ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಕೋಲ್ಕತ್ತಾದಲ್ಲಿ ನಡೆದ ಭೀಕರ ಅಗ್ನಿ (Fire) ಅವಘಡದಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾಗಿದ್ದ ಸುಮಾರು 4,000 ಇವಿಎಂ (EVM) ಮತಯಂತ್ರಗಳು ಸುಟ್ಟು ಭಸ್ಮವಾಗಿವೆ.
ಕೋಲ್ಕತ್ತಾದ ಅಲಿಪೋರ್‌ನಲ್ಲಿರುವ ದಕ್ಷಿಣ 24 ಪರಗಣ ಜಿಲ್ಲಾ ಪರಿಷತ್‌ನ 10 ಮಹಡಿಗಳ ಆಡಳಿತಾತ್ಮಕ ಸರ್ಕಾರಿ ಕಟ್ಟಡದಲ್ಲಿ ಜೂನ್ 10ರ ಬುಧವಾರ ಬೆಳಗ್ಗೆ ಸುಮಾರು 9:50ಕ್ಕೆ ಈ ಬೆಂಕಿ ಕಾಣಿಸಿಕೊಂಡಿತ್ತು.
ಈ ದುರ್ಘಟನೆಯಲ್ಲಿ ಕಟ್ಟಡದ 8 ಮತ್ತು 9ನೇ ಮಹಡಿಗಳಲ್ಲಿ ಇರಿಸಲಾಗಿದ್ದ ಸುಮಾರು 4,000 ಇವಿಎಂಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಈ ಇವಿಎಂ ಯಂತ್ರಗಳನ್ನು ಇತ್ತೀಚೆಗೆ ನಡೆದ ರಾಜ್ಯದ 10 ವಿಧಾನಸಭಾ ಕ್ಷೇತ್ರಗಳ
ಚುನಾವಣೆಯಲ್ಲಿ ಬಳಸಲಾಗಿತ್ತು. ಇವಿಎಂಗಳ ಜೊತೆಗೆ ಶಾಲಾ ಮಧ್ಯಾಹ್ನದ ಬಿಸಿಊಟದ ಯೋಜನೆಗೆ ಸಂಬಂಧಿಸಿದ ಕಡತಗಳು ಸೇರಿದಂತೆ ಹಲವು ಪ್ರಮುಖ ಸರ್ಕಾರಿ ದಾಖಲೆಗಳು ಸಹ ಬೆಂಕಿಗೆ ಆಹುತಿಯಾಗಿವೆ.
ರಾಜ್ಯದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಚಿವ ಕೌಶಿಕ್ ಚೌಧರಿ ಅವರು ಸ್ಥಳಕ್ಕೆ ಭೇಟಿ ನೀಡಿ, ಇದು ಸಾಮಾನ್ಯ ಅಗ್ನಿ ಅವಘಡದಂತೆ ಕಾಣಿಸುತ್ತಿಲ್ಲ ಎಂದು ಶಂಕಿಸಿದ್ದಾರೆ. ಘಟನೆಯ ನಿಖರ ಕಾರಣ ತಿಳಿಯಲು ನಾವು ವಿಧಿವಿಜ್ಞಾನ ವರದಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
















