ಬಂಟ್ವಾಳ : ತಾಲೂಕಿನ ಬ್ರಹ್ಮರಕೂಟ್ಲು ವಿನಲ್ಲಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿಯ ವತಿಯಿಂದ ಸಮಾನ ಮನಸ್ಕ ಸಂಘಟನೆಗಳಿಂದ ಸಾಮೂಹಿಕ ಧರಣಿ ಮಂಗಳವಾರ ಟೋಲ್ ಗೇಟ್ ಬಳಿ ನಡೆಯಿತು.
ಧರಣಿಯನ್ನು ಉದ್ಘಾಟಿಸಿದ ರಮಾನಾಥ ರೈ ಮಾತನಾಡಿ, ಅವೈಜ್ಞಾನಿಕ, ಮತ್ತು ಅಸಮರ್ಪಕ ವಾಗಿ ಕಾರ್ಯಾಚರಣೆ ನಡೆಸುತ್ತಿರುರುವ ಈ ಟೋಲ್ ಗೇಟ್ ಅನ್ನು ಕೂಡಲೇ ತೆರವು ಗೊಳಿಸಬೇಕು ಎಂದು ಆಗ್ರಹಿಸಿದರು.
ಬ್ರಹ್ಮರಕೊಟ್ಲು ಟೋಲ್ ಪ್ಲಾಜಾ ಕಳೆದ 13 ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಗಳ ವಿರುದ್ಧವಾಗಿ ಟೋಲ್ ಸಂಗ್ರಹಿಸುತ್ತಿದ್ದು ಇದು ಜನತೆಗೆ ಮಾಡುವ ಮಹಾ ಮೋಸ ಮತ್ತು ಹಗಲು ದರೋಡೆ ಆಗಿದೆ. ಇದರ ವಿರುದ್ಧ ಪಕ್ಷಾತೀತವಾಗಿ ಸಂಘಟಿತವಾಗಿ ಸಕ್ರಿಯ ಹೋರಾಟಗಳನ್ನು ನಿರಂತರ ಮಾಡುವ ಮೂಲಕ ಬ್ರಹ್ಮರ ಕೋಟ್ಲು ಟೋಲ್ ಅನ್ನು ಶಾಶ್ವತವಾಗಿ ರದ್ದುಗೊಳಿಸಬಹುದು. ಇಂದು ಧರಣಿ ಆರಂಭ ಅಷ್ಟೇ, ಮುಂದಿನ ದಿನಗಳಲ್ಲಿ ಈ ಬಗ್ಗೆ ಅವಿರತವಾಗಿ ಹೋರಾಟ ನಡೆಸಲಾಗುವುದು. ಪ್ರತೀ ಹಂತದಲ್ಲೂ ನೀವೆಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು.
ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಮುನೀರ್ ಕಾಟಿಪಳ್ಳ, ಎಂ.ಜಿ.ಹೆಗ್ಡೆ, ಸುಹೈಲ್ ಖಂದಕ್, ನ್ಯಾಯವಾದಿ ಸುರೇಶ್, ಅಶ್ವಿನಿ ಕುಮಾರ್ ರೈ, ಎಂ.ಎಸ್.ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸದಾಶಿವ ಪಡುಬಿದ್ರಿ, ಸುನಿಲ್ ಕುಮಾರ್ ಬಜಾಲ್, ಮಂಜುಳಾ ನಾಯಕ್, ಮಮತಾ ಗಟ್ಟಿ, ಎ.ರಾಮಣ್ಣ ವಿಟ್ಲ, ಬಿ.ಎಂ.ಭಟ್, ಹೇಮನಾಥ ಶೆಟ್ಟಿ ಕಾವು ಮೊದಲಾದವರು ಧರಣಿಯನ್ನು ದ್ದೇಶಿಸಿ ಮಾತನಾಡಿದರು.
ಧರಣಿಯ ಬಳಿಕ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ, ನಂತೂರು - ಬಿ ಸಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ರಹ್ಮರಕೂಟ್ಟು ಬಳಿ ಕಳೆದ 23 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಟೋಲ್ ಗೇಟ್ ಅನ್ನು ಮುಚ್ಚಬೇಕು, ಬಿ.ಒ.ಟಿ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಬಿ.ಸಿ. ರೋಡ್ ನಂತೂರು ಹೆದ್ದಾರಿಯಲ್ಲಿ 23 ವರ್ಷಗಳ ಕಾಲ ನಿರಂತರ ಸುಂಕ ಸಂಗ್ರಹಿಸಿದ ತರುವಾಯವೂ ಟೋಲ್ ಗೇಟ್ ಮುಚ್ಚದಿರುವುದು ಒಪ್ಪಲು ಸಾಧ್ಯವಿಲ್ಲದ ಸಂಗತಿ. ಯಾವುದೇ ಬೈಪಾಸ್, ಮೇಲ್ಸೇತುವೆ, ಅಂಡರ್ ಪಾಸ್ ಗಳಿಲ್ಲದ, ಸರಿಯಾದ ಸರ್ವೀಸ್ ರಸ್ತೆಗಳನ್ನು ಹೊಂದಿರದ, ಗುಣಮಟ್ಟದ ನಿರ್ವಹಣೆ ಇಲ್ಲದ ನಾಲ್ಕು ಪಥಗಳ ಸಾಮಾನ್ಯ ರಸ್ತೆಗೆ 23 ವರ್ಷಗಳಿಗೂ ದೀರ್ಘ ಕಾಲ ಟೋಲ್ ಸಂಗ್ರಹಿಸಿಯೂ "ಹೂಡಿದ ಹಣ ಮರು ಸಂಗ್ರಹ ಆಗಿಲ್ಲ'' ಎಂದರೆ ನಂಬಲು ಸಾಧ್ಯವಿಲ್ಲ. ಅದೂ ಅಲ್ಲದೆ ಬ್ರಹ್ಮರಕೂಟ್ಟು ಟೋಲ್ ಗೇಟ್ ಗೆ 32 ಕಿ ಮೀ ದೂರದ ತಲಪಾಡಿ, 44 ಕಿ.ಮೀ ದೂರದ ಹೆಜಮಾಡಿಯಲ್ಲಿ
ಎಳೆಂಟು ವರ್ಷಗಳ ಈಚೆಗೆ ಹೊಸ ಟೋಲ್ ಸಂಗ್ರಹ ಕೇಂದ್ರಗಳು ಕಾರ್ಯನಿರ್ವಹಿಸತೊಡಗಿವೆ. ಇದು ಎರಡು ಟೋಲ್ ಗೇಟ್ ಗಳ ನಡುವೆ ಇರಬೇಕಾದ ಕನಿಷ್ಟ ಅಂತರವಾದ 60 ಕಿ ಮೀ ನಿಯಮದ ನೇರ ಉಲ್ಲಂಘನೆ ಆಗಿದೆ. ಇಷ್ಟಲ್ಲದೆ, ಈಗ ಬ್ರಹ್ಮರಕೂಟ್ಟು ಟೋಲ್ ಗೇಟ್ ನಿಂದ ಬೆಂಗಳೂರು ಕಡೆಗೆ 31 ಕಿ ಮೀ ದೂರದ ಉಪ್ಪಿನಂಗಡಿಯ ವಳಾಲು ಎಂಬಲ್ಲಿ ಹಾಗೂ ಚಿಕ್ಕಮಗಳೂರು ಕಡೆಗಿನ ಹೆದ್ದಾರಿಯಲ್ಲಿ ಬೆಳ್ತಂಗಡಿ ತಾಲೂಕಿನ ಪಣಕಜೆ ಎಂಬಲ್ಲಿ 28 ಕಿ ಮೀ ದೂರದಲ್ಲಿ, ಸಾಣೂರು ಬಿಕರ್ನಕಟ್ಟೆ ಹೆದ್ದಾರಿಯಲ್ಲಿ ಗಂಜಿಮಠ ಎಂಬಲ್ಲಿ 32 ಕೀ ಮೀ ದೂರದಲ್ಲಿ ಹೀಗೆ ಹೊಸದಾಗಿ ಮೂರು ಟೋಲ್ ಸಂಗ್ರಹ ಕೇಂದ್ರಗಳು ನಿರ್ಮಾಣ ಹಂತದಲ್ಲಿದೆ. ಇದೆಲ್ಲವೂ ಅಂತರದ ನಿಯಮಗಳ ಉಲ್ಲಂಘನೆ ಮಾತ್ರ ಅಲ್ಲದೆ, ಈ ಭಾಗದಲ್ಲಿ ಹೆದ್ದಾರಿ ಪ್ರಯಾಣವೆ ತೀರಾ ದುಬಾರಿಯಾಗಿ ಅಸಹನೀಯ ಸಂದರ್ಭ ಸೃಷ್ಟಿಯಾಗಲಿದೆ. ಇಂತಹ ಸಂದರ್ಭದಲ್ಲಿ ಬ್ರಹ್ಮರಕೊಟ್ಟು ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಮುಂದುವರಿಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯ ಅಲ್ಲ.
ಅಂತರದ ನಿಯಮಗಳನ್ನು ಉಲ್ಲಂಘಿಸಿ ಜಿಲ್ಲೆಯ ಹೆದ್ದಾರಿಗಳಲ್ಲಿ ಹಲವಾರು ಟೋಲ್ ಗೇಟ್ ಗಳನ್ನು ಸ್ಥಾಪಿಸುತ್ತಿರುವುದು ಹೆದ್ದಾರಿ ಬಳಕೆದಾರರಲ್ಲಿ ತೀವ್ರ ಅತೃಪ್ತಿ, ಆಕ್ಷೇಪಗಳಿಗೆ ಕಾರಣವಾಗುತ್ತಿದೆ ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪುನರ್ ಪರಿಶೀಲನೆ ನಡೆಸಬೇಕು. ನಿಯಮಗಳನ್ನು ನ್ಯಾಯಯುತವಾಗಿ ಅನುಷ್ಠಾನಗೊಳಿಸಬೇಕು.
ಬ್ರಹ್ಮರಕೂಟ್ಟು ಟೋಲ್ ಗೇಟ್ ನಲ್ಲಿ 23 ವರ್ಷಗಳ ದೀರ್ಘ ಅವರಿಗೆ ಸುಂಕ ಸಂಗ್ರಹ ನಡೆಸಲಾಗಿರುವುವುದು, ತೀವ್ರ ವಾಹನ ದಟ್ಟಣೆಯ ಈ ರಸ್ತೆಯಲ್ಲಿ ಅಗಾಧ ಮೊತ್ತದ ಹಣ ಮರು ಸಂಗ್ರಹ ಆಗಿರುವುದು ಸೇರಿದಂತೆ ಯಾವುದೇ ಆಯಾಮದಲ್ಲಿ ನೋಡಿದರೂ ಬ್ರಹ್ಮರಕೂಟ್ಟು ಟೋಲ್ ಗೇಟ್ ತೆರವುಗೊಳಿಸುವುದು ನ್ಯಾಯಯುತವಾಗಿದೆ. ಈ ಹಿನ್ನಲೆಯಲ್ಲಿ ತಕ್ಷಣದಿಂದಲೆ ಬ್ರಹ್ಮರಕೂಟ್ಟು ಟೋಲ್ ಗೇಟ್ ಮುಚ್ಚಲು ಕ್ರಮ ಜರುಗಿಸಬೇಕು ಎಂಬ ಬೇಡಿಕೆಯನ್ನು ಸಾಮೂಹಿಕ ಧರಣಿಯ ಮೂಲಕ ನಿಮ್ಮ ಮುಂದೆ ಇಡುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ವಿನಂತಿಸುತ್ತಿದ್ದೇವೆ. ಬ್ರಹ್ಮರಕೂಟ್ಟು ಟೋಲ್ ಗೇಟ್ ಮುಚ್ಚಲು ತೀರ್ಮಾನಿನದಿದ್ದಲ್ಲಿ ಮುಂದಕ್ಕೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಈ ಮೂಲಕ ನಿಮ್ಮ ಗಮನಕ್ಕೆ ತರುತ್ತಿದ್ದೇವೆ ಎಂಬುದಾಗಿ ಮನವಿ ಸಲ್ಲಿಸಲಾಯಿತು.ಸಮಿತಿಯ ಸಂಚಾಲಕರಾದ ಬಿ.ಶೇಖರ್ ಸ್ವಾಗತಿಸಿ, ಮೋಹನ್ ಶೆಟ್ಟಿ ವಂದಿಸಿದರು.












