ರಾಮಲ್ ಕಟ್ಟೆ:ಎಳೆಯರ ಬಳಗ ಅಶ್ರಯದಲ್ಲಿ “ಭಜನೆದೊಟ್ಟಿಗೆ ಆಟಿದ ನೆಂಪು” ಕಾರ್ಯಕ್ರಮ.

Coastal Bulletin
ರಾಮಲ್ ಕಟ್ಟೆ:ಎಳೆಯರ ಬಳಗ ಅಶ್ರಯದಲ್ಲಿ “ಭಜನೆದೊಟ್ಟಿಗೆ ಆಟಿದ ನೆಂಪು” ಕಾರ್ಯಕ್ರಮ.

ಬಂಟ್ವಾಳ :ಎಳೆಯರ ಬಳಗ (ರಿ.) ರಾಮಲ್ ಕಟ್ಟೆ, ಎಳೆಯರ ಬಳಗ ಮಹಿಳಾ ಮಂಡಳಿ ಹಾಗೂ ಎಳೆಯರ ಬಳಗ ಭಜನಾ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 2ನೇ ವರ್ಷದ “ಭಜನೆದೊಟ್ಟಿಗೆ ಆಟಿದ ನೆಂಪು” ಕಾರ್ಯಕ್ರಮವು , ಸಾಂಸ್ಕೃತಿಕ ವೈಭವದೊಂದಿಗೆ   ವಿಜೃಂಭಣೆಯಿಂದ ನಡೆಯಿತು.

ಕಳೆದ ವರ್ಷ ಊರಿನ ಕೃಷಿಕರನ್ನು ಗೌರವಿಸುವ ಮೂಲಕ ಆಟಿಯ ಸಂಪ್ರದಾಯ ಮತ್ತು ಕೃಷಿ ಬದುಕಿನ ಮಹತ್ವವನ್ನು ಸ್ಮರಿಸಲಾಗಿತ್ತು. ಈ ಬಾರಿ ಸಮಾಜದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಊರಿನ ಶಿಕ್ಷಕರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು  ವಸಂತಿ ಸುರೇಶ್, ನೊಣಯ್ಯ ಪೂಜಾರಿ ರಾಮಲ್ ಕಟ್ಟೆ, ಶೇಖರ್ ಭಂಡಾರಿ ಹಾಗೂ ಭಜನಾ ಮಂಡಳಿಯ ಸಂಚಾಲಕರಾದ ಸಂತೋಷ್ ಕುಮಾರ್ ರಾಮಲ್ ಕಟ್ಟೆ ಧೂಮ ವಳವೂರು, ನವೀನ್ ರಾಮಲ್ ಕಟ್ಟೆ, ಅನಿಲ್ ರಾಮಲ್ ಕಟ್ಟೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಸಾಧಕರಾದ ಅಶ್ವಿನಿ ಜಯಪ್ರಕಾಶ್, ರಮಣಿ ಮೋಹನ್,ಯೋಗಿನಿ ಪ್ರವೀಣ್, ಕುಮಾರಿ ಸೌಮ್ಯ ಹಾಗೂ ಧನಶ್ರೀ ಪುಷ್ಪರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ವಿ.ಎಸ್. ಟೆಂಪಲ್ ಸ್ಕೂಲ್‌ನ ಮುಖ್ಯ ಉಪಾಧ್ಯಾಯರಾದ ರೋಶನಿ ತಾರಾ ಡಿಸೋಜ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಶಿಸ್ತು, ಸಂಯಮ ಹಾಗೂ ಉತ್ತಮ ಮೌಲ್ಯಗಳನ್ನು ಬೆಳೆಸುವ ಅಗತ್ಯವನ್ನು ಒತ್ತಿಹೇಳಿದರು. ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪೋಷಕರ ಪಾತ್ರವೂ ಮಹತ್ವದ್ದಾಗಿದ್ದು, ಪೋಷಕರು ತಮ್ಮ ಜೀವನದಲ್ಲಿಯೇ ಶಿಸ್ತು ಮತ್ತು ಉತ್ತಮ ನಡವಳಿಕೆಯನ್ನು ಅಳವಡಿಸಿಕೊಂಡಾಗ ಅದರ ಪ್ರಭಾವ ಮಕ್ಕಳ ಮೇಲೂ ಬೀರುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ  ನಿಸಾರ್ ಅಹ್ಮದ್ ತುಂಬೆ ಅವರು ತಮ್ಮ ಬಾಲ್ಯದಿಂದಲೇ ಎಳೆಯರ ಬಳಗದೊಂದಿಗೆ ಹೊಂದಿದ್ದ ಒಡನಾಟ ಹಾಗೂ ಸಂಘದ ವಿವಿಧ ಚಟುವಟಿಕೆಗಳೊಂದಿಗೆ ಬೆಸೆದುಕೊಂಡ ನೆನಪುಗಳನ್ನು ಹಂಚಿಕೊಂಡರು.

ಮತ್ತೋರ್ವ ಅತಿಥಿ ಪ್ರಕಾಶ್ ಆಚಾರ್ಯ ರಾಮಲ್ ಕಟ್ಟೆ ಅವರು ಹಿಂದಿನ ಕಾಲದ

ಆಟಿಯ ಜೀವನಶೈಲಿ, ಗ್ರಾಮೀಣ ಬದುಕಿನ ಸರಳತೆ ಹಾಗೂ ಅಂದಿನ ಆಚರಣೆಗಳ ವೈಶಿಷ್ಟ್ಯವನ್ನು ಮೆಲುಕು ಹಾಕಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಎಳೆಯರ ಬಳಗದ ಅಧ್ಯಕ್ಷರಾದ ಪೂಜೇಶ್ ರಾಮಲ್ ಕಟ್ಟೆ, ಪ್ರಧಾನ ಕಾರ್ಯದರ್ಶಿ  ವಸಂತ ಅಮೀನ್ ಗಾಣದ ಕೊಟ್ಯ, ಮಹಿಳಾ ಮಂಡಳಿ ಅಧ್ಯಕ್ಷರಾದ ವಸಂತಿ ವಸಂತ, ಕ್ಷೇತ್ರದ ಅರ್ಚಕರಾದ ಗುರುಪ್ರಸಾದ್ ಆಚಾರ್ಯ ಹಾಗೂ ಊರಿನ ಹಿರಿಯರಾದ ಗಂಗಾಧರ ಅಮೀನ್ ಗಾಣದ ಕೊಟ್ಯ ಮತ್ತು  ಪದ್ಮನಾಭ ಬೆಳ್ಚಡ ಕಲ್ಲಗುಡ್ಡೆ ಉಪಸ್ಥಿತರಿದ್ದರು.

ಕುಮಾರಿ ತ್ರಿಷಾ ಸತೀಶ್ ಸ್ವಾಗತಿಸಿ, ಕುಮಾರಿ ನಿಶಿಕಾ ಸುಶೀಲ್ ಪ್ರಸ್ತಾವಿಕ ಭಾಷಣ ಮಾಡಿದರು. ಕುಮಾರಿ ಹರ್ಷಿತಾ ಹರೀಶ್ ಅತಿಥಿಗಳ ಸನ್ಮಾನ ಹಾಗೂ ನುಡಿ ನಮನವನ್ನು ನಿರ್ವಹಿಸಿದರು. ಕುಮಾರಿ ಖುಷಿ ತಿಲಕ್ ಧನ್ಯವಾದ ಸಮರ್ಪಿಸಿದರು.  ಮಲ್ಲಿಕಾ ಧನಂಜಯ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಆಟಿಯ ಸಾಂಪ್ರದಾಯಿಕ ಸಂಸ್ಕೃತಿ, ಭಜನಾ ಪರಂಪರೆ ಹಾಗೂ ಸ್ಥಳೀಯ ಸಾಮಾಜಿಕ ಬದುಕನ್ನು ಪ್ರತಿಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ವಿಶೇಷವಾಗಿ ಮಕ್ಕಳ ಸಕ್ರಿಯ ಭಾಗವಹಿಸುವಿಕೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

ಆಟಿಯ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜೊತೆಗೆ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸುವ ಮೂಲಕ ಎಳೆಯರ ಬಳಗದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದ್ಧತೆಯನ್ನು ಕಾರ್ಯಕ್ರಮ ಮತ್ತೊಮ್ಮೆ ಸಾರಿತು.

ಒಟ್ಟಾರೆಯಾಗಿ, ಭಜನೆ, ಸಂಸ್ಕೃತಿ, ಪರಂಪರೆ, ಸಾಮಾಜಿಕ ಗೌರವ ಹಾಗೂ ಸಾಮುದಾಯಿಕ ಸೌಹಾರ್ದತೆಯನ್ನು ಒಂದೇ ವೇದಿಕೆಯಲ್ಲಿ ಬೆಸೆಯುವ ಮೂಲಕ “ಭಜನೆದ ವೊಟ್ಟಿಗೆ – ಆಟಿದ ನೆಂಪು” ಕಾರ್ಯಕ್ರಮವು ಎಲ್ಲರ ಮನದಲ್ಲಿ ಅಚ್ಚಳಿಯದ ನೆನಪಾಗಿ ಮೂಡಿಬಂತು.

Leave a Comment