ಬಂಟ್ವಾಳ :ವಿಕಾಸಂ ಸೇವಾ ಫೌಂಡೇಶನ್, ಬಿ ಸಿ ರೋಡ್ ಇಲ್ಲಿ ನಡೆದ ವಿಕಾಸಂ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಟಿ ಜಿ ರಾಜಾರಾಮ ಭಟ್ “ದಿವ್ಯಾಂಗ ಮಕ್ಕಳಿಗೆ ಮಾಡುವೆ ಸೇವೆ ಅತೀ ಶ್ರೇಷ್ಠವಾದುದು. ಸಮಾಜದ ಎಲ್ಲಾ ಸ್ತರದ ಜನರು ಈ ಸೇವೆಯಲ್ಲಿ ಪಾಲ್ಗೊಳ್ಳಬೇಕು. ರಕ್ತ ಮತ್ತು ಹಣ ಒಂದು ಕಡೆ ಹೆಪ್ಪುಗಟ್ಟಿನಿಂತರೆ ಅದು ಅಪಾಯ. ರಕ್ತ ಪರಿಚಲನೆಯಿಲ್ಲದೆ ನಿಂತರೆ ಅದು ಕಾಯಿಲೆಗೆ ಕಾರಣವಾಗುತ್ತದೆ, ಅದೇ ರೀತಿ ಹಣವೂ ಸೀಮಿತ ಕೈಗಳಲ್ಲಿ ಮಾತ್ರ ಕ್ರೋಢೀಕರಣಗೊಂಡರೆ ಅದು ಸಮಾಜಕ್ಕೆ ಅಪಾಯವಾಗಿದೆ. ಧನವು ದಿವ್ಯಾಂಗರ ಸೇವೆಗೆ ಬಳಕೆಯಾದರೆ ದಿವ್ಯಾಂಗರು ಸಬಲರಾಗುವುದರ ಜೊತೆಗೆ ಸಮಾಜವೂ ಸ್ವಸ್ಥವಾಗುತ್ತದೆ” ಎಂದರು. ಸಹಕಾರ ರತ್ನ ಪ್ರಶಸ್ತಿ ವಿಜೇತ ರಾಜಾರಾಮ ಭಟ್ಟರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹೆಚ್ ಪಿ ಇಂಡಿಯಾ ಸಂಸ್ಥೆಯ ಟ್ಯಾಲೆಂಟ್ ಅಕ್ವಿಸಿಶನ್ ಮುಖ್ಯಸ್ಥರಾದ ದಿಲೀಪ್ ಚಂದ್ರ ಮಾತನಾಡಿ ವಿಕಾಸಂ ಸೇವಾ ಫೌಂಡೇಶನ್ ಸಂಸ್ಥೆಯು ಮಾಡುತ್ತಿರುವ ದಿವ್ಯಾಂಗರ ಸೇವೆಯಲ್ಲಿ ಹೆಚ್ ಪಿ ಸಂಸ್ಥೆಯು ಸದಾ ಸಹಭಾಗಿಯಾಗಲಿದೆ ಎಂದು ಹೇಳಿದರು. ಹೆಚ್ ಪಿ ಸಂಸ್ಥೆಯ ಇಂಕ್ಲೂಸಿವ್ ಆಂಡ್ ಬಿಲಾಂಗಿಂಗ್ ಯೋಜನೆಯಡಿಯಲ್ಲಿ ವಿಕಾಸಂ ನಲ್ಲಿ ತರಬೇತಿ ಪಡೆಯುತ್ತಿರುವ ದಿವ್ಯಾಂಗ ಮಕ್ಕಳ ಶಿಕ್ಷಣದ ಉದ್ದೇಶದಿಂದ ಕಂಪ್ಯೂಟರ್ ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಿದರು.
ಹೋಟೆಲ್ ವಿವಾಂತ, ಮಂಗಳೂರು ಇಲ್ಲಿನ ಮಾನವಸಂಪನ್ಮೂಲ ಮುಖ್ಯಸ್ಥರಾದ ಶ್ರೀಮತೀ ರೇಖಾ ಸಂಜೀವ್ ಇವರು ಮಾತನಾಡಿ ಖಾಸಗಿ ವಲಯದ ಉದ್ಯೋಗದಾತರೂ ದಿವ್ಯಾಂಗರಿಗೆ ಉದ್ಯೋಗವನ್ನು ಒದಗಿಸಬೇಕು ಎಂದು ಹೇಳಿದರು.
ಉದ್ಯಮಿ ರೋಷನ್ ರೈ ಮಾತನಾಡಿ ನಿಸ್ವಾರ್ಥ
ಸೇವೆಯನ್ನು ಮಾಡುವಾಗ ಹಲವು ಅಡೆತಡೆಗಳು ಬರುವುದು ಸಹಜವಾದರೂ,ಒಳ್ಳೆಯ ಉದ್ದೇಶ ಸಾಧನೆಗಾಗಿ ಅದನ್ನೆಲ್ಲಾ ಎದುರಿಸಬೇಕಾಗಿದೆ ಎಂದು ಹೇಳಿದರು.
ಹೆಚ್ ಪಿ ಸಂಸ್ಥೆಯ ದಿಲೀಪ್ ಚಂದ್ರ, ಪ್ರತಾಪ್ ಕುಮಾರ್ , ವರುಣ್ ಆರ್, ರಚನ್ ಶೆಟ್ಟಿ ಹಾಗೂ ವಿನಯ್ ಕುಮಾರ್ ಇವರು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ “ಸಂದರ್ಶನ ಕೌಶಲ್ಯ” ದ ಬಗ್ಗೆ ತರಬೇತಿಯನ್ನು ಕೈಗೊಂಡರು.
ವಿಕಾಸಂ ಸಂಸ್ಥೆಯ ಸಹ ಸಂಸ್ಥಾಪಕರಾದ ಧರ್ಮ ಪ್ರಸಾದ್ ರೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿಕಾಸಂ ಸಂಸ್ಥೆಯ ಸಹ ಸಂಸ್ಥಾಪಕ ಗೋಪಾಲ್ ಗೋವಿಂತೋಟ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇನ್ನೋರ್ವ ಸಹ ಸಂಸ್ಥಾಪಕ ಗಣೇಶ್ ಭಟ್ ವಾರಣಾಸಿ ಅತಿಥಿಗಳನ್ನು ಸ್ವಾಗತಿಸಿದರು. ಕುಮಾರಿ ನವ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ವಿಕಾಸಂ ಸಂಸ್ಥೆಯಲ್ಲಿ ತರಬೇತಿಯನ್ನು ಪಡೆಯುತ್ತಿರುವ ದಿವ್ಯಾಂಗ ಮಕ್ಕಳ ಪ್ರತಿಭಾ ಪ್ರದರ್ಶನವು ಕಾರ್ಯಕ್ರಮವು ಜರಗಿತು.















