Coastal Bulletin

ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಕಾರ್ಯ ಮುಗಿದಿರುವುದರಿಂದ ಸದರಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಲಾಗಿದೆ. ಪ್ರಸ್ತುತ ಪರಿಷ್ಕರಿಸಿರುವ ಪಠ್ಯಪುಸ್ತಕದಲ್ಲಿ ಯಾವಾದಾದರೂ ಆಕ್ಷೇಪಾರ್ಹ ವಿಷಯಗಳಿದ್ದಲ್ಲಿ ಅವುಗಳನ್ನು ಮತ್ತೊಮ್ಮೆ ಪರಿಷ್ಕರಿಸುವ ಮುಕ್ತ ಮನಸ್ಸನ್ನು ಸರ್ಕಾರವು ಹೊಂದಿದೆ.

 ಈ ಹಿನ್ನೆಲೆ ಬಸವಣ್ಣನವರ ವಿಷಯಾಂಶಕ್ಕೆ ಸಂಬಂಧಿಸಿದಂತೆ ಸೂಕ್ತವಾಗಿ ಪರಿಷ್ಕರಿಸಲು ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

 ರೇಸ್ ಕೋರ್ಸ್ ರಸ್ತೆಯಲ್ಲಿರುವ ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್​ಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಭೇಟಿ ನೀಡಿದರು. ಪರಿಷ್ಕೃತ ಪಠ್ಯ ಪುಸ್ತಕ ಗೊಂದಲದ ಬಗ್ಗೆ ಸಿಎಂ ಜೊತೆ ಶಿಕ್ಷಣ ಸಚಿವ ನಾಗೇಶ್ ಹಾಗು ಶಿಕ್ಷಣ ಇಲಾಖೆ ಕಾರ್ಯದರ್ಶಿ ಸೆಲ್ವ ಕುಮಾರ್ ಚರ್ಚೆ ನಡೆಸಿದರು. ಸಾಹಿತಿಗಳಿಂದ ಸರ್ಕಾರದ ಪ್ರತಿಷ್ಠಾನಗಳಿಗೆ ರಾಜೀನಾಮೆ, ಲೇಖನ ವಾಪಸ್​ಗೆ ಪತ್ರ ಬರೆದಿರುವುದು, ಕುವೆಂಪು, ನಾಡಗೀತೆಗೆ ಅಪಮಾನ ಆರೋಪ ಕುರಿತ ವಿವಾದ ಸೇರಿದಂತೆ ಪರಿಷ್ಕೃತ ಪಠ್ಯದ ಎದ್ದಿರುವ ಗೊಂದಲದ ಬಗ್ಗೆ ಶಿಕ್ಷಣ ಸಚಿವರು

ಸಿಎಂಗೆ ವರದಿ ಸಲ್ಲಿಸಿದರು. ವರದಿ ಮೇಲೆ ಸಚಿವರು ಮತ್ತು ಅಧಿಕಾರಿಗಳ ಜೊತೆ ಸಿಎಂ ಸುದೀರ್ಘ ಸಭೆ ನಡೆಸಿ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಎದ್ದಿರುವ ವಿವಾದದ ಬಗ್ಗೆ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು‌.

ಶಾಲಾ ಶಿಕ್ಷಣದಲ್ಲಿ ಪಠ್ಯಕ್ರಮ ಮತ್ತು ಪಠ್ಯ ಪುಸ್ತಕಗಳನ್ನು ಕಾಲ ಕಾಲಕ್ಕೆ ತಕ್ಕಂತೆ ಪರಿಷ್ಕರಿಸಲಾಗುತ್ತದೆ. ರಾಜ್ಯದಲ್ಲಿ ಹಲವು ಬಾರಿ ಪಠ್ಯ ಪುಸ್ತಕಗಳನ್ನು ಪರಿಷ್ಕರಣೆ ಮಾಡಲಾಗಿದೆ. ಈ ಹಿಂದೆ ಜಾರಿಯಲ್ಲಿದ್ದ ಕೆಲವು ಪಠ್ಯಪುಸ್ತಕಗಳಲ್ಲಿ ಹಲವು ಆಕ್ಷೇಪಾರ್ಹ ಅಂಶಗಳು ಇದ್ದ ಕಾರಣ ಸಮಾಜ ವಿಜ್ಞಾನ ಹಾಗೂ ಕನ್ನಡ ಭಾಷಾ ವಿಷಯಗಳಿಗೆ ಸಂಬಂಧಿಸಿದಂತೆ ಪಠ್ಯ ಪುಸ್ತಕಗಳ ಅಲ್ಪ ಪರಿಷ್ಕರಣೆಯನ್ನು ಮಾಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

Leave a Comment