Coastal Bulletin

ದೆಹಲಿ: ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಬೋಸ್ ಅವರ ಹೊಲೊಗ್ರಾಮ್ ಛಾಯಾ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದಂದು ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶಕ್ಕೆ ಅವರು ನೀಡಿದ ಮಹತ್ವದ ಕೊಡುಗೆಯ ಬಗ್ಗೆ ಪ್ರತಿಯೊಬ್ಬ ಭಾರತೀಯರು ಹೆಮ್ಮೆಪಡುತ್ತಾರೆ ಎಂದು ಭಾನುವಾರ ಹೇಳಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು 'ಪರಾಕ್ರಮ್ ದಿವಸ್' ಪ್ರಯುಕ್ತ ಜನತೆಗೆ ಶುಭಾಶಯ ಕೋರಿದ್ದಾರೆ. ಆಜಾದ್ ಹಿಂದ್ ಫೌಜ್ ಸಂಸ್ಥಾಪಕ ಬೋಸ್ ಅವರ ಜನ್ಮದಿನವನ್ನು 'ಪರಾಕ್ರಮ್ ದಿವಸ್' ಎಂದು ಆಚರಿಸಲಾಗುವುದು ಎಂದು ಈಗಾಗಲೇ ಸರ್ಕಾರ ಘೋಷಿಸಿದೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದ ಮೊದಲು, ದೇಶದ ಈ ಮಹಾನ್ ಪುತ್ರನಿಗೆ ಕೃತಜ್ಞತೆಯ ಸಂಕೇತವಾಗಿ ಇಂಡಿಯಾ ಗೇಟ್‌ನಲ್ಲಿ ಅವರ ಗ್ರಾನೈಟ್ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದರು. ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯ ಜ್ವಾಲೆಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಉರಿಯುತ್ತಿರುವ ಜ್ವಾಲೆಯೊಂದಿಗೆ ವಿಲೀನಗೊಳಿಸಿ ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿರುವ ಸಮಯದಲ್ಲಿ ಪ್ರಧಾನಿಯವರ ಈ ಘೋಷಣೆ ಬಂದಿರುವುದು ಇಲ್ಲಿ ಉಲ್ಲೇಖನೀಯ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, “ದೇಶವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125

ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಈ ಸಮಯದಲ್ಲಿ, ಇಂಡಿಯಾ ಗೇಟ್‌ನಲ್ಲಿ ಅವರ ಭವ್ಯವಾದ ಗ್ರಾನೈಟ್ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಇದು ಅವರಿಗೆ ದೇಶದ ಕೃತಜ್ಞತೆಯ ಸಂಕೇತವಾಗಲಿದೆ" ಎಂದಿದ್ದರು. ನೇತಾಜಿ ಅವರ ಗ್ರಾನೈಟ್ ಪ್ರತಿಮೆ ಸಿದ್ಧವಾಗುವವರೆಗೆ ಆ ಸ್ಥಳದಲ್ಲಿ ಅವರ ಹೊಲೊಗ್ರಾಮ್ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಪ್ರಧಾನಿ ಹೇಳಿದ್ದರು.ನೇತಾಜಿಯವರ ಗ್ರಾನೈಟ್ ಪ್ರತಿಮೆಯು 28 ಅಡಿ ಎತ್ತರ ಮತ್ತು ಆರು ಅಡಿ ಅಗಲವನ್ನು ಹೊಂದಿದ್ದು, 1968 ರಲ್ಲಿ ತೆಗೆದುಹಾಕಲಾದ ಕಿಂಗ್ ಜಾರ್ಜ್ V ರ ಪ್ರತಿಮೆ ಇದ್ದ ಪೆವಿಲಿಯನ್‌ನಲ್ಲಿ ಸ್ಥಾಪಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. 

Leave a Comment