ಮಂಗಳೂರು: ಬೆಳ್ತಂಗಡಿಯ ರಿಷಿ ಸಾಮಾಜಿಕ ಸಾಂಸ್ಕೃತಿಕ ಪ್ರತಿಷ್ಠಾನದ ‘ಶಾಲೆಗೊಂದು ವನ ವಿದ್ಯಾರ್ಥಿಗೊಂದು ಗಿಡ ಯೋಜನೆ’ಯ ಅಂಗವಾಗಿ ಉತ್ತಮವಾಗಿ ಗಿಡ ನೆಟ್ಟು ಪೋಷಿಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಬಹುಮಾನ ವಿತರಣಾ ಕಾರ್ಯಕ್ರಮ ಮೈರೋಳ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೃಷ್ಣಯ್ಯ ಆಚಾರ್ಯ ಮಾತನಾಡಿ, ರಿಷಿ ಪ್ರತಿಷ್ಠಾನವು ಪರಿಸರದ ಉಳಿವಿನ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಕೈಗೊಂಡಿದೆ. ಪರಿಸರದ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಿ ಮರಗಿಡಗಳನ್ನು ಬೆಳೆಸಲು ಪ್ರೋತ್ಸಾಹ ನೀಡುತ್ತಿರುವುದು ಅಭಿನಂದನಾರ್ಹ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಚಂದ್ರಾವತಿ ಕೆ. ಮಾತನಾಡಿ, ನಮ್ಮ ಶಾಲೆಯಲ್ಲಿ ಗಿಡಗಳನ್ನು ನೆಟ್ಟು ಅವುಗಳ ನಿರ್ವಹಣೆಗೆ ರಸಗೊಬ್ಬರ ಹಾಗೂ ವಿದ್ಯಾರ್ಥಿಗಳಿಗೆ ಗಿಡಗಳನ್ನು ನೀಡಿ ಅವುಗಳನ್ನು ಚೆನ್ನಾಗಿ ಬೆಳೆಸಿದವರಿಗೆ ಬಹುಮಾನ ವಿತರಿಸಿ ಉತ್ತೇಜಿಸಿ ಶಾಲೆಯ ಹಸಿರುವನ ನಿರ್ಮಾಣ
ಕಾರ್ಯದಲ್ಲಿ ಪ್ರತಿಷ್ಠಾನ ಪ್ರಮುಖ ಪಾತ್ರ ವಹಿಸಿದೆ ಎಂದರು.
ಪ್ರತಿಷ್ಠಾನದ ಕಾರ್ಯಕ್ರಮ ಸಂಯೋಜಕಿ ದೇವಿಕಾ ಸುಳ್ಯ ಮಾತನಾಡಿ, ವಿದ್ಯಾರ್ಥಿಗಳನ್ನು ಪರಿಸರ ಸಂರಕ್ಷಣೆಗೆ ತೊಡಗಿಸಿಕೊಳ್ಳುತ್ತಲೇ ಆ ಬಗ್ಗೆ ಚಿಕ್ಕ ವಯಸ್ಸಿನಲ್ಲಿಯೇ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದರು.
ಗಿಡ ನೆಟ್ಟು ಉತ್ತಮ ರೀತಿಯಲ್ಲಿ ಪೋಷಿಸಿದ ವಿದ್ಯಾರ್ಥಿಗಳಾದ ಮೋಕ್ಷಾ (ಪ್ರಥಮ),ತನ್ವಿ (ದ್ವಿತೀಯ),ನಿತ್ಯಶ್ರೀ(ತೃತೀಯ ಸ್ಥಾನ) ಅವರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು
ಶಾಲಾಭಿವೃದ್ಧಿ ಸಮಿತಿಯ ಹರಿಣಾಕ್ಷಿ ಬಿ ಎನ್,ರಾಮಣ್ಣ ಗೌಡ,ಮೋಹಿನಿ ಎಸ್ಉಪಸ್ಥಿತರಿದ್ದರು .ಶಿಕ್ಷಕಿ ಸುರೇಖಾ ಕಾರ್ಯಕ್ರಮ ನಿರೂಪಿಸಿದರು.















