ಬಂಟ್ವಾಳ :ಲಾವಣ್ಯ ಮನೆಗೆ ಜನಪ್ರತಿನಿಧಿಗಳ ಭೇಟಿ; ಕುಟುಂಬಕ್ಕೆ ಸಾಂತ್ವನ.

Coastal Bulletin
ಬಂಟ್ವಾಳ :ಲಾವಣ್ಯ ಮನೆಗೆ ಜನಪ್ರತಿನಿಧಿಗಳ ಭೇಟಿ; ಕುಟುಂಬಕ್ಕೆ ಸಾಂತ್ವನ.

ಬಂಟ್ವಾಳ: ತಾಲೂಕಿನ ಕಕ್ಯಪದವು ಸಮೀಪದ ಮೈರ ನಿವಾಸಿ, ಹತ್ಯೆಗೀಡಾದ ಯುವತಿ ಲಾವಣ್ಯ ಅವರ ನಿವಾಸಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಮೃತಳ ಪೋಷಕರು ಹಾಗೂ ಕುಟುಂಬದವರನ್ನು ಭೇಟಿಯಾಗಿ ಅವರ ದುಃಖದಲ್ಲಿ ಭಾಗಿಯಾದ ಜನಪ್ರತಿನಿಧಿಗಳು, ಲಾವಣ್ಯ ಅವರ ಹತ್ಯೆ ಅತ್ಯಂತ ನೋವು ಮತ್ತು ಆಘಾತಕಾರಿ ಘಟನೆ ಎಂದು ಖಂಡಿಸಿದರು. ಪ್ರಕರಣದ ಆರೋಪಿಗೆ ಕಾನೂನಿನಡಿ ಅತ್ಯಂತ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ ಅವರು, ಕುಟುಂಬಕ್ಕೆ ನ್ಯಾಯ ದೊರಕಿಸಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ವೇಳೆ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದ ಜನಪ್ರತಿನಿಧಿಗಳು, ಇಂತಹ ದುರ್ಘಟನೆಗಳು ಮರುಕಳಿಸದಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮೃತ ಲಾವಣ್ಯ ಅವರ ಆತ್ಮಕ್ಕೆ ಶಾಂತಿ ಕೋರಿ, ಶೋಕಸಂತಪ್ತ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು:

"ಘಟನೆಯ ಸಂದರ್ಭದಲ್ಲಿ ನಾನು ಊರಿನಲ್ಲಿರಲಿಲ್ಲ. ಒಡಿಶಾದ ಪುರಿ ಜಗನ್ನಾಥ ದೇವಾಲಯದ ರಥೋತ್ಸವದಲ್ಲಿ ಭಾಗಿಯಾಗಿದ್ದೆ. ಘಟನೆ ಕುರಿತು ಮಾಹಿತಿ ದೊರೆಯುತ್ತಿದ್ದಂತೆಯೇ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿ, ಆರೋಪಿಯನ್ನು ಕೂಡಲೇ ಬಂಧಿಸಿ ಸಮಗ್ರ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದೇನೆ. ಈ ಘಟನೆ ನನಗೆ ತೀವ್ರ ದುಃಖ ತಂದಿದೆ. ಇಂತಹ ಘಟನೆಗಳು ಮತ್ತೆ ನಡೆಯದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಮೃತ ಲಾವಣ್ಯ ಅವರ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದು, ಅವರೊಂದಿಗೆ ಸದಾ

ನಾವಿದ್ದೇವೆ ಎಂದು ಭರವಸೆ ನೀಡಿದ್ದೇನೆ" ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲು:

"ಪ್ರೇಮದ ಹೆಸರಿನಲ್ಲಿ ಅಮಾಯಕ ಯುವತಿಯನ್ನು ಹತ್ಯೆ ಮಾಡಿರುವುದು ಅತ್ಯಂತ ಆಘಾತಕಾರಿ ಮತ್ತು ಖಂಡನೀಯ. ನಾನು ಪ್ರವಾಸದಲ್ಲಿದ್ದ ಕಾರಣ ಘಟನೆಯ ವೇಳೆ ಬರಲು ಸಾಧ್ಯವಾಗಲಿಲ್ಲ. ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಕುಟುಂಬ ಸದಸ್ಯರು ಆಗ್ರಹಿಸಿದ್ದು, ನಾವು ಕೂಡ ಅದೇ ರೀತಿಯ ಕಠಿಣ ಶಿಕ್ಷೆಗೆ ಒತ್ತಾಯಿಸುತ್ತೇವೆ. ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ:

"ಲಾವಣ್ಯ ಅವರ ಹತ್ಯೆ ಘಟನೆ ಅತ್ಯಂತ ನೋವು ಮತ್ತು ಬೇಸರ ತಂದಿದೆ. ಈ ಕೃತ್ಯ ಎಸಗಿದ ಆರೋಪಿಗೆ ಕಾನೂನಿನಡಿ ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ಮೃತರ ಕುಟುಂಬದ ದುಃಖದಲ್ಲಿ ನಾವು ಭಾಗಿಯಾಗಿದ್ದು, ಅವರೊಂದಿಗೆ ಸದಾ ನಾವಿದ್ದೇವೆ" ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಬೂಡ ಮಾಜಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಪ್ರಮುಖರಾದ ರಾಮದಾಸ್ ಬಂಟ್ವಾಳ, ಸುರೇಶ್ ಮೈರ,ಚಿದಾನಂದ ಕಕ್ಯ, ವಸಂತ ಉಳಿ, ರಂಜಿತ್ ಮೈರ, ಅಜಿತ್ ಶೆಟ್ಟಿ ಕಾರಿಂಜ, ಸತೀಶ್ ಶೆಟ್ಟಿ ಮದ್ವ,ಯಶವಂತ ಕಜೆಕಾರು, ಶಶಿಕಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು

Leave a Comment