ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಭಾರತದ ಮೇಲೆ ತಟ್ಟಿದ್ದು, ಎಲ್‌ಪಿಜಿ ಸಿಲಿಂಡರ್ (LPG Cylinder) ಅಭಾವ ತಲೆದೋರಿದೆ. ಬೆಂಗಳೂರಿನ ಹೋಟೆಲ್‌ಗಳಿಗೆ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದ್ದು, ಹೋಟೆಲ್‌ಗಳು ಬಂದ್ ಆಗುವ ಸಾಧ್ಯತೆ ಇದೆ.
ಗೃಹಬಳಕೆ, ವಾಣಿಜ್ಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಬೆಂಗಳೂರಿನ ಹೋಟೆಲ್ (Bengaluru Hotels) ಉದ್ಯಮಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಗೃಹಬಳಕೆ ಸಿಲಿಂಡರ್ ಸಿಗದೆ ಗ್ರಾಹಕರು ಪರದಾಡುವಂತಾಗಿದೆ. ಗೃಹಬಳಕೆ ಸಿಲಿಂಡರ್ ಬುಕ್ಕಿಂಗ್‌ಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಸರ್ವರ್ ಸಮಸ್ಯೆಯಿಂದ ಬುಕ್ಕಿಂಗ್ ಆಗದೇ ಕಂಗಾಲಾಗಿದ್ದಾರೆ. ಬೆಂಗಳೂರಿನ ಸ್ಟಾರ್ ಹೋಟೆಲ್‌ನ ಅಡುಗೆ ಕೋಣೆಯಲ್ಲಿ ಸೌದೆ ಒಲೆಗಳು ಉರಿಯುತ್ತಿವೆ. ಪ್ರತಿಷ್ಠಿತ 3 ಸ್ಟಾರ್ ಹೋಟೆಲ್‌ನಲ್ಲಿ ಸೌದೆ ಬಳಸಿ ಅಡುಗೆ ತಯಾರಿ ಮಾಡಲಾಗುತ್ತಿದೆ.
ಗ್ಯಾಸ್ ಪೂರೈಕೆ ಸರಿಯಾಗಿ ಆಗಲಿಲ್ಲ ಅಂದ್ರೆ ವೆರೈಟಿ ಫುಡ್ ಮೆನು ಕಡಿತಕ್ಕೆ ಹೋಟೆಲ್‌ಗಳು ಚಿಂತನೆ ನಡೆಸಿವೆ. ಹೆಚ್ಚು ಗ್ಯಾಸ್ ಬಳಕೆಯಾಗುವ ಆಹಾರ ಕೈ ಬಿಡಲು ನಿರ್ಧಾರ ಮಾಡಲಾಗಿದೆ. ಬೆಂಗಳೂರಿನ ಎಲ್ಲಾ ಹೋಟೆಲ್‌ಗಳಲ್ಲಿ ಮೆನು ಇಳಿಕೆಗೆ ಚಿಂತನೆ ನಡೆಸಲಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಕಾರ್ಯದರ್ಶಿ ಕೃಷ್ಣರಾಜ್ ತಿಳಿಸಿದ್ದಾರೆ.
ಬೆಂಗಳೂರಿನ ಪಿಜಿಗಳಿಗೂ ಗ್ಯಾಸ್ ಸಿಲಿಂಡರ್ ಬಿಸಿ ತಟ್ಟಿದೆ. ಪಿಜಿಗಳಿಗೂ
ಕಮರ್ಷಿಯಲ್ ಸಿಲಿಂಡರ್ ಸಿಗುತ್ತಿಲ್ಲ. ಹೀಗಾಗಿ, ಊಟ-ತಿಂಡಿ ವ್ಯವಸ್ಥೆಗೆ ತೊಡಕಾಗಿದೆ. ಪಿಜಿಯಲ್ಲಿ ದೋಸೆ, ಚಪಾತಿ, ಇಡ್ಲಿಗೆ ಕೊಕ್ ನೀಡಲಾಗಿದೆ. ಇಂದಿನಿಂದ ಪಿಜಿ ಮೆನುವಿನಲ್ಲಿ ಬದಲಾವಣೆ ಸಾಧ್ಯತೆ ಇದೆ. ‘ಬೆಂಗಳೂರು ಪಿಜಿಗಳಿಗೆ ಕಮರ್ಷಿಯಲ್ ಸಿಲಿಂಡರ್ ಎರಡು ದಿನಕ್ಕೆ ಆಗುವಷ್ಟು ಸ್ಟಾಕ್ ಇದೆ. ಅದಾದ ಮೇಲೆ ಪರ್ಯಾಯವಾಗಿ ಏನು ಮಾಡಬೇಕು ಅನ್ನೋದನ್ನು ಯೋಚನೆ ಮಾಡುತ್ತಿದ್ದೇವೆ. ಅಡುಗೆ ಒಲೆ ಬಳಕೆ, ಕರೆಂಟ್ ರೈಸ್ ಕುಕ್ಕರ್ ಬಳಕೆ ಬಗ್ಗೆ ನೋಡುತ್ತಿದ್ದೇವೆ’ ಪಿಜಿ ಮಾಲೀಕರು ಹೇಳುತ್ತಿದ್ದಾರೆ.
ಇಂಡಿಯನ್ ಆಯಲ್ ಗ್ಯಾಸ್ ಪ್ಲಾಂಟ್‌ನಿಂದ ಸಿಲಿಂಡರ್ ಪೂರೈಕೆ ಬಂದ್ ಆಗಿದೆ. ಹೊಸಕೋಟೆ ಬಳಿ ಇರುವ ಸಿಲಿಂಡರ್ ಸರಬರಾಜು ಮಾಡುವ ಪ್ಲಾಂಟ್, ರಾಜ್ಯದ ಬಹುತೇಕ ಭಾಗಗಳಿಗೆ ಸಿಲಿಂಡರ್ ಸರಬರಾಜು ಮಾಡುತ್ತಿತ್ತು. ಕಳೆದ ಮೂರು ದಿನಗಳಿಂದ ಕಮರ್ಷಿಯಲ್ ಸಿಲಿಂಡರ್ ಲೋಡ್ ನಿಂತಿದೆ. ಮೂರು ದಿನದಿಂದ ಸಿಲಿಂಡರ್ ಲಾರಿಗಳು ಅಲ್ಲೇ ನಿಂತಿವೆ. ಪ್ರತಿನಿತ್ಯ 250-300 ಲೋಡ್ ಮಾಡಲಾಗ್ತಿದ್ದ ಸಂಖ್ಯೆಯಲ್ಲಿ ಕುಸಿತವಾಗಿದೆ.















