ಕೋಝಿಕ್ಕೋಡ್(ಕೇರಳ): ಇಲ್ಲಿನ ಮೆಪ್ಪಯ್ಯೂರಿನ ಕೊಝುಕಲ್ಲೂರಿನ ಕೋರಮ್ಮನ್‌ಕಂಡಿ ಅಂತ್ರು ಎಂಬ ಲೋಕೋಪಕಾರಿ ಹೊಸ ವರ್ಷದ ಕಾಣಿಕೆಯಾಗಿ ಬಡ ಕುಟುಂಬವೊಂದಕ್ಕೆ ಭೂಮಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ನಾರಕ್ಕೋಡಿನ ಮೂರು ಮಕ್ಕಳಿರುವ ಕುಟುಂಬಕ್ಕೆ ಅಂತ್ರು ಅವರು ನಾಲ್ಕು ಸೆಂಟ್ಸ್ ಭೂಮಿಯನ್ನು ಹಸ್ತಾಂತರಿಸಿದರು. ಈ ಕುಟುಂಬ ತಮ್ಮ ಮೂಲ ಅಗತ್ಯಗಳನ್ನು ಪೂರೈಸಲೂ ಹೆಣಗಾಡುತ್ತಿದೆ. ಐತಿಹಾಸಿಕ ಕೊಳುಕಲ್ಲೂರು ಕೊಕರ್ಣಿ ದೇವಸ್ಥಾನದ ಸಮೀಪ ಇರುವ ಈ ಭೂಮಿ ಶೀಘ್ರದಲ್ಲೇ ಹೊಸ ಮನೆಗೆ ಅಡಿಪಾಯವಾಗಲಿದೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅಂತ್ರು, "ನಾವು ಈ ಲೋಕ ಬಿಡುವಾಗ ನಮ್ಮೊಂದಿಗೆ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ನಾವು ಜೀವಂತವಾಗಿರುವಾಗ ನಮ್ಮಲ್ಲಿರುವ ಸ್ವಲ್ಪ ಭಾಗವನ್ನು ಬಡವರಿಗೆ ದಾನ ಮಾಡಬೇಕು" ಎಂದು ಹೇಳಿದರು.
ಅಂತ್ರು ಅವರು ಇಂಥ ಸ್ಫೂರ್ತಿದಾಯಕ ಕಾರ್ಯ ಮಾಡಿರುವುದು ಇದೇ ಮೊದಲಲ್ಲ. 2022ರ ಜನವರಿಯಲ್ಲಿ ಇವರ ಮಗಳು ಶೆಹ್ನಾ ಶೆರಿನ್‌ನ ವಿವಾಹದ ಸಂದರ್ಭದಲ್ಲಿ, ನಾಲ್ಕು ಭೂರಹಿತ ಕುಟುಂಬಗಳಿಗೆ 21 ಸೆಂಟ್ಸ್ ಭೂಮಿ ದಾನ ಮಾಡಿದ್ದರು.
ಅದ್ದೂರಿ ವಿವಾಹಗಳು ಸಾಮಾಜಿಕ ಚರ್ಚೆಯಲ್ಲಿ ಪ್ರಾಬಲ್ಯ ಹೊಂದಿರುವ ಈ ಕಾಲಘಟ್ಟದಲ್ಲಿ, ಶೆಹ್ನಾ ಶೆರಿನ್ ಅವರು ವಿಭಿನ್ನ ಮಾರ್ಗವನ್ನು
ಆರಿಸಿಕೊಂಡಿದ್ದಾರೆ.
ವರ ಮೊಹಮ್ಮದ್ ಶಫಿ ಮತ್ತು ಅವರ ಕುಟುಂಬದ ಸಂಪೂರ್ಣ ಬೆಂಬಲದೊಂದಿಗೆ ಈ ವಿವಾಹವು ದುಂದುಗಾರಿಕೆಗಿಂತ ಸಾಮಾಜಿಕ ಬದ್ಧತೆಯ ಸಂಕೇತವಾಗಿತ್ತು.
ಕೋಝಿಕ್ಕೋಡ್ ಜಿಲ್ಲಾ ಪಂಚಾಯತ್ ಸದಸ್ಯ ಮುನೀರ್ ಎರಾವತ್, ಮೆಲಾಡಿ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಎನ್.ಎಂ.ದಾಮೋದರನ್, ಮೆಪ್ಪಯ್ಯೂರ್ ಗ್ರಾಮ ಪಂಚಾಯತ್ ಸದಸ್ಯ ಕೆ.ಟಿ.ವಿನೋದನ್ ಮತ್ತು ಪ್ರಮುಖ ದಾನ ಕಾರ್ಯಕರ್ತ ಕೆ.ಇಂಪಿಚ್ಯಾಲಿ ಅವರ ಸಮ್ಮುಖದಲ್ಲಿ ಭೂ ದಾಖಲೆಗಳನ್ನು ಔಪಚಾರಿಕವಾಗಿ ಹಸ್ತಾಂತರಿಸಲಾಯಿತು.
ಮೆಲಾಡಿ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಎನ್.ಎಂ.ದಾಮೋದರನ್ ಮಾತನಾಡಿ, ಸಮಾಜ ಅಂತ್ರು ಅವರ ವಿಶಾಲ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
"ಪ್ರತಿಭಟನೆಗಳು ಮತ್ತು ಸಮಾವೇಶಗಳನ್ನು ಮೀರಿ, ಸಮಾಜಕ್ಕೆ ನಿಜವಾಗಿಯೂ ಬೇಕಾಗಿರುವುದು ಇದೇ. ಆಶ್ರಯ, ಔಷಧ ಮತ್ತು ಮೂಲಭೂತ ಘನತೆಯ ಕೊರತೆಯಿರುವ ಸಾವಿರಾರು ಜನರಿದ್ದಾರೆ. ಸಂಪತ್ತನ್ನು ಹೊಂದಿರುವುದು ಮುಖ್ಯವಲ್ಲ, ಅದನ್ನು ಇತರರಿಗೆ ಬಳಸುವ ಇಚ್ಛೆ ಹೊಂದಿರುವುದು ಮುಖ್ಯ. ಅಂತ್ರು ಸೇವೆಯಲ್ಲಿ ಸಂತೋಷವನ್ನು ಕಂಡುಕೊಳ್ಳುತ್ತಾರೆ. ಮತ್ತು ಅದನ್ನೇ ಅನುಕರಿಸಬೇಕು" ಎಂದು ಅವರು ಹೇಳಿದರು.










