ಕೇಂದ್ರದಿಂದ ರಾಜ್ಯಗಳಿಗೆ 1.09 ಲಕ್ಷ ಕೋಟಿ ಹೆಚ್ಚುವರಿ ತೆರಿಗೆ ಹಂಚಿಕೆ – ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

Coastal Bulletin
ಕೇಂದ್ರದಿಂದ ರಾಜ್ಯಗಳಿಗೆ 1.09 ಲಕ್ಷ ಕೋಟಿ ಹೆಚ್ಚುವರಿ ತೆರಿಗೆ ಹಂಚಿಕೆ – ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

ನವದೆಹಲಿ: ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ 1.09 ಲಕ್ಷ ಕೋಟಿ ರೂಪಾಯಿಗಳ ಹೆಚ್ಚುವರಿ ತೆರಿಗೆ ಹಂಚಿಕೆ (Tax Devolution) ಮಾಡಿದೆ ಎಂದು ಹಣಕಾಸು ಸಚಿವಾಲಯ ಶನಿವಾರ ತಿಳಿಸಿದೆ.

ಹೆಚ್ಚುವರಿ ಕಂತು ರಾಜ್ಯಗಳಿಗೆ ಬಂಡವಾಳ ಮತ್ತು ಅಭಿವೃದ್ಧಿ ವೆಚ್ಚವನ್ನು ವೇಗಗೊಳಿಸಲು ಹೆಚ್ಚಿನ ಅವಕಾಶ ನೀಡುವ ಉದ್ದೇಶವನ್ನು ಹೊಂದಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಯಾವ ರಾಜ್ಯಕ್ಕೆ ಎಷ್ಟು?

ತೆರಿಗೆ ಹಂಚಿಕೆಯಲ್ಲಿ ಉತ್ತರ ಪ್ರದೇಶವು ಅತಿ ಹೆಚ್ಚು ಪಾಲನ್ನು ಪಡೆದಿದೆ. ಈ ರಾಜ್ಯಕ್ಕೆ 19,208 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಬಿಹಾರಕ್ಕೆ 10,845 ಕೋಟಿ ರೂ. ಮತ್ತು ಮಧ್ಯಪ್ರದೇಶಕ್ಕೆ 8,010 ಕೋಟಿ ರೂ. ರಿಲೀಸ್‌ ಮಾಡಲಾಗಿದೆ. ಪಶ್ಚಿಮ ಬಂಗಾಳಕ್ಕೆ 7,866 ಕೋಟಿ ರೂ. ಮತ್ತು ಮಹಾರಾಷ್ಟ್ರಕ್ಕೆ 7,022 ಕೋಟಿ ರೂ. ನೀಡಲಾಗಿದೆ.

ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

ರಾಜಸ್ಥಾನಗೆ 6,460 ಕೋಟಿ ರೂ.), ಒಡಿಶಾಗೆ 4,819 ಕೋಟಿ ರೂ., ಆಂಧ್ರಪ್ರದೇಶಕ್ಕೆ 4,597 ಕೋಟಿ

ರೂ., ಕರ್ನಾಟಕಕ್ಕೆ 4,504 ಕೋಟಿ ರೂ. ಮತ್ತು ತಮಿಳುನಾಡಿಗೆ 4,466 ಕೋಟಿ ರೂ. ರಿಲೀಸ್‌ ಆಗಿದೆ.

ಸಣ್ಣ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಹ ತಮ್ಮ ಪಾಲನ್ನು ಪಡೆದಿವೆ. ಸಿಕ್ಕಿಂ 365 ಕೋಟಿ ರೂ., ಗೋವಾ 398 ಕೋಟಿ ರೂ. ಮತ್ತು ನಾಗಾಲ್ಯಾಂಡ್ 524 ಕೋಟಿ ರೂ. ಪಡೆದಿವೆ. ಇದು ಪಟ್ಟಿಯಲ್ಲಿ ಅತ್ಯಂತ ಕಡಿಮೆ ಹಂಚಿಕೆಯಾಗಿದೆ.

ತೆರಿಗೆ ವಿಕೇಂದ್ರೀಕರಣ ಎಂದರೆ ಹಣಕಾಸು ಆಯೋಗವು ಶಿಫಾರಸು ಮಾಡಿದ ಸೂತ್ರದ ಆಧಾರದ ಮೇಲೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುವ ಕೇಂದ್ರ ತೆರಿಗೆಗಳ ಪಾಲು. ರಾಜ್ಯಗಳು ತಮ್ಮ ಬಜೆಟ್‌ಗಳಿಗೆ, ವಿಶೇಷವಾಗಿ ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳ ಮೇಲಿನ ಬಂಡವಾಳ ವೆಚ್ಚಕ್ಕೆ ಹಣಕಾಸು ಒದಗಿಸಲು ಈ ಪಾಲಿನ ಮೇಲೆ ಹೆಚ್ಚು ಅವಲಂಬಿತವಾಗಿವೆ.

Leave a Comment