ಇಂದು ಕರ್ನಾಟಕ ಬಂದ್‌: ಬೆಂಗಳೂರಲ್ಲಿ ಎಂದಿನಂತೆ ಸಹಜ ಜನಜೀವನ

Coastal Bulletin
ಇಂದು ಕರ್ನಾಟಕ ಬಂದ್‌: ಬೆಂಗಳೂರಲ್ಲಿ ಎಂದಿನಂತೆ ಸಹಜ ಜನಜೀವನ

ಬೆಂಗಳೂರು: ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ವಿವಿಧ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಎಂದಿನಂತೆ ಸಂಚಾರ: ಕನ್ನಡಿಗರ ಹಿತರಕ್ಷಣೆಯ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಂದ್‌ಗೆ ಕರೆ ನೀಡಲಾಗಿದ್ದರೂ, ಸಾರ್ವಜನಿಕರು ಹಾಗೂ ಪ್ರಮುಖ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಜನಜೀವನ ಎಂದಿನಂತೆ ಸಹಜವಾಗಿದೆ.

ತುರ್ತು ಸೇವೆಗಳು ಲಭ್ಯ: ರಾಜಧಾನಿಯ ಹೃದಯಭಾಗವಾದ ಮೆಜೆಸ್ಟಿಕ್, ಕೆ.ಆರ್ ಮಾರ್ಕೆಟ್, ಮೈಸೂರು ರಸ್ತೆಯ ಸ್ಯಾಟಲೈಟ್ ಸೇರಿದಂತೆ ವಿವಿಧ ಸಾರಿಗೆ ನಿಲ್ದಾಣಗಳಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸುಗಮವಾಗಿ ಸಾಗುತ್ತಿದೆ. ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್ ಸಂಚಾರ, ನಮ್ಮ ಮೆಟ್ರೋ ಹಾಗೂ ರೈಲು ಸೇವೆಗಳಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.ಇದರೊಂದಿಗೆ ಆಟೋ ರಿಕ್ಷಾ, ಕ್ಯಾಬ್‌ಗಳು, ಹೋಟೆಲ್‌ಗಳು, ಶಾಲೆ - ಕಾಲೇಜುಗಳು, ಸರ್ಕಾರಿ ಕಚೇರಿಗಳು ಮತ್ತು ತರಕಾರಿ, ಹಾಲು ಹಾಗೂ ವೈದ್ಯಕೀಯದಂತಹ ತುರ್ತು ಸೇವೆಗಳು ಸಾರ್ವಜನಿಕರಿಗೆ ಎಂದಿನಂತೆ ಲಭ್ಯವಿವೆ.

ಬಂದ್‌ಗೆ ಕನ್ನಡ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ಸಂಘ ಹಾಗೂ ಕರುನಾಡ ಸೇನೆ ಸೇರಿದಂತೆ ಕೆಲವು ಒಕ್ಕೂಟಗಳು ನೇರ ಬೆಂಬಲ ಸೂಚಿಸಿವೆ. ಆದರೆ, ಕರವೇ ನಾರಾಯಣ ಗೌಡ ಬಣ, ರಾಜ್ಯ ರೈತ

ಸಂಘಟನೆಗಳ ಒಕ್ಕೂಟ, ಖಾಸಗಿ ಸಾರಿಗೆ ಒಕ್ಕೂಟ ಹಾಗೂ ಶಾಲೆಗಳ ಒಕ್ಕೂಟಗಳು ಬಂದ್‌ನಿಂದ ದೂರ ಉಳಿದಿವೆ. ಇನ್ನು ಓಲಾ - ಊಬರ್ ಅಸೋಸಿಯೇಷನ್, ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ಫಿಲಂ ಚೇಂಬರ್ ಸೇರಿದಂತೆ ಹಲವು ಸಂಸ್ಥೆಗಳು ಬಂದ್‌ಗೆ ಕೇವಲ ನೈತಿಕ ಬೆಂಬಲವನ್ನಷ್ಟೇ ವ್ಯಕ್ತಪಡಿಸಿ, ತಮ್ಮ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿವೆ.

ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು, ಮೇಕೆದಾಟು ಯೋಜನೆ ಹಾಗೂ ಮಹದಾಯಿ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸಬೇಕು ಎನ್ನುವುದು ಪ್ರತಿಭಟನಾಕಾರರ ಮುಖ್ಯ ಆಗ್ರಹವಾಗಿದೆ. ಇದರ ಜೊತೆಗೆ ರಾಜ್ಯದಲ್ಲಿ ಪರಭಾಷಿಗರ ದಬ್ಬಾಳಿಕೆ ತಡೆಯುವುದು, ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವುದು ಹಾಗೂ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಬಲಪಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಪ್ರತಿಭಟನಾಕಾರರು ಸರ್ಕಾರದ ಮುಂದಿಟ್ಟಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರ ಪೊಲೀಸರು ನಗರದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಟೌನ್ ಹಾಲ್, ಮೈಸೂರು ಬ್ಯಾಂಕ್ ಸರ್ಕಲ್, ಕೆಆರ್ ಮಾರ್ಕೆಟ್ ಹಾಗೂ ಮೆಜೆಸ್ಟಿಕ್ ಭಾಗಗಳಲ್ಲಿ ಹೆಚ್ಚುವರಿ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಲಾಗಿದೆ.

Leave a Comment