ಕಲಬುರಗಿ: ಚಿತ್ತಾಪುರ ಕ್ಷೇತ್ರದಲ್ಲಿ ನಡೆದ ಆರ್‌ಎಸ್ಎಸ್ (RSS) ಪಥಸಂಚಲನ ವಿವಾದದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಈ ಕುರಿತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಸಭೆ ಆಯೋಜಿಸಲಾಯಿತು. ಆದ್ರೆ, ಈ ವೇಳೆ ಸಂಘಟನೆಗಳಿಂದ ವಾಗ್ವಾದ ನಡೆದಿದೆ. ಜೈಭೀಮ್ ಸೇನೆ ಸಂಘಟನೆಯ ಮುಖಂಡ ಗುಂಡಪ್ಪ ಲಂಡನ್ಕರ್ ಅವರನ್ನು ಒಳಗಡೆ ಬಿಡದ ಹಿನ್ನೆಲೆಯಲ್ಲಿ ಪೊಲೀಸರೊಂದಿಗೆ ತೀವ್ರ ವಾಗ್ವಾದ ನಡೆಯಿತು. ಇದರ ಬೆನ್ನಲ್ಲೇ ಮತ್ತೊಂದೆಡೆ ಶಾಂತಿ ಸಭೆಯಲ್ಲಿ RSS ಹಾಗೂ ಇತರೆ ಸಂಘಟನೆಗಳಿಂದ ವಾಗ್ವಾದ ನಡೆಯಿತು, ಈ ಹಿನ್ನೆಲೆಯಲ್ಲಿ ಶಾಂತಿ-ಸಭೆ ಅರ್ಧಕ್ಕೆ ಮೊಟಕುಗೊಂಡಿದೆ.
RSS ಲಾಠಿ ಬಿಟ್ಟು ಪಥಸಂಚಲನ ನಡೆಸಲಿ” ಎಂದು ಇತರ ಸಂಘಟನೆಗಳ ಆಗ್ರಹ
ಚಿತ್ತಾಪುರದಲ್ಲಿ ನಡೆಯಲಿರುವ ಆರ್‌ಎಸ್ಎಸ್ ಪಥಸಂಚಲನ ವಿವಾದದ ಕುರಿತು ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ RSS, ಭೀಮ್ ಆರ್ಮಿ, ಭಾರತೀಯ ದಲಿತ ಪ್ಯಾಂಥರ್ ಹಾಗೂ ಛಲವಾದಿ ಮಹಾಸಭಾ ಸಂಘಟನೆಗಳ ಪ್ರತಿನಿಧಿಗಳನ್ನು ಆಹ್ವಾನಿಸಲಾಗಿತ್ತು. ಆದರೆ ಸಭೆಯಲ್ಲಿ ಒಮ್ಮತ ಬರದೆ, ವಾಗ್ವಾದ ಉಂಟಾಗಿ ಸಭೆ ಅರ್ಧದಲ್ಲೇ ಮುಕ್ತಾಯಗೊಂಡಿದೆ.
ದಲಿತ ಪ್ಯಾಂಥರ್ಸ್ ಮತ್ತು ಜೈಭೀಮ್ ಸೇನೆ ಸಂಘಟನೆಯ ಕಾರ್ಯಕರ್ತರು “ಲಾಠಿ ಬಿಟ್ಟು ಪಥಸಂಚಲನ ನಡೆಸಲಿ” ಎಂದು ಆಗ್ರಹಿಸಿದ್ದರೆ, ಆರ್‌ಎಸ್ಎಸ್ ಅದಕ್ಕೆ ಒಪ್ಪದ ಹಿನ್ನೆಲೆ ವಾಗ್ವಾದ ತೀವ್ರಗೊಂಡಿದೆ. ಸಭೆಯಿಂದ ಹೊರಬಂದ ನಂತರ ಸಂಘಟನೆ ಕಾರ್ಯಕರ್ತರು ಆರ್‌ಎಸ್ಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಥಸಂಚಲನ ಕುರಿತ ಅಂತಿಮ ತೀರ್ಪು ಈಗ ಹೈಕೋರ್ಟ್ ಕೈಯಲ್ಲಿ
ಸಭೆಯಲ್ಲಿ ಯಾವುದೇ ಒಮ್ಮತದ ನಿರ್ಧಾರ ಕೈಗೊಳ್ಳದ ಕಾರಣ ಜಿಲ್ಲಾಡಳಿತ ಎಲ್ಲ ಸಂಘಟನೆಗಳ ಲಿಖಿತ ಅಭಿಪ್ರಾಯವನ್ನು
ಸಂಗ್ರಹಿಸಿ ಹೈಕೋರ್ಟ್‌ಗೆ ವರದಿ ಸಲ್ಲಿಸಲು ತೀರ್ಮಾನಿಸಿದೆ. ಹೀಗಾಗಿ ಆರ್‌ಎಸ್ಎಸ್ ಪಥಸಂಚಲನ ಕುರಿತ ಅಂತಿಮ ತೀರ್ಪು ಈಗ ಹೈಕೋರ್ಟ್ ಕೈಯಲ್ಲಿ ಇದೆ. ಅಕ್ಟೋಬರ್ 30ರಂದು ಕಲಬುರಗಿ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು, ಜಿಲ್ಲೆಯ ಜನತೆ ಅದರತ್ತ ಕಣ್ಣು ಹಾಯಿಸಿದ್ದಾರೆ.
ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಜೈಭೀಮ್ ಸೇನೆ ಸಂಘಟನೆಯ ಮುಖಂಡ
ಪ್ರತಿ ಸಂಘಟನೆಯಿಂದ ಮೂವರಿಗೆ ಮಾತ್ರ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವಂತೆ ಜಿಲ್ಲಾಡಳಿತ ಸೂಚಿಸಿತ್ತು. ಆದರೆ ಜೈಭೀಮ್ ಸೇನೆ ಸಂಘಟನೆಯ ಮುಖಂಡ ಗುಂಡಪ್ಪ ಲಂಡನ್ಕರ್ ಅವರನ್ನು ಸಭೆಗೆ ಒಳಬಿಡದೆ ಪೊಲೀಸರು ತಡೆದ ಹಿನ್ನೆಲೆಯಲ್ಲಿ ವಿವಾದ ಉಂಟಾಗಿತ್ತು. ಸಂಘಟನೆಯವರಿಗೆ ನೋಟಿಸ್ ನೀಡದ ಕಾರಣ ಅವರ ಹೆಸರು ಲಿಸ್ಟ್‌ನಲ್ಲಿ ಇರಲಿಲ್ಲವೆಂದು ಪೊಲೀಸರು ಸ್ಪಷ್ಟಪಡಿಸಿದರು. ಆದರೆ ಗುಂಡಪ್ಪ ಹಾಗೂ ಅವರ ಬೆಂಬಲಿಗರು ಇದನ್ನು ತೀವ್ರವಾಗಿ ವಿರೋಧಿಸಿ, ಡಿಸಿ ಕಚೇರಿ ಪ್ರವೇಶದ್ವಾರದಲ್ಲೇ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರು. ಇದರ ಬೆನ್ನಲ್ಲೇ ಮತ್ತೊಮ್ಮೆ ಶಾಂತಿ ಸಭೆಯಲ್ಲಿ ವಾಗ್ವಾದ ನಡೆದು ಸಭೆ ಅರ್ಧಕ್ಕೇ ನಿಂತಿರುವುದು ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದೆ.










