ಪೈವಳಿಕೆ: ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ಕೇರಳದಲ್ಲಿ ಬಾಯಾರು ಗ್ರಾಮ 20 ವರ್ಷಗಳಿಂದ ಮೂಲಸೌಕರ್ಯ ವಂಚಿತವಾಗಿ ನರಳುತ್ತಿದೆ. ನೇರಳಕಟ್ಟೆ ಉಳುವಾನದಿಂದ ದಲಿಕುಕ್ಕುಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಡಾಮರು ಕಾಣದೆ, ಚರಂಡಿ ಇಲ್ಲದೆ ಕೆಸರುಗದ್ದೆಯಂತಾಗಿದೆ. ಮಳೆಗಾಲದಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ದುಸ್ಥಿತಿ ಇಲ್ಲಿನ ಜನರದ್ದು.
ಈ ಹಾಳಾದ ರಸ್ತೆಯೇ ದಲಿಕುಕ್ಕು ಎ.ಎಲ್.ಪಿ ಶಾಲೆ ಹಾಗೂ ಅಂಗನವಾಡಿಗೆ ಹೋಗುವ ದಾರಿ. ರಸ್ತೆ ದುಸ್ಥಿತಿಯಿಂದಾಗಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದು, ವಿದ್ಯಾರ್ಥಿಗಳ ಕೊರತೆಯಿಂದ ಶಾಲೆ ಶಾಶ್ವತವಾಗಿ ಮುಚ್ಚುವ ಅಪಾಯ ಎದುರಾಗಿದೆ.
ದುರ್ಗಾಂಬಾ ಭಜನಾ ಮಂದಿರ ಸೇರಿದಂತೆ ಸುಮಾರು 50 ಮನೆಗಳಿಗೆ ಇದೊಂದೇ ಸಂಪರ್ಕ ರಸ್ತೆ. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಬರಲಾಗದ ಪರಿಸ್ಥಿತಿ ಇದೆ. ತೋಡಿನ ಮೇಲಿನ ಕಾಲುಸಂಕವು ಕೇವಲ ಅಡ್ಡಲಾಗಿ ಹಾಕಿದ ಹಳೆಯ ಮರದ ದಿಮ್ಮಿಗಳಿಂದ ಕೂಡಿದೆ. ಮಳೆಗಾಲದಲ್ಲಿ ಜಾರಿ, ಕೊಳೆತು ಸಂಪೂರ್ಣ ಶಿಥಿಲವಾಗಿದೆ. ದಿನನಿತ್ಯ ಕೆಲಸಕ್ಕೆ,
ಬೇರೆ ಶಾಲೆಗಳಿಗೆ ಹೋಗುವ ನೂರಾರು ಜನರು ಪ್ರಾಣಭಯದಲ್ಲೇ ಈ ಸೇತುವೆ ದಾಟುವಂತಾಗಿದೆ.
ಗ್ರಾಮ ಪಂಚಾಯತ್‌ನಿಂದ ಜಿಲ್ಲಾ ಪಂಚಾಯತ್‌ವರೆಗೆ, ಸ್ಥಳೀಯ ಶಾಸಕರವರೆಗೆ ಹತ್ತಾರು ಮನವಿ ಸಲ್ಲಿಸಿದರೂ ಭರವಸೆ ಮಾತ್ರ ಸಿಕ್ಕಿದೆಯೇ ಹೊರತು ಕಾಮಗಾರಿ ಆರಂಭವಾಗಿಲ್ಲ.
"ಇದು ನಮ್ಮ ಬೇಡಿಕೆಯಲ್ಲ, ಹಕ್ಕು. ತಕ್ಷಣ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಯುದ್ಧೋಪಾದಿಯಲ್ಲಿ ರಸ್ತೆ ಡಾಮರೀಕರಣ, ವೈಜ್ಞಾನಿಕ ಚರಂಡಿ ಹಾಗೂ ಸುಸಜ್ಜಿತ ಸೇತುವೆ ನಿರ್ಮಾಣಕ್ಕೆ ಆದೇಶಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ" ಎಂದು ದಲಿಕುಕ್ಕು ನಾಗರಿಕ ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.















