ಧರ್ಮಸ್ಥಳ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿದೆ, ಎಸ್ಐಟಿ ಮೇಲೆ ಒತ್ತಡವಿಲ್ಲ: ಸತೀಶ್ ಜಾರಕಿಹೊಳಿ

Coastal Bulletin
ಧರ್ಮಸ್ಥಳ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿದೆ, ಎಸ್ಐಟಿ ಮೇಲೆ ಒತ್ತಡವಿಲ್ಲ: ಸತೀಶ್ ಜಾರಕಿಹೊಳಿ

ಬೆಳಗಾವಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ಮಹಿಳಾ ಸಂಘಟನೆಗಳು ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಈ ಪ್ರಕರಣದಲ್ಲಿ ಯಾರು ಪತ್ರ ಬರೆದರೂ ಪ್ರಯೋಜನವಿಲ್ಲ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ. ಎಸ್ಐಟಿ ರಚಿಸಲಾಗಿದ್ದು ತನಿಖೆ ಪೂರ್ಣಗೊಳ್ಳುವತನಕ ಕಾಯಬೇಕು ಅಷ್ಟೇ. ಎಸ್ಐಟಿ ಮೇಲೆ ಯಾವುದೇ, ಯಾರದೇ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದರು. ರಾಹುಲ್ ಜಾರಕಿಹೊಳಿ ಬಿಡಿಸಿಸಿ ಬ್ಯಾಂಕ್‌ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತೀರ್ಮಾನಿಸಿಲ್ಲ. ಇನ್ನು ಚುನಾವಣೆಗೆ ಒಂದು ತಿಂಗಳು ಕಾಲಾವಕಾಶವಿದೆ. ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಗಣೇಶ ಚತುರ್ಥಿ ಮುಗಿದ ನಂತರ ಸಭೆ, ಸಮಾರಂಭ ಪ್ರಾರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಗಣೇಶ ವಿಸರ್ಜನೆಗೆ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆಯಿಂದ ಸಕಲ ಸಿದ್ಧತೆ ಕೈಗೊಂಡಿದ್ದು, ಗಣೇಶ ವಿಸರ್ಜನೆ ಸುಗಮವಾಗಿ ಸಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ನಗರದ ಕುಮಾರ ಗಂಧರ್ವ ಕಲಾ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಣೇಶ ಹಬ್ಬದ ನಿಮಿತ್ತ ಆಯಾ ಮಂಡಳದವರು ಮಹಾ ಪ್ರಸಾದ ಮಾಡಿದ್ದಾರೆ. ಜಿಲ್ಲಾಡಳಿತ ಕೂಡ ಸಹಾಯ ಮಾಡಿದ್ದು, ನಾವು ಸಹಕಾರ ನೀಡಿದ್ದೇವೆ ಎಂದರು.

ಹುಕ್ಕೇರಿ ಕ್ಷೇತ್ರದಲ್ಲಿ ಚುನಾವಣೆಗೆ

ಸಂಬಂಧಿಸಿದಂತೆ ಆಣೆ, ಪ್ರಮಾಣ ಮಾಡುತ್ತಿರುವ ಬಗ್ಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಆಣೆ, ಪ್ರಮಾಣ ಮಾಡುವುದು ಸಾಮಾನ್ಯ. ಯಾರ ಮೇಲೆ ವಿಶ್ವಾಸ, ಪ್ರೀತಿ ಇರುತ್ತದೆ ಅವರನ್ನು ಮತದಾರರು ಬೆಂಬಲಿಸುತ್ತಾರೆ. ಇನ್ನು ಬೆಳಗಾವಿ ಜನತೆಯ ಬಹುದಿನಗಳ ಬೇಡಿಕೆಯಾದ ಪ್ಲೈಒವರ್ ಯೋಜನೆಯ ನೀಲನಕ್ಷೆ, ವಿಡಿಯೋವನ್ನು ಗಣೇಶ ವಿಸರ್ಜನೆ ವೇಳೆ ಸ್ಕ್ರೀನ್‌ನಲ್ಲಿ ನೋಡಲು ಅನುವು ಮಾಡಲಾಗುತ್ತಿದೆ. ವಾರಗಳ ಹಿಂದೆ ಬಿಡುಗಡೆಯಾದ ವಿಡಿಯೋ ಅಧಿಕೃತವಲ್ಲ, ಈ ಬಗ್ಗೆ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ ಎಂದರು.

Leave a Comment