ಬಂಧಿ
ಅಮ್ಮನ ಗರ್ಭದೊಳಗಿರಳು ಕಂಡಳು ಕನಸೊಂದು..
ಪಕ್ಷಿಯಂದದಿ ಬಾನೆತ್ತರ ಹಾರುವ ಆಸೆಯೊಂದು..
ಇಳೆಗೆ ಲಗ್ಗೆಯನಿಡಲು ಹೆಣೆದಿದೆ ಸಂಕೋಲೆಯೊಂದು..
ಶಾಪಗ್ರಸ್ತಳಾದಳೇ ಎಂದೆಂದು.
ಬಾಲ್ಯದಿ ಆವರಿಸಿದೆ ಕಟ್ಟುಪಾಡುಗಳ ಅಲೆ..
ಬೇರೂರಿತು ಆವಳ ಭವಿಷ್ಯದ ನೆಲೆ..
ಬಾಳಾಟದ ಹೊರೆ ತುಂಬಿದೆ ತಲೆ..
ಮುಗುಮ್ಮಾದ ಮೌನವು ಕಲ್ಪಿತಕ್ಕೆ ಮಿಗಿಲಾದ ಕಲೆ.
ಮಾಮರದಡಿಯಲಿ
ಗರಿಕೆಯ ಚಿಗುರಂತೆ..
ಪರರ ಇಚ್ಚೆಯಂತೆ ಬದುಕು ಕಟ್ಟಿಕೊಂಡಂತೆ..
ನೋವು ಜಂಜಾಟಗಳ ಸಂತೆ..
ಆದರೂ ಶೋಭಿಸುವಳು ನಿಶೆಯಲ್ಲಿ ಕಂಡ ಜ್ಯೋತಿಯಂತೆ.
ಹೆಣ್ಣೇ ನೀ ಜೇಡನ ಬಲೆಗೆ ಅಂಟಿಕೊಂರುವೆ..
ಎಂದು ತಿಳಿನೀರಿನಂತೆ ಹರಿವೆ..
ಎಂದೂ ಸಮತೆಯ ಹಾದಿಯಲಿ ನಡೆವೆ..
ಹೆಣ್ಣೇ ನೀ ತನ್ನವರೇ ಸೃಷ್ಟಿಸಿದ ಬಂಧನದಿ ಬಂಧಿಯಾಗಿರುವೆ.















