Coastal Bulletin

ಬೆಂಗಳೂರು:ಒಂದು ವಾರದಿಂದ ನಡೆಯುತ್ತಿರುವ ರಾಜಕೀಯ ಪ್ರಹಸನಕ್ಕೆ ತೆರೆಬಿದ್ದಿದೆ.ಮೊದಲೇ ನಿರ್ಧಾರ ಮಾಡಿದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಬಿ.ಎಸ್. ಯಡಿಯೂರಪ್ಪ ಅವರು ಘೋಷಿಸಿದ್ದಾರೆ.

ಬಿಜೆಪಿ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಭಾಗವಹಿಸಿ ಭಾಷಣ ಮಾಡಿದ ಬಳಿಕ ದುಃಖದಿಂದಲ್ಲ ಸಂತೋಷದಿಂದ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭಾಷಣದಲ್ಲಿ ಗದ್ಗದಿತರಾಗಿ ನುಡಿದರು.

ಸಾಧನಾ ಸಮಾವೇಶದಲ್ಲಿ ಯಡಿಯೂರಪ್ಪ ರಾಜಕೀಯ ಜೀವನವನ್ನು ಭಾವನಾತ್ಮಕವಾಗಿ ನೆನೆದು ಇಬ್ಬರು ಶಾಸಕರಿಂದ ಆರಂಭವಾದ ನಮ್ಮ ಸಾಧನೆ ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬರುವಷ್ಟು ಬೆಳೆದಿದೆ. ಈ ಸಾಧನೆಗೆ ಲಕ್ಷಾಂತರ ಜನ ಕಾರ್ಯಕರ್ತರ

ಪರಿಶ್ರಮ ಕಾರಣ ಎಂದರು. 75 ವರ್ಷ ಮೀರಿದ ಯಾರಿಗೂ ಅವಕಾಶ ಕೊಟ್ಟಿರಲಿಲ್ಲ. ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಮುಂದೆ ಬರುವ ದಿನಗಳಲ್ಲಿ ಮತ್ತೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬರುವ ಅವಕಾಶ ಸಿಗಬೇಕು ಎಂದು ದೇವರಲ್ಲಿ ಈ ಬಗ್ಗೆ ನಾನು ಪ್ರಾರ್ಥನೆ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಲಿದ್ದಾರೆ.

Leave a Comment