ರಾಷ್ಟ್ರಗೀತೆಯನ್ನು ಹಾಡಲ್ಲ – ಇರಾನ್‌ ಮಹಿಳಾ ತಂಡದಿಂದ ಮೈದಾನದಲ್ಲೇ ಇಸ್ಲಾಮಿಕ್‌ ಆಡಳಿತದ ವಿರುದ್ಧ ಪ್ರತಿಭಟನೆ

Coastal Bulletin
ರಾಷ್ಟ್ರಗೀತೆಯನ್ನು ಹಾಡಲ್ಲ – ಇರಾನ್‌ ಮಹಿಳಾ ತಂಡದಿಂದ ಮೈದಾನದಲ್ಲೇ ಇಸ್ಲಾಮಿಕ್‌ ಆಡಳಿತದ ವಿರುದ್ಧ ಪ್ರತಿಭಟನೆ

ಕ್ವೀನ್ಸ್‌ಲ್ಯಾಂಡ್‌: ಸರ್ವೋಚ್ಛ ನಾಯಕ ಖಮೇನಿ (Ayatollah Khamenei) ಹತ್ಯೆಯಾದರೂ ಇರಾನ್‌ (Iran) ಮಹಿಳೆಯರು ಇಸ್ಲಾಮಿಕ್‌ ಆಡಳಿತದ ವಿರುದ್ಧ ಪ್ರತಿಭಟನೆಯನ್ನು (Protest) ಈಗಲೂ ಜಾಗತಿಕ ವೇದಿಕೆಯಲ್ಲಿ ದಾಖಲಿಸುತ್ತಿದ್ದಾರೆ.

ಹೌದು. ಇರಾನ್‌ ಆಡಳಿತದ ವಿರುದ್ಧ ಈಗ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ರಾಷ್ಟ್ರೀಯ ಮಹಿಳಾ ಫುಟ್‌ಬಾಲ್‌ (Football) ತಂಡ ಮೌನ ಪ್ರತಿಭಟನೆ ನಡೆಸಿದೆ. ಏಷ್ಯಾ ಕಪ್‌ ಭಾಗವಾಗಿ ಇಂದು ಇರಾನ್‌ ಮತ್ತು ದಕ್ಷಿಣ ಕೊರಿಯಾ ನಡುವಿನ ಪಂದ್ಯ ನಿಗದಿಯಾಗಿತ್ತು.

ಈ ಪಂದ್ಯ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಸಾಧಾರಣವಾಗಿ ರಾಷ್ಟ್ರಗೀತೆಯನ್ನು ಮೊಳಗಿಸಿದಾಗ ತಂಡದ ಸದಸ್ಯರು ಬಾಯಿಯಲ್ಲಿ ಸಾಲನ್ನು ಹೇಳುತ್ತಾರೆ. ಆದರೆ ಇರಾನ್‌ ಮಹಿಳೆಯರು ಯಾವುದೇ ಸಾಲನ್ನು ಹೇಳುವ ಪ್ರಯತ್ನವನ್ನೇ ಮಾಡಲಿಲ್ಲ. ಕೆಲ ಆಟಗಾರ್ತಿಯರು ಬೇರೆ ಸದಸ್ಯರನ್ನು ನೋಡುತ್ತಿದ್ದರು.

ಆಟಗಾರ್ತಿಯರು ಮಾತ್ರವಲ್ಲ ಮುಖ್ಯ ತರಬೇತುದಾರ ಮಾರ್ಜಿಯೆ ಜಾಫಾರಿ ಮತ್ತು ಸಹಾಯಕ ಸಿಬ್ಬಂದಿ ಕೂಡ ಮೌನವಾಗಿದ್ದರು. ರಾಷ್ಟ್ರಗೀತೆಯನ್ನು ನುಡಿಸುತ್ತಿದ್ದಾಗ ಕೋಚ್‌ ಜಾಫಾರಿ ನಗುತ್ತಿದ್ದರು. ಈ ಸನ್ನೆ ತಂಡದ ನಿರ್ಧಾರಕ್ಕೆ ಬೆಂಬಲ ನೀಡಿದ ಸಂಕೇತವೆಂದು ಅರ್ಥೈಸಲಾಗುತ್ತಿದೆ.

ಭಾನುವಾರ ಮಾಧ್ಯಮಗಳು ಖಮೇನಿ ಸಾವಿನ ಬಗ್ಗೆ ಕೋಚ್‌ ಜಾಫಾರಿ ಮತ್ತು ನಾಯಕಿಗೆ ಪ್ರಶ್ನೆಯನ್ನು

ಕೇಳಿದ್ದವು. ಈ ಪ್ರಶ್ನೆಗೆ ಕೋಚ್‌, ನಿಮ್ಮ ಪ್ರಶ್ನೆ ಇಷ್ಟೇ ಎಂದು ನಾನು ಭಾವಿಸುತ್ತೇನೆ. ಕೇಳಿದ್ದಕ್ಕಾಗಿ ಧನ್ಯವಾದಗಳು. ಆಟದ ಮೇಲೆಯೇ ಗಮನ ಹರಿಸೋಣ ಎಂದು ಫಾರ್ಸಿ ಭಾಷೆಯಲ್ಲಿ ಉತ್ತರಿಸಿದ್ದರು.

ಆಟಗಾರ್ತಿಯರು ಮಾತ್ರವಲ್ಲ ಇರಾನ್‌ ತಂಡವನ್ನು ಬೆಂಬಲಕ್ಕೆ ಬಂದಿದ್ದ ಅಭಿಮಾನಿಗಳು ಹಾಲಿ ಆಡಳಿತವನ್ನು ವಿರೋಧಿಸಲು 1979ರ ಇಸ್ಲಾಮಿಕ್‌ ಕ್ರಾಂತಿಗೂ ಮೊದಲು ಬಳಕೆಯಲ್ಲಿದ್ದ ಸಿಂಹ ಮತ್ತು ಸೂರ್ಯ ಚಿತ್ರವನ್ನು ಹೊಂದಿರುವ ಕೆಂಪು, ಬಿಳಿ ಮತ್ತು ಹಸಿರು ಧ್ವಜವನ್ನು ಬೀಸುತ್ತಿದ್ದರು. ಇರಾನ್‌ನ ಮಹಿಳಾ ಚಳುವಳಿಯನ್ನು ಬೆಂಬಲಿಸಲು ಸಂಕೇತಿಕವಾಗಿ ಈ ಧ್ವಜವನ್ನು ಪ್ರದರ್ಶಿಸಲಾಗುತ್ತದೆ.

ಈ ಪಂದ್ಯವನ್ನು ದಕ್ಷಿಣ ಕೊರಿಯಾ 3-0 ಅಂತರದಿಂದ ಗೆದ್ದುಕೊಂಡಿತು. ಮಾರ್ಚ್ 5ರಂದು ನಡೆಯುವ ಮುಂದಿನ ಪಂದ್ಯದಲ್ಲಿ ಇರಾನ್‌ ಆಸ್ಟ್ರೇಲಿಯಾವನ್ನು ಎದುರಿಸಲಿದೆ.

ಖಮೇನಿ ಹತ್ಯೆಯ ವಿಚಾರ ತಿಳಿದು ಇರಾನ್‌ ಮಹಿಳೆಯರು ನಮಗೆ ಕೊನೆಗೂ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಿ ಸಂಭ್ರಮಿಸಿದ್ದರು. ಇರಾನ್‌ ಮಹಿಳೆಯರ ಸಂಭ್ರಮಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

Leave a Comment