ಬಂಟ್ವಾಳ ತಾಲೂಕು ಬಂಟರ ಸಂಘದ ಮಹಿಳಾ ವಿಭಾಗದ ವತಿಯಿಂದ ಮಂಗಳೂರು ಎ.ಜೆ.ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್, ಎ.ಜೆ. ವೈದ್ಯಕೀಯ ಮಹಾವಿದ್ಯಾಲಯ, ಮಂಗಳೂರು ಎಂಐಒ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಎನ್.ಜಿ.ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ಬೃಹತ್ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಕ್ಯಾನ್ಸರ್ ಕುರಿತು ಜಾಗೃತಿ- ಅರಿವು ಹಾಗೂ ಉಚಿತ ಕನ್ನಡಕ ವಿತರಣಾ ಸಮಾರಂಭ ರವಿವಾರ ತುಂಬೆ ವಳವೂರಿನಲ್ಲಿರುವ ಬಂಟವಾಳದ ಬಂಟರ ಭವನದಲ್ಲಿ ನಡೆಯಿತು.
ಎಂಐಒ ಆಸ್ಪತ್ರೆಯ ಕ್ಯಾನ್ಸರ್ ತಜ್ಞೆ ಡಾ.ದಿವ್ಯಜ್ಯೋತಿ ಅವರು ಶಿಬಿರವನ್ನು ಉದ್ಘಾಟಿಸಿ ಸ್ತನ ಕ್ಯಾನ್ಸರ್ ಕುರಿತು ಮಾಹಿತಿ ನೀಡಿದರು. ಎಂಐಒ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ, ಹಿರಿಯ ಕ್ಯಾನ್ಸರ್ ತಜ್ಞ ಡಾ.ಸುರೇಶ್ ರಾವ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕ್ಯಾನ್ಸರ್ ಖಾಯಿಲೆಯು ದೇಶಕ್ಕೆ ಸವಾಲಾಗುತ್ತಿದ್ದು, ದೇಶದಲ್ಲಿ ಪ್ರತಿವರ್ಷ 9 ಲಕ್ಷದಷ್ಟು ಮಂದಿ ಕ್ಯಾನ್ಸರ್ ಖಾಯಿಲೆಯಿಂದ ಸಾಯುತ್ತಿದ್ದಾರೆ. ಅದರ ಔಷಧಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಿರುವುದರಿಂದ ಚಿಕಿತ್ಸಾ ವೆಚ್ಚವೂ ದುಬಾರಿಯಾಗಿದೆ. ವೈದ್ಯರನ್ನು ಸಂಪರ್ಕಿಸುವ ಸಂದರ್ಭದಲ್ಲಿ ಖಾಯಿಲೆಯು 3-4 ಹಂತಗಳನ್ನು ದಾಟಿರುವುದರಿಂದ ಕೆಲವು ಸಂದರ್ಭಗಳಲ್ಲಿ ಗುಣಮುಖ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಔಷಧ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಸ್ವಾವಲಂಬನೆ ಸಾಧಿಸಬೇಕಿದ್ದು, ಖಾಯಿಲೆಯ ಅರಿವು ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಗನ್ನಾಥ
ಚೌಟ ಬದಿಗುಡ್ಡೆ ಮಾತನಾಡಿ, ಪೋಷಕರು ಮಕ್ಕಳಿಗೆ ಬಾಲ್ಯದಲ್ಲೇ ಆರೋಗ್ಯದ ಕಾಳಜಿ ಮೂಡಿಸುವುದು ಅತಿ ಅಗತ್ಯವಾಗಿದ್ದು, ವಯಸ್ಸು ದಾಟಿದ ಬಳಿಕ ಖಾಯಿಲೆ ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ಪ್ರತಿ ರೋಗಿಯೂ ವೈದ್ಯರಲ್ಲಿ ನಾವು ದೇವರನ್ನು ಕಾಣುತ್ತಿದ್ದು, ವೈದ್ಯರ ಕುರಿತು ನಂಬಿಕೆಯೂ ಅತಿ ಅಗತ್ಯವಾಗಿದೆ ಎಂದರು.
ಎ.ಜೆ.ಆಸ್ಪತ್ರೆಯ ಕಮ್ಯೂನಿಟಿ ಮೆಡಿಸನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ವಾಮನ್ ನಾಯಕ್ ಅವರು ಆರೋಗ್ಯ ಮಾಹಿತಿ ನೀಡಿದರು. ತಾಲೂಕು ಬಂಟರ ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತ ಪಿ.ರೈ ಪ್ರಸ್ತಾವನೆಗೈದರು.
ವೇದಿಕೆಯಲ್ಲಿ ಎ.ಜೆ.ಆಸ್ಪತ್ರೆಯ ವೈದ್ಯೆಯರಾದ ಡಾ.ಸಂಸ್ಕೃತಿ ಶೆಟ್ಟಿ, ಡಾ.ಅಲಕಾ ಭಟ್, ಯುವವಿಭಾಗದ ಅಧ್ಯಕ್ಷ ಗೋಕುಲ್ ಭಂಡಾರಿ, ಮಹಿಳಾ ಸಂಘದ ಜ್ಯೋತಿ ಎನ್.ಹೆಗ್ಡೆ, ಕೋಶಾಧಿಕಾರಿ ರೂಪಾ ಎಲ್.ಶೆಟ್ಟಿ, ಕಾರ್ಯದರ್ಶಿ ಮಂದಾರತಿ ಶೆಟ್ಟಿ
ಜತೆ ಕಾರ್ಯದರ್ಶಿ ಸುಜಾತ ಭಂಡಾರಿ ಉಪಸ್ಥಿತರಿದ್ದರು. ಸುಮಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.












