ದೇಶದ ಅತೀ ದೊಡ್ಡ ಸಮುದ್ರ ಸೇತುವೆ ಇಂದು ಪ್ರಧಾನಿ ಮೋದಿಯಿಂದ ಉದ್ಘಾಟನೆ.

Coastal Bulletin
ದೇಶದ ಅತೀ ದೊಡ್ಡ ಸಮುದ್ರ ಸೇತುವೆ ಇಂದು ಪ್ರಧಾನಿ ಮೋದಿಯಿಂದ ಉದ್ಘಾಟನೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು 'ಅಟಲ್ ಸೇತು' ಅಥವಾ ಮುಂಬೈ ಟ್ರಾನ್ಸ್ ಹಾರ್ಬರ್ ಸೀಲಿಂಕ್ (ಎಂಟಿಎಚ್‌ಎಲ್‌) ಅನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ಈ ಮೂಲಕ ಶುಕ್ರವಾರದಿಂದ ಸಮುದ್ರ ಸೇತುವೆ ಸಂಚಾರಕ್ಕೆ ತೆರೆದುಕೊಳ್ಳಲಿದೆ.

ಮುಂಬೈನ ಸೆವ್ರಿ ಮತ್ತು ರಾಯಗಡ ಜಿಲ್ಲೆಯ ನ್ಹಾವಾ ಶೇವಾ ಪ್ರದೇಶದ ನಡುವಿನ ಈ 22 ಕಿಮೀ ಉದ್ದದ ಆರು ಲೇನ್ ಸೇತುವೆಯು ಈ ಎರಡು ಪ್ರದೇಶಗಳು ನಡುವಿನ ಪ್ರಯಾಣದ ಅವಧಿಯನ್ನು ಈಗಿರುವ ಎರಡು ಗಂಟೆಗಳಿಂದ ಸುಮಾರು 15-20 ನಿಮಿಷಗಳಿಗೆ ಇಳಿಸಲಿದೆ.

ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥವಾಗಿ ಈ ಸೇತುವೆಗೆ ಅಟಲ್ ಸೇತು ಎಂದೂ ಹೆಸರಿಡಲಾಗಿದೆ.


ಎಂಟಿಎಚ್‌ಎಲ್‌ 6 ಪಥದ ಸಂಪರ್ಕ ಸೇತುವೆಯಾಗಿದೆ. ಇದು 16.5 ಕಿಮೀ ಉದ್ದದ ಸಮುದ್ದ ಮೇಲಿನ ಸೇತುವೆ ಹಾಗೂ 5.5 ಕಿಮೀ ಉದ್ದದ ಭೂಭಾಗದ ರಸ್ತೆಯನ್ನು ಒಳಗೊಂಡಿದೆ.ವರದಿಗಳ ಪ್ರಕಾರ ಈ ಸಮುದ್ರ ಸೇತುವೆಯನ್ನು ನಿರ್ಮಿಸಲು ಸುಮಾರು 1,77,903 ಮೆಟ್ರಿಕ್ ಟನ್ ಉಕ್ಕು ಮತ್ತು 5,04,253 ಮೆಟ್ರಿಕ್ ಟನ್ ಸಿಮೆಂಟ್ ಬಳಸಲಾಗಿದೆ.

ಎಂಟಿಎಚ್‌ಎಲ್‌ ಅನ್ನು ಅಂದಾಜು 18,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಪೂರ್ಣಗೊಂಡ ನಂತರ ಪ್ರತಿದಿನ ಈ ಸೇತುವೆ ಮೂಲಕ ಸುಮಾರು 70,000 ವಾಹನಗಳು ಸಾಗುವ ನಿರೀಕ್ಷೆ ಇದೆ. ಇದು 100 ವರ್ಷಗಳ ಜೀವಿತಾವಧಿಯನ್ನು ಹೊಂದಿದೆ.ಇದರಲ್ಲಿ ವಾಹನ ಚಾಲಕರಿಗೆ ಗರಿಷ್ಠ 100 ಕಿಲೋ ಮೀಟರ್‌ ವೇಗದಲ್ಲಿ ವಾಹನಗಳನ್ನು ಚಲಾಯಿಸಲು ಅನುಮತಿ ನೀಡಲಾಗಿದೆ. ಸಮುದ್ರ ಸೇತುವೆ ಪ್ರವೇಶಿಸಲು ಭಾರಿ ವಾಹನಗಳು, ಮೋಟಾರ್ ಸೈಕಲ್‌ಗಳು, ಆಟೋರಿಕ್ಷಾಗಳು ಮತ್ತು ಟ್ರ್ಯಾಕ್ಟರ್‌ಗಳಿಗೆ ಅನುಮತಿ ಇಲ್ಲ.ಮುಂಗಾರು ಸಮಯದಲ್ಲಿ

ಹೆಚ್ಚಿನ ವೇಗದ ಗಾಳಿಯನ್ನು ತಡೆದುಕೊಳ್ಳಲು ವಿಶೇಷವಾಗಿ ವಿನ್ಯಾಸಗೊಳಿಸಿದ ಬೆಳಕಿನ ಕಂಬಗಳನ್ನು ಇದು ಹೊಂದಿದೆ ಮತ್ತು ಗುಡುಗು ಮಿಂಚಿನಿಂದ ಉಂಟಾಗುವ ಸಂಭಾವ್ಯ ಹಾನಿಯಿಂದ ರಕ್ಷಿಸಲು ರಕ್ಷಣಾ ವ್ಯವಸ್ಥೆಯನ್ನು ಸಹ ಹೊಂದಿದೆ.

ಸೇವ್ರಿಯಲ್ಲಿ ಸೇತುವೆಯ ಭಾಗವು ಫ್ಲೆಮಿಂಗೊ ಸಂರಕ್ಷಿತ ಪ್ರದೇಶ ಮತ್ತು ಭಾಭಾ ಪರಮಾಣು ಸಂಶೋಧನಾ ಕೇಂದ್ರದ ಮೂಲಕ ಹಾದು ಹೋಗುವುದರಿಂದ 8.5 ಕಿಮೀ ಉದ್ದ ಶಬ್ದ ತಡೆಗೋಡೆ ಸ್ಥಾಪಿಸಲಾಗಿದೆ.

ಮುಂಬೈ ದ್ವೀಪ ನಗರವನ್ನು ಮುಖ್ಯ ಭೂಭಾಗಕ್ಕೆ ಸಂಪರ್ಕಿಸುವ ಕನೆಕ್ಟರ್ ಪರಿಕಲ್ಪನೆಯನ್ನು ಮೊದಲು 1962ರಲ್ಲಿ ‘ಮುಂಬೈ ಮೆಟ್ರೋಪಾಲಿಟನ್ ಪ್ರದೇಶಕ್ಕಾಗಿ ರಸ್ತೆ ವ್ಯವಸ್ಥೆಯ ಯೋಜನೆ' ಎಂಬ ಶೀರ್ಷಿಕೆಯ ಅಧ್ಯಯನದಲ್ಲಿ ಪ್ರಸ್ತಾಪಿಸಲಾಗಿತ್ತು. ಹಲವಾರು ಅಡೆತಡೆಗಳ ನಂತರ ಎಂಎಂಆರ್‌ಡಿಎ ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಯೋಜನೆಯು ಕಾರ್ಯರೂಪಕ್ಕೆ ಬಂತು.

ವರದಿಗಳ ಪ್ರಕಾರ, 2018ರಿಂದ ಒಟ್ಟು 5,403 ಕಾರ್ಮಿಕರು ಮತ್ತು ಎಂಜಿನಿಯರ್‌ಗಳು ಯೋಜನೆಯನ್ನು ಪೂರ್ಣಗೊಳಿಸಲು ಪ್ರತಿದಿನ ಕೆಲಸ ಮಾಡಿದ್ದಾರೆ. ಯೋಜನೆಯಲ್ಲಿ ಕೆಲಸ ಮಾಡುವಾಗ ಏಳು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.

ಎಂಟಿಎಂಎಲ್‌ ಅನ್ನು ಮುಂಬೈ ಪುಣೆ ಎಕ್ಸ್‌ಪ್ರೆಸ್‌ವೇಯೊಂದಿಗೆ ಸಂಪರ್ಕಿಸಲು ವಿನ್ಯಾಸಗೊಳಿಸಲಾಗಿದೆ, ಇದು ರಾಜ್ಯದ ಎರಡು ದೊಡ್ಡ ನಗರಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಸಮುದ್ರ ಮಟ್ಟದಿಂದ 15 ಮೀಟರ್ ಎತ್ತರದಲ್ಲಿ ನಿರ್ಮಿಸಲಾದ ಈ ಸಮುದ್ರ ಸೇತುವೆಯು ನಿರ್ಮಾಣ ಅತ್ಯಂತ ಕಷ್ಟಕರವಾಗಿತ್ತು. ಸಾಗರ ಭಾಗದಲ್ಲಿ ಎಂಜಿನಿಯರ್‌ಗಳು ಮತ್ತು ಕಾರ್ಮಿಕರು ಸಮುದ್ರದ ತಳದಲ್ಲಿ ಸುಮಾರು 47 ಮೀಟರ್‌ಗಳಷ್ಟು ಆಳ ಅಗೆಯಬೇಕಾಗಿತ್ತು.

Leave a Comment