾಗಿ ದುರುಪಯೋಗವಾಗದಂತೆ ಕಳೆದ 15 ವರ್ಷಗಳಿಂದ ಈ ಭಾಗದ ನೈಜ್ಯತೆಯನ್ನು ಅವರು ಕಾಯ್ದುಕೊಂಡಿದ್ದರು. ಅಶೋಕವನವೆಂದು ಹೆಸರಿಸಲಾಗಿದ್ದ ಈ ಪ್ರದೇಶದಲ್ಲಿ ಪುಟ್ಟ ಮನೆಯೊಂದನ್ನು

ಕಪ್ಪೆಗೂಡು ಹೆಸರಲ್ಲಿ ನಿರ್ಮಿಸಿ ಸಂಶೋಧನಾ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದರು.

ಮಂಗಳೂರಿನ ಸೈಬರ್ ಫೋರಂ ಸ್ಥಾಪಕ ಸದಸ್ಯರಾಗಿ, ಕಾರ್ಯದರ್ಶಿಯಾಗಿ ದ. ಕ ಉಡುಪಿ ಜಿಲ್ಲೆಗಳಿಗೆ ಇಂಟರ್ ನೆಟ್ ಸಂಪರ್ಕ ಸೌಲಭ್ಯ ಒದಗಿಸುವಲ್ಲಿ ಶ್ರಮಿಸಿದ್ದರು. ವಲ್ಡ್ ವೈಡ್ವೆಬ್ ಹಾಗೂ ಕಂಪ್ಯೂಟರ್ ಸಂಬಂಧೀ ಹಲವು ಕಾರ್ಯಾಗಾರ, ಉಪನ್ಯಾಸ , ಪ್ರಾತ್ಯಕ್ಷಿಕೆ ನೀಡಿದ್ದರು. ಮೆಡಿಕಲ್ ಸಾಫ್ಟ್ ವೇರ್, ಪಾಕೆಟ್ ಪಿಸಿ ಸಹಿತ ಹೊಸ ತಾಂತ್ರಿಕ ಆವಿಷ್ಕಾರಗಳ ಬಗ್ಗೆ ಅವರು ಅಪಾರ ಒಲವು ಹೊಂದಿದ್ದರು.

ಅತ್ಯುತ್ತಮ ಹವ್ಯಾಸೀ ಛಾಯಾಗ್ರಾಹಕರಾಗಿ ಮೈಕ್ರೋ, ಕ್ಲೋಸಪ್ ಜತೆಗೆ ನೇಚರ್ ಫೋಟೋಗ್ರಫಿಯಲ್ಲಿ ಅವರು ತಜ್ಞರಾಗಿದ್ದರು. ಡಾಕ್ರಿಷಿ ಡಾಟ್ ಕಾಮ್ ಎಂಬ ಬ್ಲಾಗ್ ಮೂಲಕ ಛಾಯಾಗ್ರಹಣ ಮತ್ತು ನಿಸರ್ಗದ ಕುರಿತಂತೆ ಜನತೆಯನ್ನು ಸುಶಿಕ್ಷಿತರನ್ನಾಗಿಸಲು ಅವರು ಶ್ರಮಿಸಿದ್ದರು. ಸ್ನೇಹಿತರ ಜತೆಗೂಡಿ ಮಂಗಳೂರು ಫೋಟೋಗ್ರಫಿ ಕ್ಲಬ್ ಆರಂಭಿಸಿ ಈ ಕ್ಷೇತ್ರದಲ್ಲಿ ತರಬೇತಿ,ಕಾರ್ಯಾಗಾರಗಳನ್ನು ನಡೆಸಿದ್ದರು. ಛಾಯಾಗ್ರಹಣದಲ್ಲಿ ನಿಖರತೆಯ ತರಬೇತಿ ಒದಗಿಸುವ ನಿಟ್ಟಿನಲ್ಲಿ ಕ್ರಿಯೇಟಿವ್ ಫೋಕಸ್ ಎನ್ನುವ ಯೋಜನೆಯನ್ನೂ ಇತ್ತೀಚಿಗೆ ಆರಂಭಿಸಿದ್ದ ಅವರು ಫೇಸ್ಬುಕ್ ವೇದಿಕೆಯ ಮೂಲಕ ಛಾಯಾಗ್ರಹಣದ ವಿಮರ್ಶಕರಾಗಿಯೂ ಆಸಕ್ತರಿಗೆ ಶಿಕ್ಷಣ ನೀಡುತ್ತಿದ್ದರು.

ಪ್ರಖರ ವಿಚಾರವಾದಿಯಾಗಿ ಬೆಳೆದಿದ್ದ ಡಾ. ಕೃಷ್ಣ ಮೋಹನ್ ಪ್ರಭು ಭಾರತೀಯ ವಿಚಾರವಾದಿಗಳ ಸಂಘಟನೆಗಳ ಒಕ್ಕೂಟದ ಸ್ಥಾಪನೆಯಲ್ಲೂ ತೊಡಗಿಕೊಂಡಿದ್ದರು. ಕೋವಿಡ್ ಪಿಡುಗಿನ ಆರಂಭದಿಂದಲೂ ಜನತೆ ಭೀತಿಗೆ ಒಳಗಾಗದಂತೆ ವೈಜ್ಞಾನಿಕ ಪ್ರಗತಿಯ ಕುರಿತು ಸಾಮಾಜಿಕ ಜಾಲ ತಾಣಗಳ ಮೂಲಕ ಶಿಕ್ಷಣ ನೀಡಿದ್ದರು. ಮೂಡುಬಿದಿರೆಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲೂ ಅವರು ಸಮಾಜಮುಖಿ ಸೇವೆಗಳಿಂದ ಗುರುತಿಸಿಕೊಂಡಿದ್ದರು. ಮೂಡುಬಿದಿರೆಯಲ್ಲಿ ಛಾಯಾಗ್ರಾಹಕರು, ಸೈಬರ್, ಇಂಟರ್ ನೆಟ್, ಕಂಪ್ಯೂಟರ್ ಸಂಬಂಧಿಸಿದಂತೆ ಜಟಿಲ, ಸಮಸ್ಯೆ, ಸಂಧಿಗ್ಧತೆ ಸವಾಲುಗಳಿಗೂ ಉತ್ತರವಾಗಿದ್ದ ಅವರ ನಿಧನ ನಿಜ ಅರ್ಥದಲ್ಲಿ ತುಂಬಲಾಗದ ನಷ್ಟ ಎಂದು ಹೇಳಲಾಗುತ್ತಿದೆ. ಜಾಗತಿಕ, ರಾಷ್ಟ್ರ ಮಟ್ಟದಲ್ಲಿ ತನ್ನ ಪ್ರತಿಭೆ, ಜ್ಞಾನ ಮತ್ತು ಚಿಂತನೆಗಳಿಂದ ಸಹಸ್ರಾರು ಮಂದಿಗೆ ಮಾರ್ಗದರ್ಶಕರಾಗಿದ್ದ ಅವರ ನಿಧನಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಸಂತಾಪ ಸಂದೇಶಗಳು ಹರಿದಾಡುತ್ತಿವೆ.


Leave a Comment