Coastal Bulletin

ಇತ್ತೀಚೆಗಷ್ಟೇ ಪೊಲೀಸ್‌ ಮಹಾನಿರ್ದೇಶಕರಾದ ಪ್ರವೀಣ್ ಸೂದ್‌ , ಪೊಲೀಸ್ ಠಾಣೆ ,ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿ, ಎಸಿಪಿ ಕಚೇರಿಗಳಲ್ಲಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವದಂತಹ ಖಾಸಗಿ ಕಾರ್ಯಕ್ರಮಗಳನ್ನು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸುತ್ತೋಲೆಯೊಂದನ್ನು ಹೊರಡಿಸಿದ್ದರು. ಆದರೆ ಹಾವೇರಿಯ ಬಂಕಾಪುರ ಠಾಣೆಯ ಪಿಎಸ್‌ಐ ಸಂತೋಷ ಪಾಟೀಲ ಅವರು ಡಿಜಿಪಿಯ ಆದೇಶ ಉಲ್ಲಂಘಿಸಿ ಠಾಣೆಯಲ್ಲೇ ಸಾರ್ವಜನಿಕರೊಂದಿಗೆ ಹುಟ್ಟು ಹಬ್ಬ ಆಚರಿಸಿದ್ದಾರೆ.

ಠಾಣೆಯಲ್ಲೇ ಸಾರ್ವಜನಿಕರೊಂದಿಗೆ ಹುಟ್ಟುಹಬ್ಬ ಆಚರಿಸಿದ್ದ ಚಿತ್ರವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ನಂತರ ಇದು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ತಕ್ಷಣ ಎಚ್ಚೆತ್ತ ಹಾವೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವೈ ಹನುಮಂತರಾಯ ಅವರು ಸಂತೋಷ್‌ ಪಾಟೀಲ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಅದೇಶ ಹೊರಡಿಸಿದ್ದಾರೆ.

“ಅಪರಾಧ ಹಿನ್ನಲೆಯ ಹಾಗೂ ಸಮಾಜ ಘಾತಕ ಶಕ್ತಿಗಳು ನಡೆಸುವ ಕಾರ್ಯಕ್ರಮದಲ್ಲಿ ಪೊಲೀಸರು ಭಾಗವಹಿಸಬಾರದು. ಯಾವುದೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಕಾರ್ಯಕ್ರಮ ಹಮ್ಮಿಕೊಂಡಿರುವ ವ್ಯಕ್ತಿ ಮತ್ತು ಸಂಘ ಸಂಸ್ಥೆಯ ಪೂರ್ವಾಪರ ಪರಿಶೀಲನೆ ಮಾಡಿ ಅದರಲ್ಲಿ

ಭಾಗವಹಸುವುದು ಸರಿಯೆ ಎಂದು ನಿರ್ಧರಿಸಬೇಕು” ಎಂದು ಡಿಜಿ & ಐಜಿಪಿ ಪ್ರವೀಣ್ ಸೂದ್‌ ಆಗಸ್ಟ್‌ 2 ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ಹೇಳಿದ್ದರು.

ಯಾವುದೆ ಪೊಲೀಸ್ ಅಧಿಕಾರಿಗಳು ಅಪರಾಧ ಹಿನ್ನಲೆಯ, ಸಮಾಜ ಘಾತಕ ಶಕ್ತಿಗಳ ಹಾಗೂ ರೌಡಿ ಶೀಟರ್‌ಗಳೊಂದಿಗೆ ಯಾವುದೆ ಸಂಬಂಧ ಹೊಂದುವಂತಿಲ್ಲ ಎಂಬುವುದನ್ನು ನೆನಪಿಸಿದ್ದ ಸುತ್ತೋಲೆ, “ಪೊಲೀಸ್ ಕಚೇರಿಗಳು ಸಾರ್ವಜನಿಕ ಕಚೇರಿಗಳಾಗಿರುವುದರಿಂದ ಅಲ್ಲಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವದಂತಹ ಖಾಸಗಿ ಕಾರ್ಯಕ್ರಮಗಳನ್ನು ನಡೆಯದಂತೆ ಎಚ್ಚರಿಕೆ ವಹಿಸಬೇಕು” ಎಂದೂ ಹೇಳಿತ್ತು.ಈ ಮೂಲಕ ಸುತ್ತೋಲೆ ಹೊರಡಿಸಿ ಎರಡು ವಾರದ ಒಳಗೆ ಆದೇಶದ ಉಲ್ಲಂಘನೆ ಆಗಿದೆ

Leave a Comment