ಬಂಟ್ವಾಳ:ಸೇವಾ ನಿವೃತ್ತಿ ಹೊಂದಿದ ಪ್ರಾಂಶುಪಾಲ ವಿ. ಸುಬ್ರಹ್ಮಣ್ಯ ಭಟ್ ಅವರಿಗೆ ಆಡಳಿತ ಮಂಡಳಿಯ ವತಿಯಿಂದ ಅಭಿನಂದನಾ ಗೌರವ ಹಾಗೂ ಭಾವಪೂರ್ಣ ಶುಭ ವಿದಾಯ ಕಾರ್ಯಕ್ರಮ ಜು.31ರಂದು ತುಂಬೆ ಪದವಿ ಪೂರ್ವ ಕಾಲೇಜಿನ ಶಬನಾ ಸಭಾಂಗಣದಲ್ಲಿ ಅರ್ಥ ಪೂರ್ಣವಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ (ರಿ.) ಇದರ ಅಧ್ಯಕ್ಷರಾದ ಅಬ್ದುಲ್ ಸಲಾಂ ವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಸುಬ್ರಮಣ್ಯ ಭಟ್ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಸುಮಾರು 34 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಹಾಗೂ ಕಳೆದ ಎರಡು ವರ್ಷಗಳಿಂದ ಪ್ರಾಂಶುಪಾಲರಾಗಿ ಸಂಸ್ಥೆಗೆ ಸಲ್ಲಿಸಿದ ಅವರ ನಿಸ್ವಾರ್ಥ ಸೇವೆ, ಶಿಸ್ತು, ಪ್ರಾಮಾಣಿಕತೆ ಮತ್ತು ಶೈಕ್ಷಣಿಕ ನಾಯಕತ್ವವನ್ನು ಶ್ಲಾಘಿಸಿದರು. ಸಂಸ್ಥೆಯ ಶೈಕ್ಷಣಿಕ ಪ್ರಗತಿ ಹಾಗೂ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಅವರ ಕೊಡುಗೆ ಸದಾ ಸ್ಮರಣೀಯವಾಗಿರಲಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತುಂಬೆ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನಿಸಾರ್ ಅಹ್ಮದ್ ವಳವೂರು ಮಾತನಾಡಿ, ಸುಬ್ರಮಣ್ಯ ಭಟ್ ಅವರು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಅವರ ಕರ್ತವ್ಯನಿಷ್ಠೆ, ಸರಳತೆ ಮತ್ತು ವಿದ್ಯಾರ್ಥಿ ಸ್ನೇಹಿ ವ್ಯಕ್ತಿತ್ವ ಎಲ್ಲರಿಗೂ ಆದರ್ಶವಾಗಿದೆ
ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್‌ನ ಟ್ರಸ್ಟಿ ಬಿ.ಎಂ. ಅಶ್ರಫ್, ತುಂಬೆ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಗಂಗಾಧರ ಆಳ್ವ, ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸೌಮ್ಯ, ತುಂಬೆ ಐಟಿಐ ಪ್ರಾಂಶುಪಾಲ ನವೀನ್ ಉಪಸ್ಥಿತರಿದ್ದರು. ತುಂಬೆ ಪದವಿ ಪೂರ್ವ ಕಾಲೇಜಿನ ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಶರತ್ ಆಳ್ವ ಚನಿಲ ಕಾರ್ಯಕ್ರಮ ನಿರೂಪಿಸಿದರು. ತುಂಬೆ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿದ್ಯಾ ಕೆ. ವಂದಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಎಲ್ಲಾ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು, ಸೇವಾ ನಿವೃತ್ತಿ ಹೊಂದಿದ ಶ್ರೀ ವಿ. ಸುಬ್ರಹ್ಮಣ್ಯ ಭಟ್ ಅವರಿಗೆ ಗೌರವ ನಮನ ಸಲ್ಲಿಸಿ, ಅವರ ನಿವೃತ್ತಿ ಜೀವನವು ಸುಖ, ಶಾಂತಿ, ಆರೋಗ್ಯ, ನೆಮ್ಮದಿ ಹಾಗೂ ಸಂತೃಪ್ತಿಯಿಂದ ಕೂಡಿರಲೆಂದು ಹಾರೈಸಿದರು. ಕಾರ್ಯಕ್ರಮವು ಆತ್ಮೀಯತೆ, ಕೃತಜ್ಞತೆ ಹಾಗೂ ಭಾವಪೂರ್ಣ ವಾತಾವರಣದಲ್ಲಿ ನೆರವೇರಿತು
















