ತಿರಂಗ ವಾಹನ ಜಾಥಕ್ಕೆ ಪೊಲೀಸ್ ಅನುಮತಿ, ಗೊಂದಲ ನಿವಾರಣೆ: ಆರ್.ಚೆನ್ನಪ್ಪ ಕೋಟ್ಯಾನ್

Coastal Bulletin
ತಿರಂಗ ವಾಹನ ಜಾಥಕ್ಕೆ ಪೊಲೀಸ್ ಅನುಮತಿ, ಗೊಂದಲ ನಿವಾರಣೆ: ಆರ್.ಚೆನ್ನಪ್ಪ ಕೋಟ್ಯಾನ್

ಬಂಟ್ವಾಳ: ಅಗಸ್ಟ್ 13 ರಂದು ಬೆಳಿಗ್ಗೆ 9 ಗಂಟೆಯಿಂದ ನಡೆಯಲಿರುವ ತಿರಂಗ ವಾಹನ ಜಾಥಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿ ದೊರೆತಿದ್ದು, ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಗೊಂದಲಕ್ಕೆ ತೆರೆ ಬಿದ್ದಿದೆ ಎಂದು ತಿರಂಗ ಯಾತ್ರೆಯ ವಾಹನ ಜಾಥ ಸಮಿತಿ ಸಂಚಾಲಕ ಆರ್. ಚೆನ್ನಪ್ಪ ಕೋಟ್ಯಾನ್ ತಿಳಿಸಿದ್ದಾರೆ.

ತಿರಂಗ ವಾಹನ ಜಾಥಕ್ಕೆ ಅನುಮತಿ ಕೋರಿ ಪೊಲೀಸ್ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು. ಅನುಮತಿ ಕುರಿತು ಉಂಟಾಗಿದ್ದ ಗೊಂದಲದ ಹಿನ್ನೆಲೆಯಲ್ಲಿ ಆಯೋಜಕರು ಹಾಗೂ ಪೊಲೀಸ್ ಇಲಾಖೆಯ ನಡುವೆ ಮಾತುಕತೆ ನಡೆದಿದ್ದು, ಇದೀಗ ಜಾಥ ನಡೆಸಲು ಪೊಲೀಸ್ ಅನುಮತಿ ದೊರೆತಿದೆ. ಆದ್ದರಿಂದ ಸಾರ್ವಜನಿಕರು ಯಾವುದೇ ಗೊಂದಲ ಅಥವಾ ವದಂತಿಗಳಿಗೆ ಕಿವಿಗೊಡದೆ ಜಾಥದಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.

ಕಲ್ಲಡ್ಕದಿಂದ ವಾಹನ ಜಾಥ

ಅಗಸ್ಟ್ 13ರಂದು ತಿರಂಗ ವಾಹನ ಜಾಥ ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಮೈದಾನದಿಂದ ಆರಂಭಗೊಳ್ಳಲಿದೆ. ಆರ್‌ಎಸ್‌ಎಸ್ ಪ್ರಮುಖರಾದ ಕಲ್ಲಡ್ಕ ಡಾ. ಪ್ರಭಾಕರ ಭಟ್ ಅವರು ವಾಹನ ಜಾಥಕ್ಕೆ ಚಾಲನೆ ನೀಡಲಿದ್ದಾರೆ.

ದೇಶಭಕ್ತಿ

ಹಾಗೂ ರಾಷ್ಟ್ರಧ್ವಜದ ಗೌರವದ ಸಂದೇಶವನ್ನು ಸಾರುವ ಉದ್ದೇಶದಿಂದ ಆಯೋಜಿಸಲಾಗಿರುವ ತಿರಂಗ ವಾಹನ ಜಾಥದಲ್ಲಿ ತಾಲೂಕಿನ ದೇಶಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಕುಟುಂಬ ಸಮೇತರಾಗಿ ಹಾಗೂ ವಾಹನಗಳೊಂದಿಗೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆರ್. ಚೆನ್ನಪ್ಪ ಕೋಟ್ಯಾನ್ ಮನವಿ ಮಾಡಿದ್ದಾರೆ.

ಜಾಥವು ಪೊಲೀಸ್ ಇಲಾಖೆಯ ಅನುಮತಿ ಹಾಗೂ ನಿಗದಿಪಡಿಸಿರುವ ನಿಯಮ, ಷರತ್ತುಗಳನ್ನು ಪಾಲಿಸಿಕೊಂಡು ಶಾಂತಿಯುತವಾಗಿ ನಡೆಯಲಿದೆ. ಸಾರ್ವಜನಿಕರು ಯಾವುದೇ ಆತಂಕ ಅಥವಾ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಿರಂಗ ವಾಹನ ಜಾಥದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದೇಶಭಕ್ತರು ಪಾಲ್ಗೊಳ್ಳುವ ಮೂಲಕ ರಾಷ್ಟ್ರಭಕ್ತಿಯ ಸಂದೇಶವನ್ನು ಬಲಪಡಿಸಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Comment