ಆರು ಆರೋಪಿಗಳಿಗೆ ಗೂಂಡಾ ಕಾಯ್ದೆ: ಸೆ.28ರಂದು ಬಿಸಿರೋಡಿನಲ್ಲಿ ಖಂಡನಾ ಪ್ರತಿಭಟನೆ

Coastal Bulletin
ಆರು ಆರೋಪಿಗಳಿಗೆ ಗೂಂಡಾ ಕಾಯ್ದೆ: ಸೆ.28ರಂದು ಬಿಸಿರೋಡಿನಲ್ಲಿ ಖಂಡನಾ ಪ್ರತಿಭಟನೆ

ಬಂಟ್ವಾಳ: ಕೊಳತ್ತಮಜಲು ಅಬ್ದುಲ್ ರಹಮಾನ್ ಕೊಲೆ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿರುವುದನ್ನು ವಿರೋಧಿಸಿ ಸೆ.28ರಂದು ಬಿಸಿರೋಡಿನಲ್ಲಿ ಬೃಹತ್ ಖಂಡನಾ ಪ್ರತಿಭಟನೆ ನಡೆಸಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ತಿಳಿಸಿದ್ದಾರೆ.

ಬಿ ಸಿ ರೋಡಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣದಲ್ಲಿ ಭರತ್ ಕುಮ್ಮೇಲು, ಶಿವಪ್ರಸಾದ್, ಪ್ರದೀಪ್, ಅಭಿನವ್ ರೈ, ತೇಜಾಕ್ಷ ಹಾಗೂ ರಂಜಿತ್ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿರುವ ಕ್ರಮವನ್ನು ಪ್ರಶ್ನಿಸಿದರು. ಆರೋಪಿಗಳಿಗೆ ನ್ಯಾಯಾಲಯದಿಂದ ಜಾಮೀನು ದೊರೆತ ಬಳಿಕವೂ ಜೈಲಿನಿಂದ ಬಿಡುಗಡೆಯಾಗದಂತೆ ಮತ್ತೊಂದು ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದರು.

ಕೊಲೆ ಪ್ರಕರಣದ ತನಿಖೆಯ ವೇಳೆ ಪ್ರಕರಣದ ಸ್ವರೂಪದಲ್ಲಿ ಬದಲಾವಣೆಗಳಾಗಿದ್ದು, ಸಂಘಟನೆಯಲ್ಲಿ ಸಕ್ರಿಯರಾಗಿದ್ದ ಕಾರ್ಯಕರ್ತರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂಬುದು ವಿಹಿಂಪ

ಮುಖಂಡರ ಆರೋಪವಾಗಿದೆ. ರಾಜ್ಯ ಸರ್ಕಾರದ ರಾಜಕೀಯ ಧೋರಣೆ, ಪೊಲೀಸ್ ಇಲಾಖೆಯ ದುರುಪಯೋಗ ಹಾಗೂ ಹಿಂದೂ ಕಾರ್ಯಕರ್ತರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಸೆ.28ರಂದು ಬಿಸಿರೋಡಿನಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ತಾಲೂಕು ಹಾಗೂ ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಕಾರ್ಯಕರ್ತರು ಮತ್ತು ಹಿಂದೂ ಸಮಾಜದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಪ್ರಾಂತ ಸಂಯೋಜಕ ಭುಜಂಗ ಕುಲಾಲ್, ಜಿಲ್ಲಾ ಸಂಯೋಜಕ ಲೋಹಿತ್ ಪಣೋಲಿಬೈಲ್, ಸಹಸಂಯೋಜಕ ಸಂತೋಷ್ ಸರಪಾಡಿ ಹಾಗೂ ಕಾರ್ಯದರ್ಶಿ ಸಚಿನ್ ಮೆಲ್ಕಾರ್ ಉಪಸ್ಥಿತರಿದ್ದರು.

Leave a Comment