ತೀರ್ಥಹಳ್ಳಿಯಲ್ಲಿ ಶೆಡ್​ ಮೇಲೆ ಗುಡ್ಡ ಕುಸಿತ: 3 ವರ್ಷ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವು

Coastal Bulletin
ತೀರ್ಥಹಳ್ಳಿಯಲ್ಲಿ ಶೆಡ್​ ಮೇಲೆ ಗುಡ್ಡ ಕುಸಿತ: 3 ವರ್ಷ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವು

ಶಿವಮೊಗ್ಗ: ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡಕುಸಿದು 3 ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ತೀರ್ಥಹಳ್ಳಿಯ ಸಿಬಿನಕೆರೆ ಸಮೀಪದ ಗಾಂಧಿನಗರದಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ.

ಮೃತರನ್ನು ಕೊಪ್ಪಳ ಜಿಲ್ಲೆಯ ಮಲ್ಲಿಕಾರ್ಜುನ (35), ಪತ್ಬಿ ನಾಗವೇಣಿ(28) ಹಾಗೂ 3 ವರ್ಷದ ಮಗು ಸಂತೋಷ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಶೆಡ್​ನಲ್ಲಿ ವಾಸವಾಗಿದ್ದವರ ಮೇಲೆ ಗುಡ್ಡ ಕುಸಿತವಾಗಿದೆ. ಇವರನ್ನು ರಕ್ಷಿಸಲು ಪ್ರಯತ್ನಿಸಿದ ಓರ್ವ ಗಾಯಗೊಂಡಿದ್ದು, ಆತನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಸ್ಥಳಕ್ಕೆ ಅಗ್ನಿ ಶಾಮಕ ದಳ ಹಾಗೂ ತೀರ್ಥಹಳ್ಳಿ ಪೊಲೀಸರು ಆಗಮಿಸಿ, ಕಾರ್ಯಾಚರಣೆ ನಡೆಸಿದ್ದಾರೆ. ಶೆಡ್ನಲ್ಲಿ ಬೇರೆವರು ಇದ್ದಾರೆಯೇ ಎಂದು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಈ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಗುಡ್ಡ ಕುಸಿತ ಉಂಟಾಗಿದೆ. ಶೆಡ್ನಲ್ಲಿ ಮಲಗಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಅವಶೇಷಗಳ ಅಡಿಯಿಂದ ಶವಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಶಾಸಕರ ಭೇಟಿ: ಮೂರು ಜನ ಗಂಗಾವತಿ ತಾಲೂಕಿನ ಕಾರ್ಮಿಕರು ಮಣ್ಣಿನಲ್ಲಿ ಹೂತು ಹೋಗಿದ್ದಾರೆ. ಇನ್ನು ಬೇರೆ ಸಿಲುಕಿಕೊಂಡವರ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ತೀರ್ಥಹಳ್ಳಿಯ ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

ಘಟನಾ ಸ್ಥಳದಿಂದಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜೊತೆ ಮಾತನಾಡಿ, ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸಲು ಕೋರಿದ್ದೇನೆ. ಈಗಾಗಲೇ ಗುಡ್ಡದ ಪಕ್ಕದಲ್ಲಿ ವಾಸಿಸುತ್ತಿದ್ದ ಸುಮಾರು 8 ಕುಟುಂಬಗಳಿಗೆ ಸ್ಥಳಾಂತರಿಸಿದ್ದೇವೆ. ಒಬ್ಬ ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ

ಸ್ಥಳಾಂತರಿಸಲಾಗಿದೆ. ಅಪಾಯಕಾರಿ ಸ್ಥಳದಿಂದ ಇನ್ನೂ ಕೆಲವರನ್ನು ಸ್ಥಳಾಂತರಿಸಲು ಯೋಚಿಸಿದ್ದೇವೆ ಎಂದರು.

ಈ ರೀತಿಯ ಘಟನೆಗಳು ಆಗಬಾರದು. ಆದರೆ ಪ್ರಕೃತಿಯ ಬಗ್ಗೆ ಹೇಳಲು ಆಗಲ್ಲ. ಅಲ್ಲಿ ಬರ ಇರುವ ದೂರದ ಗಂಗಾವತಿ, ಹೊಳಲ್ಕೆರೆ ಭಾಗದಿಂದ ಕೂಲಿ ಕೆಲಸಕ್ಕೆ ಇಲ್ಲಿಗೆ ಬಂದಿದ್ದಾರೆ. ನಾನು ಅನೇಕ ಬಾರಿ ಇಲ್ಲಿಗೆ ಬಂದಾಗ ಗುಡ್ಡದ ಕೆಳಗೆ ಮನೆ ಕಟ್ಟಬೇಡಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.

ಈ ಕುರಿತು ಸ್ಥಳೀಯರಾದ ರತ್ನಾಕರ್ ಅವರು ಮಾತನಾಡಿ, ಮಳೆಯಿಂದ ಗುಡ್ಡ ಕುಸಿತವಾಗಿದ್ದು, ಶೆಡ್ನಲ್ಲಿದ್ದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿಯ ಗಾಂಧಿನಗರ ಬಡಾವಣೆಯ ರಮೇಶ್ ಎಂಬ ಗುತ್ತಿಗೆದಾರರ ಬಳಿ ಕೊಪ್ಪಳ ಹಾಗೂ ದಾವಣಗೆರೆಯ ಕೆಲ ಕುಟುಂಬದವರು ಹಲವು ವರ್ಷಗಳಿಂದ ಮಣ್ಣಿನ ಕೆಲಸ ಮಾಡಲು ಬಂದಿದ್ದರು‌. ಮಳೆಯಿಂದ ಗುಡ್ಡ ಕುಸಿತವಾಗಿದೆ. ಇದರಲ್ಲಿ ಕೊಪ್ಪಳದ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ ಎಂದರು.

ಇದರಲ್ಲಿ ಹನುಮಂತ ಎಂಬಾತ ಮಣ್ಣಿನಡಿ ಸಿಲುಕಿ ಕೊಂಡಿದ್ದನು. ಈತನನ್ನು ಎರಡು ಗಂಟೆ ಕಾರ್ಯಾಚರಣೆ ನಡೆಸಿ, ರಕ್ಷಿಸಿ ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನಿಗೆ ಬಿಪಿ ಕಡಿಮೆಯಾಗಿರುವ ಕಾರಣಕ್ಕೆ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ. ಗುಡ್ಡದ ಮೇಲೆ ಇರುವ ರೆಹಮಾತುಲ್ಲ ಎಂಬುವರ ಮನೆಯ ಕಾಂಪೌಂಡ್ ಸಹ ಕುಸಿತವಾಗಿದೆ. ಅವರ ಮನೆ ಸಹ ಕುಸಿತವಾಗುವ ಭಯದಲ್ಲಿದ್ದಾರೆ. ಮೃತ ಕುಟುಂಬದವರಿಗೆ ಸಿಎಂ ಡಿ.ಕೆ.ಶಿವಕುಮಾರ್ ಪರಿಹಾರ ನೀಡಬೇಕೆಂದು ಸ್ಥಳೀಯ ರತ್ನಾಕರ ಆಗ್ರಹಿಸಿದ್ದಾರೆ.

Leave a Comment