ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಪಿಎ ಸೇರಿ ಮೂವರ ಹೆಸರು ಉಲ್ಲೇಖಿಸಿ ನಗರದ ತಹಸೀಲ್ದಾರ್‌ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ನೇಣು ಬಿಗಿದುಕೊಂಡು ಆತ್ಮಹತ್ಯೆ

Coastal Bulletin
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಪಿಎ ಸೇರಿ ಮೂವರ ಹೆಸರು ಉಲ್ಲೇಖಿಸಿ ನಗರದ ತಹಸೀಲ್ದಾರ್‌ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಳಗಾವಿ: ಶಿವಮೊಗ್ಗದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಬೆನ್ನಲ್ಲೇ ಇದೀಗ ಮತ್ತೊಬ್ಬ ಸರ್ಕಾರಿ ನೌಕರ ಸಾವಿಗೆ ಶರಣಾಗಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಪಿಎ ಸೇರಿ ಮೂವರ ಹೆಸರು ಉಲ್ಲೇಖಿಸಿ ನಗರದ ತಹಸೀಲ್ದಾರ್‌ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ನಡೆದಿದೆ.

ಘಟನೆಗೆ ಸಂಬಂಧಿಸಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಆಪ್ತ ಸಹಾಯಕ ಸೋಮು ದೊಡವಾಡಿ, ಬೆಳಗಾವಿ ತಹಸೀಲ್ದಾರ್‌ ಬಸವರಾಜ ನಾಗರಾಳ, ತಹಸೀಲ್ದಾರ್‌ ಕಚೇರಿ ಎಫ್‌ಡಿಸಿ ಅಶೋಕ ಕಬ್ಬಳಿಗೇರ ವಿರುದ್ಧ ಖಡೆಬಜಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರೂ ತಲೆಮರೆಸಿಕೊಂಡಿದ್ದಾರೆ. ರುದ್ರಣ್ಣ ಯಡವಣ್ಣವರ್ (35) ಆತ್ಮಹತ್ಯೆ ಮಾಡಿಕೊಂಡ ಎಸ್‌ಡಿಸಿ ನೌಕರ. ವರ್ಗಾವಣೆ ವಿಚಾರವಾಗಿ ಮನನೊಂದಿದ್ದ ಅವರು ಸೋಮವಾರ ರಾತ್ರಿಯೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗ್ಗೆ ಎಂದಿನಂತೆ ಕಚೇರಿಗೆ ಸಿಬ್ಬಂದಿ ಆಗಮಿಸಿದಾಗ ವಿಚಾರ ಬೆಳಕಿಗೆ ಬಂದಿದೆ. 

ಈ ಮಧ್ಯೆ ತನ್ನ ಸಾವಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಆಪ್ತ ಸಹಾಯಕ ಸೋಮು ದೊಡವಾಡಿ ಸೇರಿ ಮೂವರು ಕಾರಣ ಎಂದು ವಾಟ್ಸಪ್‌ ಮೆಸೇಜ್‌ ಮಾಡಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಘಟನೆಯನ್ನು ಖಂಡಿಸಿ ಬಿಜೆಪಿ ಪ್ರತಿಭಟನೆಯನ್ನೂ ನಡೆಸಿದ್ದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದೆ.

ಆಗಿದ್ದೇನು?: ಸೋಮವಾರವಷ್ಟೇ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್ ಅವರು ರುದ್ರಣ್ಣ ಯಡವಣ್ಣವರ್ ಅವರನ್ನು ಸವದತ್ತಿಯ ಯಲ್ಲಮ್ಮ ದೇವಸ್ಥಾನದ ಆಡಳಿತ ಮಂಡಳಿಗೆ ವರ್ಗಾವಣೆ ಮಾಡಿ ಆದೇಶಿಸಿದ್ದರು. ರುದ್ರಣ್ಣ ಪತ್ನಿ ಗಿರಿಜಾ ಬೆಳಗಾವಿಯ ಅನಗೋಳದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಒಂದು ವೇಳೆ ತಮ್ಮ ವರ್ಗಾವಣೆಯಾದರೆ ಕೌಟುಂಬಿಕ ಸಮಸ್ಯೆ ಆಗಬಹುದು ಎಂದು ವರ್ಗಾವಣೆ ತಡೆಯುವಂತೆ ಹೆಬ್ಬಾಳ್ಕರ್‌ ಆಪ್ತ ಸಹಾಯಕನ ಬಳಿ ರುದ್ರಣ್ಣ ಮನವಿ ಮಾಡಿದ್ದರು. ಅಲ್ಲದೆ, ವರ್ಗಾವಣೆ ತಡೆಯುವಂತೆ ₹2 ಲಕ್ಷ ಕೂಡ ನೀಡಿದ್ದರು ಎನ್ನಲಾಗಿದೆ.

ಆದರೆ ಸೋಮವಾರ ತನ್ನ ವರ್ಗಾವಣೆ ವಿಚಾರ ತಿಳಿದು ತೀವ್ರ ನೊಂದಿದ್ದ ರುದ್ರಣ್ಣ, ನಮ್ಮ ಕಚೇರಿಯಲ್ಲಿ ತುಂಬಾ ಅನ್ಯಾಯ ನಡೆಯುತ್ತಿದೆ. ದಯವಿಟ್ಟು ಎಲ್ಲರೂ ಒಟ್ಟಾಗಿ ಹೋರಾಡಿ ಎಂದು ಕಚೇರಿಯ ನೌಕರರ ವಾಟ್ಸಪ್‌ ಗ್ರೂಪ್‌ನಲ್ಲಿ ರಾತ್ರಿ 7.31ಕ್ಕೆ ಮಸೇಜ್ ಹಾಕಿದ್ದರು. ವರ್ಗಾವಣೆ ಆದೇಶ ಪ್ರತಿಯನ್ನೂ ಹಂಚಿಕೊಂಡಿದ್ದರು. ಜತೆಗೆ, ನನ್ನ ಸಾವಿಗೆ ತಹಸೀಲ್ದಾರ್ ಬಸವರಾಜ ನಾಗರಾಳ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಆಪ್ತ ಸಹಾಯಕ ಸೋಮು ದೊಡವಾಡಿ ನೇರ ಕಾರಣ ಎಂದು ಆರೋಪಿಸಿದ್ದರು. ಬಳಿಕ ರಾತ್ರಿ 7.35ಕ್ಕೆ ಉಪತಹಸೀಲ್ದಾರ್‌ ಅಶೋಕ ಕಬ್ಬಲಿಗೇರ ಕೂಡ ನನ್ನ ಸಾವಿಗೆ

ಕಾರಣ ಎಂದು ಮೆಸೇಜ್ ಹಾಕಿದ್ದರು. ಮಂಗಳವಾರ ಬೆಳಗ್ಗೆ ಸಿಬ್ಬಂದಿ ಎಂದಿನಂತೆ ಕಚೇರಿಗೆ ಬಂದಾಗ ಕಚೇರಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಮಂಗಳವಾರ ಮಧ್ಯಾಹ್ನವರೆಗೂ ಶವ ಕಚೇರಿಯಲ್ಲೇ ನೇತಾಡುತ್ತಿತ್ತು. ನಂತರ ಕುಟುಂಬಸ್ಥರ ಸಮ್ಮುಖ ರುದ್ರಣ್ಣ ಅವರ ಶವದ ಪಂಚನಾಮೆ ನಡೆಸಲಾಯಿತು. ಡಿಸಿಪಿ ರೋಹನ್ ಜಗದೀಶ್, ಎಸಿ ಶ್ರವಣಕುಮಾರ ನಾಯಕ, ಎಫ್‌ಎಸ್‌ಎಲ್ ಸಿಬ್ಬಂದಿ ನೇತೃತ್ವದಲ್ಲಿ ಪಂಚನಾಮೆ ಪ್ರಕ್ರಿಯೆ ನಡೆಯಿತು. ಬಳಿಕ ಬೆಳಗಾವಿ ಬಿಮ್ಸ್‌ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನಿಸಲಾಯಿತು.

ಕಾಲ್ಕಿತ್ತ ತಹಸೀಲ್ದಾರ್: ಎಸ್‌ಡಿಸಿ ರುದ್ರಣ್ಣ ಆತ್ಮಹತ್ಯೆ ಪ್ರಕರಣ ತೀವ್ರ ಸಂಚಲನಕ್ಕೆ ಕಾರಣವಾಗುತ್ತಿದ್ದಂತೆ ತಹಸೀಲ್ದಾರ್‌ ಬಸವರಾಜ ನಾಗರಾಳ ಅವರು ಕಚೇರಿಯಿಂದ ಕಾಲ್ಕಿತ್ತಿದ್ದಾರೆ. ಬೆಳಗ್ಗೆ ಚೇಂಬರ್‌ಗೆ ಹೋಗಿ ಮೃತ ರುದ್ರಣ್ಣ ಶವ ನೋಡಿದ ನಾಗರಾಳ ಅವರು ಪೊಲೀಸರು ಕಚೇರಿಗೆ ಬರುತ್ತಿದ್ದಂತೆ ಸರ್ಕಾರಿ ವಾಹನದಲ್ಲಿ ತೆರಳಿದ್ದಾರೆ. ರುದ್ರಣ್ಣ ತಂದೆ ದುಂಡಪ್ಪ ಕೂಡ ಗ್ರಾಮ ಲೆಕ್ಕಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದರು. ಅವರ ಅಕಾಲಿಕ ನಿಧನದ ಬಳಿಕ ಅನುಕಂಪದ ಆಧಾರದ ಮೇಲೆ ರುದ್ರಣ್ಣನಿಗೆ ಸರ್ಕಾರಿ ನೌಕರಿ ಸಿಕ್ಕಿತ್ತು. 10 ವರ್ಷಗಳಿಂದ ತಹಸೀಲ್ದಾರ್‌ ಕಚೇರಿಯಲ್ಲಿ ಎಸ್‌ಡಿಎ ಆಗಿ ಸೇವೆ ಸಲ್ಲಿಸುತ್ತಿದ್ದರು. ಬಿಜೆಪಿ ನಿಯೋಗ ಭೇಟಿ: ಎಸ್‌ಡಿಎ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ನೇತೃತ್ವದ ನಿಯೋಗ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬೆಳಗಾವಿ ತಹಸೀಲ್ದಾರ್‌ ಕಚೇರಿಯ ಎಸ್‌ಡಿಸಿ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣದ ಕುರಿತು ತನಿಖೆ ಜಾರಿಯಲ್ಲಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪೊಲೀಸ್ ಇಲಾಖೆಗೆ ಎಲ್ಲ ಸಹಕಾರ ನೀಡುತ್ತೇವೆ. ಮೃತ ವ್ಯಕ್ತಿ ವಾಟ್ಸಪ್‌ ಗ್ರೂಪ್‌ನಲ್ಲಿ ಹಾಕಿರುವ ಮೆಸೇಜ್‌ ಕುರಿತು ತನಿಖೆಯಾಗಬೇಕು. ಯಾವುದೇ ಒತ್ತಡ ಇಲ್ಲದೆ ತನಿಖೆ ಮಾಡಲು ಪೊಲೀಸರಿಗೆ ತಿಳಿಸಲಾಗಿದೆ.

-ಮೊಹಮ್ಮದ್‌ ರೋಷನ್‌, ಜಿಲ್ಲಾಧಿಕಾರಿ

ಎಸ್‌ಡಿಸಿ ರುದ್ರಣ್ಣ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪೊಲೀಸ್‌ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ. ವಾಟ್ಸಪ್‌ ಗ್ರೂಪ್‌ನಲ್ಲಿ ಅನ್ಯಾಯ ಆಗಿದೆ ಎಂದು ದೂರಲಾಗಿದೆ. ಪ್ರಕರಣದಲ್ಲಿ ಸಚಿವರ ಪಿಎ ತಪ್ಪಿರಬಹುದು. ಆದರೆ ಸಚಿವರ ಮೇಲೆ ಆರೋಪ ಮಾಡಲು ಅವರ ಪಾತ್ರ ಏನಿದೆ? ನಾನು ತನಿಖಾಧಿಕಾರಿಯಲ್ಲ. ತನಿಖಾ ವರದಿ ಬರುವವರೆಗೆ ಕಾಯೋಣ.

- ಸತೀಶ್‌ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

Leave a Comment