Coastal Bulletin

ಕನಕಪುರ : ಮೇಕೆದಾಟು ಪಾದಯಾತ್ರೆ ಕನಕಪುರ ಸಮೀಪವಿರುವ ಕಾವೇರಿ ಹಾಗೂ ಅರ್ಕಾವತಿ ನದಿಗಳ ಸಂಗಮ ತಾಣದಲ್ಲಿ ಭಾನುವಾರ ಅದ್ಧೂರಿ ಚಾಲನೆ ಪಡೆದುಕೊಂಡಿದೆ.

ಬೆಂಗಳೂರು ಸೇರಿ ಕಾವೇರಿ ಜಲಾನಯನ ಪ್ರದೇಶದ ಎರಡೂವರೆ ಕೋಟಿ ಜನರಿಗೆ ನೀರುಣಿಸುವ ಮೇಕೆದಾಟು ಯೋಜನೆಗೆ ಚಾಲನೆ ನೀಡಿ ಒತ್ತಡ ಹೇರುವ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಕಾಂಗ್ರೆಸ್‌  ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ ಕನಕಪುರ ಸಮೀಪವಿರುವ ಕಾವೇರಿ ಹಾಗೂ ಅರ್ಕಾವತಿ ನದಿಗಳ ಸಂಗಮ ತಾಣದಲ್ಲಿ ಭಾನುವಾರ ಅದ್ಧೂರಿ ಚಾಲನೆ ಪಡೆದುಕೊಂಡಿದೆ.


1999ರಲ್ಲಿ ಎಸ್‌.ಎಂ.ಕೃಷ್ಣ ಅವರ ಪಾಂಚಜನ್ಯ ಯಾತ್ರೆ ಹಾಗೂ 2010ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಬಳ್ಳಾರಿ ಪಾದಯಾತ್ರೆಗಳು ರೂಪಿಸಿದ ಮ್ಯಾಜಿಕ್‌ ಅನ್ನು ಪುನರ್‌ ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಆಯೋಜನೆಗೊಂಡಿರುವ 10 ದಿನಗಳ ಈ ನೀರಿಗಾಗಿ ನಡಿಗೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಬೆಳಗ್ಗೆ

8 ಗಂಟೆಗೆ ಚಾಲನೆ ನೀಡಿದರು.


169 ಕಿ.ಮೀ ಯಾತ್ರೆ:

ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಸೇರಿದಂತೆ ಒಕ್ಕಲಿಗ ಪ್ರಾಬಲ್ಯದ ಜಿಲ್ಲೆಗಳ ಮೂಲಕ 169 ಕಿ.ಮೀ ದೂರ ಹಾದುಹೋಗುವ ಈ ಪಾದಯಾತ್ರೆಗೆ ಆಡಳಿತಾರೂಢ ಬಿಜೆಪಿ ಹಾಗೂ ಒಕ್ಕಲಿಗ ಬೆಲ್ಟ್‌ನ ಪ್ರಬಲ ಪಕ್ಷ ಎನಿಸಿದ ಜೆಡಿಎಸ್‌ ತೀವ್ರ ಆಕ್ಷೇಪ ಎತ್ತಿವೆ. ಅಧಿಕಾರದಲ್ಲಿದ್ದಾಗ ಕ್ರಮ ಕೈಗೊಳ್ಳದೆ ಈಗ ನೀರಿಗಾಗಿ ನಡಿಗೆ ಆಂದೋಲನ ನಡೆಸುವುದು ಅರ್ಥಹೀನ ಎಂದೇ ಈ ಪಕ್ಷಗಳ ನಾಯಕರು ಟೀಕಿಸಿದ್ದಾರೆ.

ಕೊರನಾ ಟಫ್ ರೂಲ್ಸ್ ನಡುವೆ ಚಾಲನೆ ನೀಡಿರುವ ಮೇಕೆದಾಟು ಪ್ರತಿಭಟನೆಗೆ ಸಾರ್ವಜನಿಕರೂ ತೀವ್ರ ಅಸಮಾಧಾನ ಹೊರಹಾಕಿದ್ದು ಸರಕಾರದ ರೂಲ್ಸ್‌ ಕೇವಲ ಸಾಮಾನ್ಯ ವರ್ಗದ ಜನರಿಗೆ ಮಾತ್ರನಾ ಎಂದು ಪ್ರಶ್ನಿಸಿದ್ದಾರೆ.


ಇದೇ ವಿಚಾರದಲ್ಲಿ ಸಿ.ಎಂ ಬೊಮ್ಮಾಯಿ ಇಂದು ಸಚಿವರ ಸಭೆ ಕರೆದಿದ್ದಾರೆ.

Leave a Comment