ಅಯೋಧ್ಯಾ ರಾಮ ಮಂದಿರ ಉದ್ಘಾಟನೆಗೆ ಸಜ್ಜಾಗುತ್ತಿರುವ ಹೊತ್ತಲ್ಲೇ ಹೊಸ ರೀತಿಯ ವಿವಾದಗಳು ತಲೆ ಎತ್ತುತ್ತಿವೆ. ಕಾಂಗ್ರೆಸ್ ಸೇರಿದಂತೆ (I.N.D.I A) ಇಂಡಿಯಾ ಮೈತ್ರಿ ಕೂಟದ ಬಹುತೇಕ ಅಂಗ ಪಕ್ಷಗಳು ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಿಂದ ದೂರ ಸರಿದಿವೆ. ಇದು ಸಂಪೂರ್ಣ ರಾಜಕೀಯ ವಿಚಾರ. ಆದರೆ, ಧಾರ್ಮಿಕ ರಂಗದ ಕೆಲವರೂ ರಾಮ ಮಂದಿರ ಉದ್ಘಾಟನೆಗೆ ವಿರೋಧ ವ್ಯಕ್ತಪಡಿಸಿ ಸುದ್ದಿಯಲ್ಲಿದ್ದಾರೆ. ಈ ಬೆಳವಣಿಗೆ ಭಾರೀ ಕುತೂಹಲ ಕೆರಳಿಸಿದೆ. ದೇಶದ ಎರಡು ಪ್ರಮುಖ ಶಂಕರಾಚಾರ್ಯ ಸ್ಥಾಪಿತ ಮಠಾಧೀಶರು ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ವಿಧಿ ವಿಧಾನವನ್ನೇ ಪ್ರಶ್ನಿಸಿದ್ದಾರೆ. ದೇಶಾದ್ಯಂತ ರಾಮ ಮಂದಿರ ಉದ್ಘಾಟನೆಯ ಸಂಭ್ರಮ ಮನೆ ಮಾಡಿರುವ ಹೊತ್ತಲ್ಲೇ ಅಲ್ಲಲ್ಲಿ ಅಪಸ್ವರಗಳು ಕೇಳಿ ಬಂದಿವೆ.
ಭಾರತ ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪ್ರಮುಖ ಮಠಗಳನ್ನು ಶಂಕರಾಚಾರ್ಯರು ಸ್ಥಾಪಿಸಿದ್ಧಾರೆ. ಈ ಪೈಕಿ ಉತ್ತರಾಖಂಡ ರಾಜ್ಯದ ಬದರಿನಾಥದ ಜ್ಯೋತಿರ್ಮಠ ಹಾಗೂ ಪುರಿಯ ಗೋವರ್ಧನ ಪೀಠದ ಶ್ರೀಗಳು ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರು ಹಾಜರಾಗೋದಾಗಿ ಹೇಳಿದ್ದಾರೆ. ಆದರೆ, ಕರ್ನಾಟಕದ ಶೃಂಗೇರಿ ಶಾರದಾ ಪೀಠ ಹಾಗೂ ದ್ವಾರಕಾ ಶಾರದಾ ಪೀಠದ ಶಂಕರಾಚಾರಯರು ಈ ವಿವಾದದಿಂದ ದೂರ ಸರಿದಿದ್ದಾರೆ. ತಮ್ಮ ಹೆಸರಲ್ಲಿ ಸುಳ್ಳು ಸುದ್ದಿ ಹರಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ಧಾರೆ.
ಬದರಿನಾಥ ಜ್ಯೋತಿರ್ಮಠದ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ಹಾಗೂ ಪುರಿಯ ಗೋವರ್ಧನ ಪೀಠದ ನಿಶ್ಚಲಾನಂದ ಸರಸ್ವತಿ ಸ್ವಾಮೀಜಿಗಳು ಮಾತ್ರ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದ ವಿಧಿ ವಿಧಾನಗಳನ್ನು ಪ್ರಶ್ನಿಸಿದ್ದಾರೆ. ತಮ್ಮ ವಿರೋಧಕ್ಕೆ ಕಾರಣವೇನು ಅನ್ನೋದನ್ನೂ ಇಬ್ಬರೂ ಶ್ರೀಗಳು ವಿವರಿಸಿದ್ಧಾರೆ.
ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಮುನ್ನವೇ ಗರ್ಭ ಗೃಹದಲ್ಲಿ ರಾಮ ದೇವರ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಇದು ನಿಯಮಗಳಿಗೆ ವಿರುದ್ಧವಾದದ್ದು ಎಂದು ಎರಡೂ ಮಠಗಳು ಹೇಳಿದ್ದು, ತಾವು ಈ ಕಾರ್ಯಕ್ರಮಕ್ಕೆ ಗೈರು ಹಾಜರಾಗಲು ಇದೇ ಕಾರಣ ಎಂದಿದ್ಧಾರೆ. ಧರ್ಮ ಪಾಲನೆ ಆಗುವಂತೆ ನೋಡಿಕೊಳ್ಳೋದೇ ಶಂಕರಾಚಾರ್ಯರ ಕರ್ತವ್ಯ. ಆದರೆ, ಮಂದಿರ ಉದ್ಘಾಟನೆ ವೇಳೆ ಸನಾತನ ಧರ್ಮದ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಹೀಗಾಗಿ ನಾವು ಮೌನವಾಗಿ ಇರೋದಕ್ಕೆ ಸಾಧ್ಯ ಆಗ್ತಿಲ್ಲ ಎಂದಿರುವ ಸ್ವಾಮೀಜಿಗಳು, ತಾವು ಮೋದಿ ವಿರೋಧಿ ಅಲ್ಲ ಅನ್ನೋದನ್ನು ಸ್ಪಷ್ಟಪಡಿಸಿದ್ಧಾರೆ. ಜೊತೆಯಲ್ಲೇ ಧರ್ಮ ಶಾಸ್ತ್ರದ ವಿರುದ್ಧವಾಗಿಯೂ ತಾವು ನಡೆಯೋದಿಲ್ಲ ಎಂದು ಹೇಳಿದ್ದಾರೆ. ಇನ್ನು ಪ್ರಧಾನಿ ಮೋದಿ ಅವರು ಗರ್ಭ ಗೃಹ ಪ್ರವೇಶ ಮಾಡಿ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡೋದು ರಾಜಕೀಯ ದೃಷ್ಟಿಕೋನ ಹೊಂದಿದೆ ಅನ್ನೋದು ಎರಡೂ ಮಠಗಳ ನಿಲುವು.
ದೇಶದ ಎರಡು ಪ್ರಮುಖ ಶಂಕರ ಮಠಗಳು ಧಾರ್ಮಿಕ ಕಾರಣಗಳಿಗಾಗಿ ರಾಮ ಮಂದಿರ ಉದ್ಘಾಟನಾ ಕಾರ್ಯದಿಂದ ದೂರ ಉಳಿಯಲು ನಿರ್ಧರಿಸಿವೆ. ಇದಕ್ಕೂ ಮುನ್ನವೇ ಕಾಂಗ್ರೆಸ್ ಪಕ್ಷ ರಾಮ ಮಂದಿರ ಉದ್ಘಾಟನಾ ಕಾರ್ಯದಿಂದ ದೂರ ಉಳಿಯಲು ನಿರ್ಧರಿಸಿತ್ತು. ತಮ್ಮ ಈ ನಿರ್ಧಾರಕ್ಕೆ ಪೂರಕವಾದ ರಾಜಕೀಯ ಕಾರಣಗಳನ್ನೂ ಕಾಂಗ್ರೆಸ್ ಪಕ್ಷ ಕೊಟ್ಟಿತ್ತು. ರಾಮ ಮಂದಿರ ಉದ್ಘಾಟನೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಚುನಾವಣಾ ಕಾರ್ಯಕ್ರಮ ಎಂದು ಬಣ್ಣಿಸಿದ್ದ ಕಾಂಗ್ರೆಸ್,
ಧರ್ಮಾಧಾರಿತ ಕಾರ್ಯಕ್ರಮಗಳಿಂದ ದೂರ ಉಳಿಯೋದಾಗಿ ಹೇಳಿದೆ. ಜೊತೆಯಲ್ಲೇ ಅಪೂರ್ಣ ಮಂದಿರವನ್ನು ಉದ್ಘಾಟನೆ ಮಾಡಲಾಗುತ್ತಿದೆ ಎಂದೂ ಕಾಂಗ್ರೆಸ್ ಪಕ್ಷ ಆಕ್ಷೇಪ ತೆಗೆದಿತ್ತು. ಚುನಾವಣಾ ಲಾಭದ ದೃಷ್ಟಿಯಿಂದ ತರಾತುರಿಯಲ್ಲಿ ಮಂದಿರ ಉದ್ಘಾಟನೆ ನಡೆಯುತ್ತಿದೆ ಅನ್ನೋದು ಕಾಂಗ್ರೆಸ್ ವಾದ. ಜೊತೆಯಲ್ಲೇ 2019ರಲ್ಲಿ ರಾಮ ಮಂದಿರ ನಿರ್ಮಾಣದ ಪರವಾಗಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ನಿಲುವನ್ನು ಗೌರವಿಸೋದಾಗಿ ಹೇಳಿರುವ ಕಾಂಗ್ರೆಸ್, ಕೋಟ್ಯಂತರ ರಾಮ ಭಕ್ತರ ಭಾವನೆಗಳಿಗೂ ಬೆಲೆ ಕೊಡ್ತೇವೆ ಎಂದಿದೆ.
ಇಂಡಿಯಾ ಮೈತ್ರಿ ಕೂಟದ ಬಹುತೇಕ ಅಂಗ ಪಕ್ಷಗಳು ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಿಂದ ದೂರ ಉಳಿಯೋದು ನಿಶ್ಚಿತ. ಕಾಂಗ್ರೆಸ್, ಟಿಎಂಸಿ ಸೇರಿದಂತೆ ಹಲವು ಪಕ್ಷಗಳು ಈಗಾಗಲೇ ಬಹಿರಂಗ ಘೋಷಣೆಯನ್ನೂ ಮಾಡಿವೆ. ಇನ್ನು ಈ ಪಕ್ಷಗಳ ಕೆಲವು ಸದಸ್ಯರಿಗೆ ರಾಮ ಮಂದಿರ ಉದ್ಘಾಟನೆಯಲ್ಲಿ ಭಾಗಿಯಾಗುವ ಆಸಕ್ತಿ ಇದ್ದರೂ ಕೂಡಾ ಪಕ್ಷದ ಹೈಕಮಾಂಡ್ ನಿಲುವಿನಿಂದಾಗಿ ಒಳಗೊಳಗೆ ಕೈ ಕೈ ಹಿಸುಕಿಕೊಳ್ಳುವಂಥಾ ಪರಿಸ್ಥಿತಿ ಇದೆ!
ಹಾಗೆ ನೋಡಿದರೆ ಇಂಡಿಯಾ ಮೈತ್ರಿ ಕೂಟದ ಅಂಗ ಪಕ್ಷ ಡಿಎಂಕೆ ನಾಯಕರು, ಬಹಿರಂಗವಾಗಿಯೇ ಹಿಂದೂ ವಿರೋಧಿ ಹೇಳಿಕೆ ನೀಡುತ್ತಾರೆ. ಇತ್ತೀಚೆಗೆ ಡಿಎಂಕೆ ನಾಯಕ ಉದಯ್‌ನಿಧಿ ಮಾರನ್ ನೀಡಿದ ಹೇಳಿಕೆಗಳಿಂದ ಮೊದಲುಗೊಂಡು ಹಲವು ನಾಯಕರು ವಿವಾದ ಸೃಷ್ಟಿಸಿದ್ದಾರೆ. ಆದರೆ, ತಮಿಳುನಾಡಿನಲ್ಲಿ ರಾಜಕೀಯವಾಗಿ ಡಿಎಂಕೆಗೆ ಇದರಿಂದ ಯಾವುದೇ ಹಾನಿ ಆಗದೇ ಇರಬಹುದು.
ಇತ್ತ ಪಶ್ಚಿಮ ಬಂಗಾಳದಲ್ಲೂ ಇದೇ ಪರಿಸ್ಥಿತಿ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರು ಜೈ ಶ್ರೀರಾಮ್ ಘೋಷಣೆ ಕೂಗಿ ಪ್ರಚಾರ ಕಣದಲ್ಲಿ ಅಬ್ಬರಿಸಿದರೂ ಇದರಿಂದ ಟಿಎಂಸಿಗೆ ಯಾವುದೇ ಹಾನಿ ಆಗಲಿಲ್ಲ. ಹೀಗಾಗಿ, ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿ ಆಗಲ್ಲ ಅನ್ನೋ ಟಿಎಂಸಿ ನಿಲುವಿನಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ.
ಆದರೆ, ಕಾಂಗ್ರೆಸ್ ಪಕ್ಷ ಡಿಎಂಕೆ ಹಾಗೂ ಟಿಎಂಸಿ ರೀತಿ ಪ್ರಾದೇಶಿಕ ಪಕ್ಷವಲ್ಲ. ರಾಷ್ಟ್ರ ಮಟ್ಟದಲ್ಲಿ ವಿವಿಧೆಡೆ ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಮತಗಳು ಕೈಕೊಡುವ ಭೀತಿಯಂತೂ ಇದ್ದೇ ಇದೆ. ಅದರಲ್ಲೂ ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಾಂಗ್ರೆಸ್‌ನ ನಿಲುವು ಜನರ ಭಾವನೆಗಳಿಗೆ ಧಕ್ಕೆ ತರಬಹುದೇ ಎಂಬ ವಿಶ್ಲೇಷಣೆಗಳೂ ಇವೆ.ಕಾಂಗ್ರೆಸ್ ಮೊದಲಿನಿಂದಲೂ ಹಿಂದೂ ವಿರೋಧಿ ನೀತಿಯನ್ನೇ ಅನುಸರಿಸುತ್ತಿದೆ ಎಂದು ಬಿಜೆಪಿ ಅಭಿಪ್ರಾಯ ಪಟ್ಟಿದೆ.














