ಚಿಕ್ಕಮಗಳೂರು: ನಕ್ಸಲ್ ನಿಗ್ರಹ ಪಡೆ ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ನಡೆಸಿದ ಎನ್ಕೌಂಟರ್ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಹತ್ಯೆಯಾಗಿದ್ದಾನೆ. ಈತ ಕರ್ನಾಟಕ, ಕೇರಳ, ತಮಿಳುನಾಡು ಪೊಲೀಸರಿಗೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಎಂಬುದು ತಿಳಿದುಬಂದಿದೆ. ನಕ್ಸಲ್ ಚಟುವಟಿಕೆಗಳ ಸಂಬಂಧ ವಿಕ್ರಂ ಗೌಡ ಮೇಲೆ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿದ್ದವು.
ವಿಕ್ರಂ ಗೌಡ ನಕ್ಸಲರ ನೇತ್ರಾವತಿ ದಳದ ನಾಯಕ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ. ಆ ಸಂದರ್ಭದಲ್ಲಿ ನಕ್ಸಲ್ ಚಳವಳಿಗೆ ಧುಮುಕಿದ್ದ ವಿಕ್ರಂ ಗೌಡ, ನಂತರದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ನಕ್ಸಲ್ ಹೋರಾಟದ ವೇಳೆ ಕರಾವಳಿ ಭಾಗದಲ್ಲಿ ನೇತ್ರಾವತಿ ದಳವನ್ನು ಮುನ್ನೆಡೆಸಿದ್ದ. ಮತ್ತೊಂದೆಡೆ, ಮಲೆನಾಡು ಭಾಗದಲ್ಲಿ ಮುಂಡಗಾರು ಲತಾ ತಂಡ ಸಕ್ರಿಯವಾಗಿತ್ತು.
ಕೇರಳದಿಂದ ಆಗಮಿಸಿದ್ದ ನಕ್ಸಲರು
ಕೇರಳದಲ್ಲಿ ಕೂಡ ಇತ್ತೀಚೆಗೆ ನಕ್ಸಲ್ ಚಟುವಟಿಕೆ ಹೆಚ್ಚಾಗಿತ್ತು. ಅದರ ಬೆನ್ನಲ್ಲೇ ಅಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯೂ ಚುರುಕಾಗಿತ್ತು. ನಂತರ ಅಲ್ಲಿಂದ ಕಾಲ್ಕಿತ್ತಿದ್ದ ನಕ್ಸಲರು, 2 ತಿಂಗಳುಗಳ ಹಿಂದೆ ಕರ್ನಾಟಕಕ್ಕೆ ಆಗಮಿಸಿದ್ದರು.
ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟ ಸಾಲಿನ ಗ್ರಾಮಗಳು ಹಾಗೂ ಚಿಕ್ಕಮಗಳೂರಿನ ಹಲವೆಡೆ ಇತ್ತೀಚೆಗೆ ನಕ್ಸಲರು ಸಭೆ ನಡೆಸಿದ್ದರು. ಕಸ್ತೂರಿ ರಂಗನ್ ವರದಿ ಜಾರಿ, ಅರಣ್ಯ ಒತ್ತುವರಿ ತೆರವು ಸಂಬಂಧ ಸಭೆ
ನಡೆಸಿದ್ದರು. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ನಕ್ಸಲ್ ಚಟುವಟಿಕೆ ಬಿರುಸುಗೊಂಡಿತ್ತು. ಹೀಗಾಗಿ ಜಿಲ್ಲೆಯ ನಕ್ಸಲ್ಪೀಡಿತ ಪ್ರದೇಶಗಳಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿತ್ತು. ನಕ್ಸಲ್ ನಿಗ್ರಹ ಪಡೆಯಿಂದ ಕಾರ್ಯಾಚರಣೆ ಕೂಡ ಮುಂದುವರಿದಿದೆ.
ಕುದುರೆಮುಖ ನೆಪದಿಂದ ಆರಂಭವಾಗಿದ್ದ ನಕ್ಸಲ್ ಚಟುವಟಿಕೆ
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆ ವಿರೋಧಿಸಿ ಹುಟ್ಟಿಕೊಂಡಿದ್ದ ನಕ್ಸಲ್ ಚಳುವಳಿ, ನಂತರ ಕರ್ನಾಟಕದ ವಿವಿಧ ಭಾಗಗಳಲ್ಲಿ ದಶಕಗಳ ಕಾಲ ಆತಂಕ ಸೃಷ್ಟಿ ಮಾಡಿತ್ತು. ಆದರೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾದ ಬಳಿಕ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ನಕ್ಸಲ್ ಚಳವಳಿಗೆ ಹೆಚ್ಚಿನ ಬೆಂಬಲ ಸಿಕ್ಕಿರಲಿಲ್ಲ. ಹೀಗಾಗಿ ಪಕ್ಕದ ರಾಜ್ಯ ಕೇರಳಕ್ಕೆ ನಕ್ಸಲರು ಸ್ಥಳಾಂತರಗೊಂಡಿದ್ದರು.
ಇದೀಗ ಮತ್ತೆ ಕಸ್ತೂರಿ ರಂಗನ್ ವರದಿ ಜಾರಿ, ಅರಣ್ಯ ಒತ್ತುವರಿ ತೆರವು ವಿಚಾರವಾಗಿ ನಕ್ಸಲರು ಸಭೆಗಳನ್ನು ನಡೆಸಿ, ಚಟುವಟಿಕೆ ಆರಂಭಿಸಿದ್ದಾರೆ.















