ರಿಯಾದ್(ಸೌದಿ ಅರೇಬಿಯಾ): ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಮೇಲೆ ಎರಡು ಡ್ರೋಣ್‌ಗಳು ಅಪ್ಪಳಿಸಿದ್ದು, ಸೀಮಿತ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಅಮೆರಿಕ ಪ್ರಜೆಗಳಿಗೆ ತುರ್ತು ಸೂಚನೆ: ಮಧ್ಯ ಪ್ರಾಚ್ಯದಲ್ಲಿ ಭದ್ರತಾ ಅಪಾಯವಿರುವುದರಿಂದ ಅಮೆರಿಕ ತನ್ನ ಪ್ರಜೆಗಳಿಗೆ ತುರ್ತು ಸಂದೇಶ ರವಾನಿಸಿದೆ. ಬಹ್ರೈನ್, ಈಜಿಪ್ಟ್, ಇರಾನ್, ಇರಾಕ್, ಇಸ್ರೇಲ್(ವೆಸ್ಟ್ ಬ್ಯಾಂಕ್, ಗಾಜಾ), ಜೋರ್ಡನ್, ಕುವೈತ್, ಲೆಬನಾನ್, ಒಮಾನ್, ಕತಾರ್, ಸೌದಿ ಅರೇಬಿಯಾ, ಸಿರಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯೆಮೆನ್ ಸೇರಿ 12 ದೇಶಗಳನ್ನು ತಕ್ಷಣ ತೊರೆಯುವಂತೆ ಸೂಚನೆ ನೀಡಿದೆ.
ಯುದ್ಧ ಇನ್ನೂ 4-5 ವಾರ ನಡೆಯಲಿದೆ - ಟ್ರಂಪ್: ಇರಾನ್ ವಿರುದ್ಧದ ಯುದ್ಧ ಇನ್ನೂ 4ರಿಂದ 5 ವಾರ ನಡೆಯುವ ಸಾಧ್ಯತೆ ಇದೆ. ಆದರೆ ಅದಕ್ಕೂ ದೀರ್ಘಾವಧಿಯ ಕದನಕ್ಕೆ ನಾವು ಸಿದ್ಧರಾಗಿದ್ದೇವೆ ಎಂದು ಟ್ರಂಪ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ವಿಡಿಯೋ ಸಂದೇಶದಲ್ಲಿ ಮಾತನಾಡಿರುವ ಟ್ರಂಪ್, ಯುದ್ಧ ಮುಗಿಯುವ ಮುನ್ನ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕದ ಯೋಧರು ಸಾವನ್ನಪ್ಪುವ ಸಾಧ್ಯತೆ ಇದೆ. ಇರಾನ್‌ನ ಕ್ಷಿಪಣಿ ಸಾಮರ್ಥ್ಯ, ಅದರ ಪರಮಾಣು ಯೋಜನೆಗಳು ಮತ್ತು ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ತೊಡೆದುಹಾಕಲು ಅಮೆರಿಕ ಇರಾನ್ ವಿರುದ್ಧ
ತನ್ನ ಮಿಲಿಟರಿ ಕಾರ್ಯಾಚರಣೆ ಮುಂದುವರಿಸುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಫೆಬ್ರವರಿ 28ರಂದು ಇರಾನಿನ ಹಲವು ನಗರಗಳಲ್ಲಿ ಅಮೆರಿಕ ಮತ್ತು ಇಸ್ರೇಲ್ ಜಂಟಿ ವಾಯುದಾಳಿ ನಡೆಸಿತ್ತು. ಈ ದಾಳಿಯಲ್ಲಿ ಇರಾನ್‌ನ ಮಿಲಿಟರಿ ಕಮಾಂಡ್ ಕೇಂದ್ರಗಳು, ವಾಯು ರಕ್ಷಣಾ ವ್ಯವಸ್ಥೆಗಳು, ಕ್ಷಿಪಣಿ ತಾಣಗಳು ಮತ್ತು ಪ್ರಮುಖ ಆಡಳಿತ ಮೂಲಸೌಕರ್ಯಗಳನ್ನು ಪ್ರಮುಖವಾಗಿ ಗುರಿಯಾಗಿಸಿಕೊಳ್ಳಲಾಗಿದೆ.
ಇದೇ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಮತ್ತು ಹಿರಿಯ ಮಿಲಿಟರಿ ಮತ್ತು ಭದ್ರತಾ ಮುಖ್ಯಸ್ಥರನ್ನು ಹತ್ಯೆ ಮಾಡಲಾಗಿದೆ. ರಾಜಧಾನಿ ಟೆಹ್ರಾನ್ ಮತ್ತು ಇತರ ಪ್ರಮುಖ ನಗರಗಳಲ್ಲಿ ದೊಡ್ಡ ಸ್ಫೋಟಗಳು ಸಂಭವಿಸಿರುವ ಕುರಿತು ವರದಿಯಾಗಿವೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್, ಇಸ್ರೇಲ್, ಬಹ್ರೇನ್, ಕುವೈತ್, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಜೋರ್ಡಾನ್ ಸೇರಿದಂತೆ ಪ್ರದೇಶದಾದ್ಯಂತದ ಅಮೆರಿಕದ ಆಸ್ತಿಗಳು ಮತ್ತು ಅದರ ಮಿತ್ರರಾಷ್ಟ್ರಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುತ್ತಿದ್ದು, ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಈ ಬೆಳವಣಿಗೆ ಇದೀಗ ಮಧ್ಯಪ್ರಾಚ್ಯದಲ್ಲಿ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದ್ದು, ಸಾಮಾನ್ಯ ನಾಗರಿಕರು ಮತ್ತು ವಲಸಿಗರು ಭಾರೀ ಅಪಾಯ ಎದುರಿಸುತ್ತಿದ್ದಾರೆ.












