ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಸಂಜೆ ಸುರಿದ ಗಾಳಿಸಹಿತ ಧಾರಾಕಾರ ಮಳೆಯಿಂದ ನಗರದಾದ್ಯಂತ ಹಲವೆಡೆ ಮರಗಳು ಧರೆಗುರುಳಿವೆ. ಪುಲಕೇಶಿ ನಗರದ ಜೀವನಹಳ್ಳಿಯ ಪೂರ್ವ ಪಾರ್ಕ್ ಸಮೀಪ ಬೈಕ್ ಮೇಲೆ ಮರ ಬಿದ್ದು 3 ವರ್ಷದ ಬಾಲಕಿ ಮೃತಪಟ್ಟ ಘಟನೆ ನಡೆದಿದೆ.
ರಕ್ಷಾ ಮೃತಪಟ್ಟ ಬಾಲಕಿ. ರಾತ್ರಿ 8ರ ಸುಮಾರಿಗೆ ಪುಲಕೇಶಿ ನಗರದಲ್ಲಿ ಸತ್ಯ ಎಂಬವರು ತಮ್ಮ ಮಗಳೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದರು. ಜೀವನಹಳ್ಳಿ ಬಳಿ ರಸ್ತೆ ದಾಟುವಾಗ ಮರ ಬುಡಸಮೇತ ಬೈಕ್ ಮೇಲೆ ಉರುಳಿದೆ. ಬಾಲಕಿಯ ತಲೆಗೆ ತೀವ್ರ ಗಾಯವಾಗಿದ್ದು, ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.
ಬಿಬಿಎಂಪಿ ಅಧಿಕಾರಿಗಳು ಹಾಗೂ ಪುಲಿಕೇಶಿ ನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮರ ತೆರವುಗೊಳಿಸಿದ್ದಾರೆ.
ಧರೆಗುರುಳಿದ 30 ಮರಗಳು: ಬೇಸಿಗೆ ಮಳೆಯಿಂದಾಗಿ ಬೆಂಗಳೂರಿನ ಹಲವೆಡೆ ನೀರು ನಿಂತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. "ಗಾಳಿಸಹಿತ ಭಾರೀ ಮಳೆಯಿಂದಾಗಿ ಸುಮಾರು 30 ಮರಗಳು ನೆಲಕ್ಕುರುಳಿವೆ ಮತ್ತು 48 ಕೊಂಬೆಗಳು ಬಿದ್ದಿವೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತುರ್ತು ಪರಿಸ್ಥಿತಿ ನಿರ್ವಹಣಾ ತಂಡಗಳು ಬಿದ್ದ ಮರಗಳನ್ನು ತೆರವುಗೊಳಿಸುತ್ತಿವೆ. ಆದರೂ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಜನರು ಜಾಗರೂಕರಾಗಿರಬೇಕು ಎಂದು ಅಧಿಕಾರಿಗಳು
ತಿಳಿಸಿದ್ದಾರೆ.
ನಿನ್ನೆ ಸಂಜೆ 5 ಗಂಟೆಯ ಬಳಿಕ ಆರಂಭವಾದ ಗುಡುಗು, ಗಾಳಿಸಹಿತ ಮಳೆ, ರಾತ್ರಿ 10ರವರೆಗೂ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಸುರಿಯಿತು. ಯಲಹಂಕ ಸುತ್ತಮುತ್ತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಮೇಖ್ರಿ ಸರ್ಕಲ್, ಹೆಬ್ಬಾಳ, ಬ್ಯಾಟರಾಯನಪುರ, ಜಕ್ಕೂರು, ಕೆಂಪೇಗೌಡ ವಿಮಾನ ನಿಲ್ದಾಣ ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಮಳೆ ಬಿದ್ದಿದೆ ಎಂದು ವರದಿಯಾಗಿದೆ. ಯಲಹಂಕ ವಲಯದಲ್ಲಿ 16ರಿಂದ 52.50 ಮಿ.ಮೀ ನಷ್ಟು ಪ್ರಮಾಣದ ಮಳೆ ಸುರಿದಿದೆ. ಸಂಜಯನಗರ, ಭೂಪಸಂದ್ರ, ಯಲಹಂಕ ಮತ್ತು ಹೆಬ್ಬಾಳ ಸುತ್ತಮುತ್ತ ಆಲಿಕಲ್ಲುಸಹಿತ ಧಾರಾಕಾರ ಮಳೆಯಾಗಿದೆ. ಅನಿರೀಕ್ಷಿತ ಮಳೆಯಿಂದಾಗಿ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಮಾಡಬೇಕಾಯಿತು.
ವಿಮಾನಗಳ ಮಾರ್ಗ ಬದಲಾವಣೆ: ಬೆಂಗಳೂರು ಸುತ್ತಮುತ್ತ ಗಾಳಿಸಹಿತ ಜೋರು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಗೆ ಬರುತ್ತಿದ್ದ 10 ವಿಮಾನಗಳನ್ನು ಶನಿವಾರ ಸಂಜೆ ಚೆನ್ನೈಗೆ ಮಾರ್ಗ ಬದಲಾವಣೆ ಮಾಡಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.














